Posts

ಮುಂಡತ್ತೋಡಿ ಸರಕಾರಿ ಶಾಲೆಯಲ್ಲಿ ಕೊಡುಗೆಗಳ ಹಸ್ತಾಂತರ ||ಊರಿನ ಅಭಿವೃದ್ದಿಯಲ್ಲಿ ನಾವೇ ತೊಡಗಿಸಿಕೊಳ್ಳಬೇಕು ಎಂಬುದನ್ನು ಬದುಕು ಕಟ್ಟೋಣ ತಂಡ ನಿರೂಪಿಸಿದೆ; ಶರತ್‌ಕೃಷ್ಣ ಪಡ್ವೆಟ್ನಾಯ

2 min read


ಬೆಳ್ತಂಗಡಿ: ನಮ್ಮ ಸಂಸ್ಕೃತಿ, ಆಚಾರ, ವಿಚಾರ ಗಳನ್ನು ಬಳಸಿಕೊಂಡು ಊರವರ ಸಹಕಾರದಿಂದ ಸಮಾಜ ಮುಖಿ ಕಾರ್ಯಕ್ರಮಗಳಲ್ಲಿ ಕೈ ಜೋಡಿಸಬೇಕು. ಪ್ರತಿಯೊಂದಕ್ಕೂ ಸರಕಾರದ ಸವಲತ್ತಿಗಾಗಿ ಕಾಯದೆ ನಮ್ಮ ನಮ್ಮ ಊರಿನ ಅಭಿವೃದ್ಧಿಯಲ್ಲಿ ನಾವೇ ತೊಡಗಿಸಿಕೊಂಡಾಗ ಊರು ಹಾಗೂ ಇಂತಹಾ ಶಾಲೆಗಳು ಪ್ರಗತಿಯಾಗಲು ಸಾಧ್ಯ ಎಂದು ಉಜಿರೆ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡ್ವೆಟ್ನಾಯ ಹೇಳಿದರು.


ಬದುಕು ಕಟ್ಟೋಣ ಬನ್ನಿ ತಂಡ, ಬೆಳ್ತಂಗಡಿ ರೋಟರಿ ಕ್ಲಬ್, ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ವತಿಯಿಂದ 'ನಮ್ಮೂರ ಕನ್ನಡ ಶಾಲೆ ನಮ್ಮ ಹೆಮ್ಮೆ' ಧ್ಯೇಯದಡಿ ಉಜಿರೆ ಗ್ರಾಮದ ಮುಂಡತ್ತೋಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಭಿವೃದ್ಧಿ ಹೊಂದಿ ಕೊಡುಗೆಗಳ ಹಸ್ತಾಂತರಿಸಿ ಅವರು ಮಾತನಾಡಿದರು.

ಬೆಳ್ತಂಗಡಿ ಪತ್ರಕರ್ತರ ಸಂಘದ ಅಧ್ಯಕ್ಷ ಗಣೇಶ್ ಬಿ. ಶಿರ್ಲಾಲು ಮಾತನಾಡಿ, ಮೋಹನ್ ಕುಮಾರ್ ಮತ್ತು ರಾಜೇಶ್ ಪೈ ಅವರು ಜೋಡೆತ್ತುಗಳಂತೆ ನಾಯಕತ್ವ ನೀಡುತ್ತಿರುವ ಬದುಕು ಕಟ್ಟೋಣ ಬನ್ನಿ ತಂಡ ಇಲ್ಲಿ ಮಹತ್ ಸಾಧನೆ ಮಾಡಿದೆ ಎಂದರು.


ಬದುಕು ಕಟ್ಟೋಣ ತಂಡದ ಸಂಚಾಲಕ ಮೋಹನ್ ಕುಮಾರ್ ಮಾತನಾಡಿ, ಉದ್ಯಮ ಮತ್ತು ಸಮಾಜ ಸೇವೆ ಎರಡನ್ನೂ ಒಟ್ಟಿಗೆ ಮಾಡಿಕೊಂಡ ಬಂದವನು. ಆ ನಿಟ್ಟನಲ್ಲಿ ರಾಜೇಶ್ ಪೈ‌ ಅವರ ಮುಂದಾಳತ್ವದಲ್ಲಿ ನಮ್ಮ ತಂಡ ಈ ಸರಕಾರಿ‌ ಶಾಲೆಯ ಅಭಿವೃಧ್ಧಿ ಯ ಕಾರ್ಯ ಅಲ್ಪ ಅವಧಿಯಲ್ಲೇ ಮಾಡಿದೆ. ಇನ್ನೂ ಯೋಜನೆ ಬಾಕಿ ಇದ್ದು ಅದನ್ನೂ ಪೂರೈಸುವವರಿದ್ದೇವೆ. ಸ್ಥಳೀಯ ಅರ್ಹರು ವಾರಕ್ಕೊಮ್ಮೆಯಾದರೂ ಇಲ್ಲಿಗೆ ಬಂದು ಮಕ್ಕಳ ಏಳಿಗೆಯ ದೃಷ್ಟಿಯಿಂದ ಇಲ್ಲಿ ತೊಡಗಿಸಿಕೊಳ್ಳಬೇಕು‌ ಎಂದರು.

ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷೆ ವಿ.ಮನೋರಮಾ ಭಟ್ ಮಾತನಾಡಿ, ಸಮುದಾಯಕ್ಕೆ ಎಷ್ಟು ಶಕ್ತಿ ಇದೆ ಎಂದು ಈ ಕಾರ್ಯಕ್ರಮದ ಮೂಲಕ ತಿಳಿಯಬಹುದು. ಸಂಘ ಸಂಸ್ಥೆಗಳು ನೀಡುವ ನೆರವು ಊರುಗೋಲು ಮಾತ್ರ.‌ನಡೆಯುವ ಕೆಲಸ ವಿದ್ಯಾರ್ಥಿಗಳು ಮಾಡಬೇಕು. ಶಾಲಾ ಸಮಿತಿಯಬರ ಇಚ್ಛಾ ಶಕ್ತಿಯಂತೆ ಬದುಕು ಕಟ್ಟೋಣ ತಂಡ ದೇವಾಲಯದ ಜೀರ್ಣೋದ್ಧಾರದ ‌ರೀತಿಯಲ್ಲಿ ಈ ಕಾರ್ಯವನ್ನು ಮಾಡಿದ್ದಾರೆ. ಅದಕ್ಕೆ ರೋಟರಿ ಕೈ ಜೋಡಿಸಿದೆ ಎಂದರು. 

ಉಜಿರೆ ಗ್ರಾ.ಪಂ. ಅಧ್ಯಕ್ಷೆ ಪುಷ್ಪಾ ಆರ್.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದು, ಉಜಿರೆಯ ಯಾವುದೇ ಉತ್ಸವಗಳು ಅಚ್ಚುಕಟ್ಟಾಗಿ ನಡೆಯಬೇಕಾದರೆ ಅದಕ್ಕೆ ಮೋಹನ್ ಕುಮಾರ್ ಅವರ ಸಹಯೋಗ ಬೇಕಾಗುತ್ತದೆ. ಅವರು ಯಾವತ್ತೂ ಕ್ರಿಯಾತ್ಮಕವಾಗಿ ತೊಡಗಿಸಿಕೊಳ್ಳುವವರು ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ ಎಚ್.ಎಸ್. ಶುಭಕೋರಿದರು.

ವೇದಿಕೆಯಲ್ಲಿ ಬದುಕು ಕಟ್ಟೋಣ ತಂಡದ ಸಂಚಾಲಕ ರಾಜೇಶ್ ಪೈ, ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷೆ ರೇವತಿ,‌ ಗ್ರಾ.ಪಂ ಉಪಾಧ್ಯಕ್ಷ ರವಿಕುಮಾರ್ ಬರಮೇಲು ಉಪಸ್ಥಿತರಿದ್ದರು. ಉಜಿರೆ ಗ್ರಾ.ಪಂ. ಪಿಡಿಒ ಪ್ರಕಾಶ್ ಶೆಟ್ಟಿ ನೊಚ್ಚ ಪ್ರಾಸ್ತಾವಿಸಿ ಸ್ವಾಗತಿಸಿದರು.

ಗ್ರಾ.ಪಂ ಸದಸ್ಯರಾದ ಮಂಜುನಾಥ್, ಗುರುಪ್ರಸಾದ್ ಕೋಟ್ಯಾನ್ ಮತ್ತು ಲಲಿತಾ, ಅತಿಥಿ ಶಿಕ್ಷಕಿ ಅನಿತಾ, ಗೌರವ ಶಿಕ್ಷಕಿ ಲೀಲಾವತಿ, ಜ್ಞಾನದೀಪ ಶಿಕ್ಷಕಿ ಪವಿತ್ರಾ, ಶಾಲಾ ಎಸ್.ಡಿ.ಎಂ. ಉಪಾಧ್ಯಕ್ಷ ಉಮೇಶ್ ಗೌಡ, ಸದಸ್ಯರಾದ ಧರ್ಮೇಂದ್ರ, ಶ್ರೀನಿವಾಸ್ ಭಟ್, ಚೆಲುವಯ್ಯ, ಹರೀಶ್ ನೋಂಡೆಲ್, ವೆಂಕಪ್ಪ, ಸಿಆರ್‌ಪಿಗಳಾದ ಚೇತನಾ ಮತ್ತು ಪ್ರತಿಮಾ, ಶಿಕ್ಷಣ ಸಂಯೋಜಕ ಸುಭಾಷ್ ಜಾದವ್ ಮತ್ತಿತರರು ಉಪಸ್ಥಿತರಿದ್ದರು.

ತಿಮ್ಮಯ್ಯ ನಾಯ್ಕ ಮತ್ತು ಅಶ್ರಫ್ ಆಲಿಕುಂಞಿ ಮುಂಡಾಜೆ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಮುಖ್ಯ ಶಿಕ್ಷಕ ರಮೇಶ್ ವಿ.ಎಸ್ ವಂದಿಸಿದರು. ಶಿಕ್ಷಕಿ ಲಲಿತಾ ಬಹುಮಾನಗಳ ಪಟ್ಟಿ ವಾಚಿಸಿದರು. 2008 ರಲ್ಲಿ ಶಾಲೆಗೆ ಜಾಗ ಮಂಜೂರು ಮಾಡಿದ ಆಗಿನ ತಹಶಿಲ್ದಾರ್ ಆಗಿದ್ದ ಕೆ.ಟಿ ಕಾವೇರಿಯಪ್ಪ, ಇದಕ್ಕಾಗಿ ಹೋರಾಟ ನಡೆಸಿದ್ದ ಸಿ.ಕೆ ಚಂದ್ರಕಲಾ ಮತ್ತು ಪದ್ಮಾವತಿ ಅವರನ್ನು ಗುರುತಿಸಲಾಯಿತು. ಸಭಾ ಕಾರ್ಯಕ್ರಮದ ಬಳಿಕ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಉಜಿರೆ ಗ್ರಾಮದ ಮುಂಡತ್ತೋಡಿ ಸರಕಾರಿ ಶಾಲೆಯಲ್ಲಿ ಒಂದರಿಂದ ಏಳನೇ ತರಗತಿವರೆಗೆ 61 ಮಕ್ಕಳಿದ್ದಾರೆ. ಶಾಲೆಯ ಕಟ್ಟಡಗಳ ದುರಸ್ತಿ, ವರಾಂಡಕ್ಕೆ ಟೈಲ್ಸ್ ನೆಲಹಾಸು, ಗೋಡೆಗಳಿಗೆ ವೃಣರಂಜಿತ ಚಿತ್ರಗಳು, ನಲಿ-ಕಲಿ ಮಕ್ಕಳಿಗೆ ಅವಶ್ಯಕ ಪೀಠೋಪಕರಣ,ಕಚೇರಿಗೆ ಪೀಠೋಪಕರಣಗಳು, ಸೂಕ್ತ ಆಟದ ಮೈದಾನ, ಕ್ರೀಡಾ ಸಲಕರಣೆ, ಕಂಪ್ಯೂಟರ್, ಪ್ರಿಂಟರ್, ಸ್ಮಾರ್ಟ್ ಕ್ಲಾಸ್ ಮೋನಿಟರ್, ಕಪಾಟು, ಗಡಿಯಾರ, ಗಣಿತ ಪಾಠಕ್ಕೆ ಬೇಕಾದ ಸಲಕರಣೆ, ನೀರಿನ ಫಿಲ್ಟರ್ ಹಾಗೂ ಶಾಸಕ ಹರೀಶ್ ಪೂಂಜ ಸಹಕಾರದಲ್ಲಿ ಶೀಟು ಹಾಸಿದ ಮೇಲ್ಚಾವಣಿ ನಿರ್ಮಾಣ ಸಹಿತ ಶಾಲೆಗೆ ಸುಣ್ಣ ಬಣ್ಣ ಬಳಿದು ಪ್ರಥಮ ಹಂತದ ಹಸ್ತಾಂತರ ನಡೆಸಲಾಯಿತು

---

ವರದಿ: ಅಚ್ಚು ಮುಂಡಾಜೆ.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment