ಬೆಳ್ತಂಗಡಿ: ಇಲ್ಲಿನ ಸಂತೆಕಟ್ಟೆ ಬಳಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ನಿವೃತ್ತ ಬ್ಯಾಂಕ್ ಮೆನೇಜರ್, ಸಂಘಟಕ ಹೇರಾಜೆ ಶೇಖರ ಬಂಗೇರ(66) ಅವರು ದಾರುಣವಾಗಿ ಸಾವನ್ನಪ್ಪಿದ ಘಟನೆ ಗುರುವಾರ ರಾತ್ರಿವೇಳೆ ನಡೆದಿದೆ. ಶೇಖರ್ ಬಂಗೇರ ಅವರು ಸಂತೆಕಟ್ಟೆಯ ಹೊಟೇಲ್ ನಿಂದ ಅಗತ್ಯ ಆಹಾರ ಪಾರ್ಸೆಲ್ ಪಡೆದುಕೊಂಡು ರಸ್ತೆ ಬದಿಗೆ ಬರುತ್ತಿದ್ದಂತೆ ಅತಿವೇಗದಿಂದ ಬಂದ ದ್ವಿಚಕ್ರವಾಹನವೊಂದು ಅವರಿಗೆ ನೇರವಾಗಿ ಡಿಕ್ಕಿಯಾಗಿದೆ.
ಡಿಕ್ಕಿಯ ರಭಸಕ್ಕೆ ರಸ್ತೆಗೆ ಎಸೆಯಲ್ಪಟ್ಟ ಅವರು ಗಂಭೀರ ಗಾಯಗೊಂಡರು. ಕೂಡಲೇ ಅವರನ್ನು ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋದರೂ, ದಾರಿ ಮಧ್ಯೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಅಪಘಾತದಿಂದ ದ್ವಿಚಕ್ರ ವಾಹನದಲ್ಲಿದ್ದ ಸವಾರೆ ಗೇರುಕಟ್ಟೆಯ ಅನುಷಾ ಎಂಬವರಿಗೆ ಗಂಭೀರ ಗಾಯವಾಗಿದೆ ಎಂದು ತಿಳಿದುಬಂದಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶೇಖರ ಬಂಗೇರ ಅವರು ಬೆಳ್ತಂಗಡಿ ತಾಲೂಕಿನ ಪ್ರತಿಷ್ಠಿತ ಹೇರಾಜೆ ಮನೆತನದವರಾಗಿದ್ದಾರೆ. ಈ ಹಿಂದಿನ ವಿಜಯಾ ಬ್ಯಾಂಕ್ ನಲ್ಲಿ ಅವರು ಬೇರೆ ಬೇರೆ ಹುದ್ದೆ ನಿರ್ವಹಿಸಿ ಪ್ರಸ್ತುತ ನಿವೃತ್ತರಾಗಿದ್ದು ವಿಶ್ರಾಂತ ಜೀವನ ನಡೆಸುತ್ತಿದ್ದರು.
ಉತ್ತಮ ಸಂಘಟಕರೂ ಆಗಿದ್ದ ಅವರು ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದಲ್ಲಿ ಪದಾಧಿಕಾರಿಯಾಗಿ, ಲಾಯಿಲ ರಾಘವೇಂದ್ರ ಸ್ವಾಮಿ ಪ್ರತಿಷ್ಠಾನದ ಮಾಜಿ ಅಧ್ಯಕ್ಷರಾಗಿ ಸೇರಿದಂತೆ ವಿವಿಧ ಸಂಘ- ಸಂಸ್ಥೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಇವರು ನಿವೃತ್ತ ಎಸ್.ಪಿ ಪೀತಾಂಬರ ಹೇರಾಜೆ ಅವರ ಸಹೋದರ ಹಾಗೂ ಕೆಪಿಸಿಸಿ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರ ಮಾವ.