ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದಿರುವ ಉಗ್ರರ ದಾಳಿ ಪೂರ್ವಯೋಜಿತ ಸಂಚು. ಇಲ್ಲಿ ಅಮಾಯಕರಾಗಿರುವ ಪ್ರವಾಸಿಗರನ್ನು ಪ್ರಾಣಹತ್ಯೆ ಮಾಡಿರುವುದು ಅತ್ಯಂತ ಖಂಡನೀಯ. ಘಟನೆಯಲ್ಲಿ ಸುಮಾರು 28 ಜನ ಮೃತಪಟ್ಟಿರುವ ಭೀಕರವಾದ ಉಗ್ರರ ಈ ಘಟನೆಯನ್ನು ಬಲವಾಗಿ ಖಂಡಿಸುತ್ತೇನೆ. ಘಟನೆಯ ಬಗ್ಗೆ ಉನ್ನತ ತನಿಖೆ ನಡೆದು ಈ ಅಪರಾಧಿಗಳನ್ನು ಸರಕಾರ ಆದಷ್ಟು ಬೇಗ ಗಲ್ಲಿಗೇರಿಸಲಿ ಎಂದು ದ.ಕ ಜಿಲ್ಲಾ ವಕ್ಫ್ ಸಲಹಾ ಸಮಿತಿ ಉಪಾಧ್ಯಕ್ಷ, ಯುವ ಉದ್ಯಮಿ ಡಾ. ಎ.ಕೆ ಜಮಾಲ್ ಆಗ್ರಹಿಸಿದ್ದಾರೆ.
ಈ ಘಟನೆ ನಡೆದಾಗ ಕನ್ನಡಿಗರೂ ಸೇರಿದಂತೆ ಅನೇಕ ಮಂದಿ ಸಂತ್ರಸ್ತರು ಹಾಗೂ ಗಾಯಾಳುಗಳನ್ನು ಕಾಶ್ಮೀರಿ ಮುಸಲ್ಮಾನರು ತಮ್ಮ ಬೆನ್ನಮೇಲೆ ಹಾಕಿಕೊಂಡು ರಕ್ಷಿಸುವ ದೃಷ್ಯ ಕಾಣಲು ಸಾಧ್ಯವಾಯಿತು. ಬಿಸ್ಮಿಲ್ಲಾ ಎಂದೇಳುತ್ತಾ ಅವರು ನಮ್ಮನ್ನು ರಕ್ಷಿಸಿದರು ಎಂದೂ ರಕ್ಷಿಸಲ್ಪಟ್ಟವರು ಮಾತನಾಡುವುದನ್ನು ಕೇಳಿ, ಈ ದೇಶದಲ್ಲಿ ಧರ್ಮಸಹಿಷ್ಣುತೆ ಇನ್ನೂ ಇದೆ. ಅದು ಯಾವತ್ತೂ ದೇಶದ ಅಸ್ಮಿತೆಯಾಗಿ ಇರುತ್ತದೆ ಎಂದು ಸಮಾಧಾನ ಪಡುವಂತಾಯಿತು.
ಇದೀಗ ಭಯೋತ್ಪಾದಕರ ಬಗ್ಗೆ ಅವರ ಧರ್ಮ ನೋಡದೆ ಅವರನ್ನು ಕೇಂದ್ರ ಭದ್ರತಾ ಮಂಡಳಿ ಹೆಡೆಮುರಿ ಕಟ್ಟಬೇಕು. ದೇಶೀಯ ಮಟ್ಟದಲ್ಲಿ ಇದಕ್ಕೆ ಪ್ರತೀಕಾರವನ್ನೂ ಮಾಡಬೇಕು. ಭಯೋತ್ಪಾದನೆಗೆ ಜಾತಿ ಧರ್ಮದ ಲೇಪ ಕಟ್ಟದೆ ಭಯೋತ್ಪಾದನೆಯಾಗಿಯೇ ಪರಿಗಣಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಜೊತೆಗೆ ಇಂತಹಾ ಪ್ರವಾಸಿ ತಾಣಗಳಲ್ಲಿ ಕೇಂದ್ರ ಸರಕಾರ ಸೂಕಭದ್ರತೆ ಒದಗಿಸಬೇಕು, ಮೃತರ ಕುಟುಂಬಗಳಿಗೆ ಪರಿಹಾರ ನೀಡಬೇಕು. ಭಯೋತ್ಪಾದಕರನ್ನು ನಿರ್ಮೂಲನೆಗೊಳಿಸುವ ಜೊತೆಗೆ ದೇಶದ ಜನರಿಗೆ ಭದ್ರತೆ ನೀಡುವ ಕಾರ್ಯವನ್ನು ಸರಕಾರ ಸಮರ್ಥವಾಗಿ ನಿರ್ವಹಿಸಬೇಕು ಎಂದು ಆಗ್ರಹಿಸಿದ್ದಾರೆ.