ಬೆಳ್ತಂಗಡಿ; ಧರ್ಮಸ್ಥಳ ಗ್ರಾಮದ ದಿಡುಂಬಿ ಎಂಬಲ್ಲಿ ಕೂಲಿ ಕೆಲಸ ನಿರತರಾಗಿದ್ದ ವೇಳೆ ಕ್ರೈನ್ ಕೊಕ್ಕೆ ಕುತ್ತಿಗೆಯ ಭಾಗಕ್ಕೆ ತಾಗಿ ಗಂಭೀರ ಗಾಯಗೊಂಡು ಬಳಿಕ ಆಸ್ಪತ್ರೆಯಲ್ಲಿ ದಾರುಣವಾಗಿ ಮೃತಪಟ್ಟ ಕುದ್ರಡ್ಕ ನಿವಾಸಿ ಹಮೀದ್ ಅವರೇ ಮನೆಯ ದುಡಿಯುವ ಕೈಯ್ಯಾಗಿದ್ದು, ಇದೀಗ ಅವರನ್ನು ಕಳೆದುಕೊಂಡ ಕುಟುಂಬ ಅಕ್ಷರಶಃ ಸಂಕಷ್ಟಕ್ಕೆ ಸಿಲುಕಿದೆ.
ಹಮೀದ್ ಅವರ ಮನೆ
ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವ ಪತ್ನಿ;
ಮೃತಪಟ್ಟ ಹಮೀದ್ ಅವರ ಪತ್ನಿ ಝುಬೈದಾ ಅವರು ದೀರ್ಘ ವರ್ಷಗಳಿಂದ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದಾರೆ. ಅವರಿಗೆ ಔಷಧಿ ಖರೀದಿಗೆ ನಿಗದಿತ ದಿನಗಳಲ್ಲಿ ಸಾವಿರಾರು ರೂಪಾಯಿ ಖರ್ಚಾಗುತ್ತಿದೆ. ಒಂದು ವೇಳೆ ಮಾತ್ರೆ ತರುವುದು ಒಂದು ದಿನ ತಡವಾದರೂ ಬಾಗಿಲು ತೆಗೆದು ಮನೆಬಿಟ್ಟು ಎಲ್ಲೆಂದರಲ್ಲಿ ಓಡಿ ಹೋಗುತ್ತಾರೆ. ದಂಪತಿಯ ಹಿರಿಯ ಪುತ್ರಿ ಅಝ್ಮಿಯಾ ಅವರನ್ನು ಒಂದೂವರೆ ವರ್ಷದ ಹಿಂದಷ್ಟೇ ಸಾಲಮೂಲದಿಂದ ಮದುವೆ ಮಾಡಿಕೊಡಲಾಗಿದೆ. ಇನ್ನಿಬ್ಬರು ಮಕ್ಕಳಾದ ಅನೀಸಾ ಮತ್ತು ಅಝ್ಮಲ್ ಇಬ್ಬರೂ ಪ.ಪೂ ಮಟ್ಟದ ವಿದ್ಯಾಭ್ಯಾಸ ಪಡೆಯುತ್ತಿದ್ದಾರಷ್ಟೇ. ಕೇವಲ 5 ಸೆಂಟ್ಸ್ ಸರಕಾರಿ ನಿವೇಶನದಲ್ಲಿ ಮನೆಕಟ್ಟಿ ವಾಸಿಸುತ್ತಿರುವ ಈ ಕುಟುಂಬಕ್ಕೆ ಮೃತ ಹಮೀದ್ ಅವರೇ ಜೀವನಾಧಾರವಾಗಿದ್ದರು. ಪತ್ಮಿಯ ಹೆಸರಿನಲ್ಲಿ ಕಿರು ಆರ್ಥಿಕ ಸಂಸ್ಥೆಯಿಂದ ಸಾಲ ಮಾಡಿ ದಿನವಹಿ ದುಡಿದು ವಾರಕ್ಕೊಮ್ಮೆ ಕಂತು ಕಟ್ಟಿ ಉಳಿಕೆ ಜೀವನ ನಿರ್ವಹಣೆ ಮತ್ತು ಮಕ್ಕಳ ವಿದ್ಯಾಭ್ಯಾಸ ಕ್ಕೆ ಹಣ ಹೊಂದಿಸುತ್ತಿದ್ದರು. ಇದೀಗ ವಿಧಿಯ ಆಟಕ್ಕೆ ಮನೆಯ ಯಜಮಾನನೇ ಅಕಾಲಿಕವಾಗಿ ಬಲಿಯಾಗಿದ್ದು, ಅವರನ್ನು ಕಳೆದುಕೊಂಡಿರುವ ಅವರ ಮನೆಯವರು ಅಸಹಾಯಕರಾಗಿ ರೋಧಿಸುತ್ತಿದ್ದಾರೆ.
ಹಿಂದಿನ ದಿನವಷ್ಟೇ ಕೆಲಸಕ್ಕೆ ಹೋಗಿದ್ದ ಹಮೀದ್;
ಕೂಲಿ ನಾಲಿ ಮಾಡಿ ಜೀವನ ಸಾಗಿಸುತ್ತಿದ್ದ ಹಮೀದ್ ಅವರಿಗೆ ಖಾಯಂ ಉದ್ಯೋಗ ಇಲ್ಲ. ಕೂಲಿಗೆ ಕರೆದವರ ಜೊತೆ ಹೋಗಿ ಕಷ್ಟಪಟ್ಟು ಸಂಪಾದನೆ ಮಾಡಿ ಸಾಲದ ಕಂತು ತುಂಬುತ್ತಿದ್ದರು. ಹೀಗಿರುವಂತೆ ಘಟನೆ ನಡೆದ ಹಿಂದಿನದಿನವಷ್ಟೇ ಮದ್ದಡ್ಕದ ಇಸ್ಮಾಯಿಲ್ ಅವರ ಜೊತೆ ಧರ್ಮಸ್ಥಳದ ಈ ಹೊಸ ಸೈಟ್ ಗೆ ಹೊಸ ಕಾರ್ಮಿಕನಾಗಿ ಹೋಗಿದ್ದರು ಹಮೀದ್. ಅದರ ಮರುದಿನವೇ ಈದುರ್ಘಟನೆ ಸಂಭವಿಸಿರುವುದು ಮಾತ್ರ ದುರಂತವೇ ಸರಿ.
ಹೆಚ್ಚಿನ ಮಾಹಿತಿ ಮತ್ತು ನೆರವಿಗೆ ಸಂಪರ್ಕಿಸಿ
9741837282(ನವಾಝ್ KPT ಕುದ್ರಡ್ಕ)
-----------
ಬರಹ: ಅಚ್ಚು ಮುಂಡಾಜೆ
9449640130