Posts

2020 ರಲ್ಲಿ ಉಜಿರೆ ಓಡಲದಲ್ಲಿ ನಡೆದಿದ್ದ ಮನೆ ದರೋಡೆ ಪ್ರಕರಣ ಮುಂಡಾಜೆಯ ರಿಯಾಝ್, ನವಾಝ್ ಸಹೋದರರೂ ಸೇರಿದಂತೆ ಮೂವರು ಆರೋಪಿಗಳು ಪೊಲೀಸರ ವಶಕ್ಕೆ ಕೈ ಕಾಲು ಕಟ್ಟಿಹಾಕಿ, ಹಲ್ಲೆ ನಡೆಸಿ ನಗ- ನಗದು ಅಪಹರಿಸಿದ್ಧ ದರೋಡೆಕೋರರು

3 min read


ಬೆಳ್ತಂಗಡಿ; 2020 ರ ಜೂನ್ 26 ರಂದು ಉಜಿರೆಯ ಓಡಲ ನಿವಾಸಿ ಅಡಿಕೆ ವ್ಯಾಪಾರಿ ಅಚ್ಚುತ ಭಟ್ ಎಂಬವರ ಮನೆಗೆ ನುಗ್ಗಿ ಮನೆಯವರ ಕೈ ಕಾಲು ಕಟ್ಟಿಹಾಕಿ ನಗ- ನಗದು ದರೋಡೆ ಮಾಡಿದ ಪ್ರಕರಣವನ್ನು ನಾಲ್ಕು ವರ್ಷಗಳ ಬಳಿಕ ಧರ್ಮಸ್ಥಳ ಪೊಲೀಸರು ಪತ್ತೆ ಹಚ್ಚಿದ್ದಾರೆ. 

ಈ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಬಂಧಿತರನ್ನು ಮುಂಡಾಜೆ ಗ್ರಾಮದ ಕೂಳೂರು ನಿವಾಸಿ ಅಡಿಕೆ ವ್ಯಾಪಾರಿ ರಿಯಾಝ್(41), ಆತನ ಸಹೋದರ ಬೆಂಗಳೂರಿನಲ್ಲಿರುವ ನವಾಝ್  (38) ಮತ್ತು ಬೆಂಗಳೂರು‌ ನಿವಾಸಿ ಕೃಷ್ಣ (37) ಎಂಬವರೆಂದು ಗುರುತಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಇಬ್ಬರು ಆರೋಪಿಗಳು ಇರುವುದಾಗಿ ಭಾಗಿಯಾಗಿರುವುದು ತನಿಖೆಯಿಂದ ಖಚಿತವಾಗಿದ್ದು ಅವರ ಪತ್ತೆ ಆಗಬೇಕಿದೆ.

ಪೊಲೀಸ್ ಬಾತ್ಮೀದಾರರ ಮೂಲಕ ಬಂದ ಮಾಹಿತಿಯಂತೆ ಅಂದು ದರೋಡೆ ನಡೆಸಿದ ಚಿನ್ನಾಭರಣಗಳನ್ನು ಆರೋಪಿ ರಿಯಾಝ್ ಎಂಬಾತ ಮಾರಾಟ ಮಾಡುವ ಉದ್ದೇಶದಿಂದ ಸಾಗಿಸುತ್ತಿರುವ ಬಗ್ಗೆ ತಿಳಿದು ಬಂದಿದ್ದು ಅಂತೆಯೇ ಆರೋಪಿಯನ್ನು ಪೊಲೀಸರು ಆಭರಣ ಸಮೇತ ದಸ್ತಗಿರಿ ಮಾಡಿದ್ದಾರೆ. ವಿಚಾರಣೆ ವೇಳೆ ಸಹೋದರ ನವಾಝ್ ಮತ್ತು ಕೃಷ್ಣ ಕೂಡ ಇದರಲ್ಲಿ ಭಾಗಿಯಾಗಿದ್ದಾರೆ. ಇದೀಗ ಆರಂಭಿಕವಾಗಿ ಒಟ್ಟು ಮೂವರನ್ನೂ ಬಂಧಿಸಲಾಗಿದೆ.

ಘಟನೆಯ ವಿವರ: 

ಕಲ್ಮಂಜ ಗ್ರಾಮದ ಮಿಯಾ ನಿವಾಸಿ ಅಚ್ಚುತ ಭಟ್ ಎಂಬವರ ಮನೆಯಲ್ಲಿ 2020 ಜೂನ್ 26 ರಂದು ಮಧ್ಯ ರಾತ್ರಿ 2.30 ರಿಂದ 3.30 ರ ಮಧ್ಯೆ ಮನೆ ದರೋಡೆ ನಡೆದಿತ್ತು. ಕಲ್ಮಂಜ ಗ್ರಾಮದವರಾದ ಅಚ್ಚುತ ಭಟ್ ಅವರು ಉಜಿರೆ ಓಡಲದಲ್ಲಿ ನೆಲೆಸಿದ್ದು ಅಲ್ಲಿ ರಾತ್ರಿ ಈ ಘಟನೆ ನಡೆದಿತ್ತು. ರಾತ್ರಿ ನಾಯಿ ಬೊಗಳುವ ಶಬ್ದ ಕೇಳಿ ಅಚ್ಚುತ ಭಟ್ ಅವರು ಎಚ್ಚೆತ್ತುಕೊಂಡು ಬಾಗಿಲು ತೆಗೆದು ಹೊರಗೆ ಬಂದಾಗ ಇಬ್ಬರು ಅವರನ್ನು ಸುತ್ತುವರಿದು ಕುತ್ತಿಗೆ ಅದುಮಿ ಹಿಡಿದಿದ್ದರು. ಈ ವೇಳೆ ಅವರು ಬೊಬ್ಬೆ ಹಾಕಿದಾಗ ಮನೆಯಲ್ಲಿದ್ದ ತನ್ನ ಸಹೋದರನ ಪತ್ನಿ ವಿದ್ಯಾಕುಮಾರಿ ಮನೆಯ ಇನ್ನೊಂದು ಬದಿಯಲ್ಲಿದ್ದ ಬಾಗಿಲು ತೆರೆದಾಗ ಅಲ್ಲಿಂದ ಏಕಾಏಕಿ ಇಬ್ಬರು ಮನೆಯ ಒಳಕ್ಕೆ ನುಗ್ಗಿದ್ದರು. ಮನೆಯಲ್ಲಿದ್ದ ಅವರ ತಾಯಿ ಮತ್ತು ತಮ್ಮನ ಪತ್ನಿ ಯನ್ನು ಎದುರಿನ ಚಾವಡಿಯಲ್ಲಿ ಕೂಡಿ ಹಾಕಿ ಬಟ್ಟೆಯಿಂದ ಕೈಕಾಲು ಕಟ್ಟಿ ತಮ್ಮನ ಪತ್ನಿಯ ಕುತ್ತಿಗೆಯಿಂದ ಒಂದು ಚಿನ್ನದ ಕರಿಮಣಿ ಸರ ಹಾಗೂ ತಾಯಿಯ ಕೈಯಲ್ಲಿದ್ದ ಎರಡು ಚಿನ್ನದ ಬಳೆಗಳನ್ನು ಕಿತ್ತುಕೊಂಡಿದ್ದರು. ಅಲ್ಲದೇ ಮನೆಯಲ್ಲಿ ಹುಡುಕಾಡಿ ಕಬ್ಬಿಣದ ಕಪಾಟನ್ನು ಬಲತ್ಕಾರವಾಗಿ ತೆರೆದು ಅದರಲ್ಲಿದ್ದ ಬೆಳ್ಳಿಯ 4 ತಂಬಿಗೆ, ತಾಯಿಯ ಚಿನ್ನದ ಸರ ಮತ್ತು ಒಂದು ಉಂಗುರವನ್ನು ಹಾಗೂ ನಗದು ರೂ 25 ಸಾವಿರ ವನ್ನು ತೆಗೆದುಕೊಂಡಿದ್ದರು. ತಮ್ಮನ ಪತ್ನಿಯ ಬ್ಯಾಗ್ ನಲ್ಲಿದ್ದ ಮಕ್ಕಳ 3 ಸಣ್ಣ ಚೈನ್, ಒಂದು ದೊಡ್ಡ ಚೈನ್, ನೆಕ್ಲೇಸ್, 5 ಸೆಟ್ ಕಿವಿಯ ಬೆಂಡೋಲೆ, 3 ಉಂಗುರ, 4 ಬಳೆಗಳನ್ನು ಆಗಂತುಕರು ದರೋಡೆಗೈದಿದ್ದರು. ಅಲ್ಲದೇ ಅವರ ಮೊಬೈಲ್ ಮತ್ತು ತಮ್ಮನ‌ ಪತ್ನಿಯ 2 ಮೊಬೈಲ್ ಸೆಟ್ ಗಳನ್ನು ನೆಲಕ್ಕೆ ಹೊಡೆದು ಜಖಂಗೊಳಿಸಿದ್ದರು. ಆರೋಪಿತರುಗಳು, ಈ ಬಗ್ಗೆ ಪೊಲೀಸರಿಗೆ ತಿಳಿಸಿದರೆ ನಿಮ್ಮನ್ನು ಕೊಂದು ಮನೆಗೆ ಬೆಂಕಿ ಹಾಕುವುದಾಗಿ ಬೆದರಿಸಿ ಪರಾರಿಯಾಗಿದ್ದರು.

35 ಪವನ್ ಚಿನ್ನಾಭರಣ ದರೋಡೆ;

ಆರೋಪಿಗಳು ಒಟ್ಟು 30 ರಿಂದ 35 ಪವನ್ ತೂಕದ ಚಿನ್ನದ ಒಡವೆ ಹಾಗೂ ಸುಮಾರು 1 ಕೆ ಜಿ ತೂಕದ  ಬೆಳ್ಳಿಯ ವಸ್ತುಗಳನ್ನು ದರೋಡೆ ಗೈದಿದ್ದರು. ಇದರ ಅಂದಾಜು ಮೊತ್ತ ಚಿನ್ನಾಭರಣ ಹಾಗೂ ನಗದು ಹಣ ಸೇರಿ ಸುಮಾರು 12,40,000/- ರೂ. ಗಳಾಗಬಹುದು ಎಂದು ಅಂದು ಅಚ್ಚುತ ಭಟ್ ಅವರು ನೀಡಿದ್ದ ದೂರಿನಲ್ಲಿ ಅಂದಾಜಿಸಿದ್ದರು. 

ನ್ಯಾಯಾಲಯಕ್ಕೆ 'ಸಿ' ರಿಪೋರ್ಟ್ ಸಲ್ಲಿಸಿದ್ದ ಪೊಲೀಸರು;

2020 ರಲ್ಲಿ ನಡೆದ ಈ‌ ಕಳ್ಳತನ ಪ್ರಕರಣದ ದೂರನ್ನು ಅಂದಿನ ಧರ್ಮಸ್ಥಳ ಎಸ್‌ಐ ಚಂದ್ರಶೇಖರ ಅವರು ದಾಖಲಿಸಿಕೊಂಡು ಹೆಚ್ಚಿನ ತನಿಖೆಯನ್ನು ಅಂದಿನ ಸರ್ಕಲ್ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ ಅವರು ಕೈಗೊಂಡಿದ್ದರು. ಆದರೂ ಆರೋಪಿಗಳ ಸುಳಿವು ಹಾಗೂ ಯಾವುದೇ ಸೊತ್ತುಗಳು ಇದುವರೆಗೆ ವಶವಾಗದೇ ಇದ್ದುದರಿಂದ ನ್ಯಾಯಾಲಯಕ್ಕೆ 'ಸಿ' ರಿಪೋರ್ಟ್ ಸಲ್ಲಿಸಿದ್ದರು. ದರೋಡೆಕೋರರೂ ಕೂಡ ಕಳವಿನ‌ ಬಗ್ಗೆ ಯಾವೊಂದು ಕುರುಹೂ ಲಭಿಸದಂತೆ ಚಾಣಾಕ್ಷತೆ ಮೆರೆದಿದ್ದರು.

ವಶಪಡಿಸಿಕೊಂಡ ಸೊತ್ತುಗಳು;

ದರೋಡೆಕೋರರಿಂದ ಒಟ್ಟು 104 ಗ್ರಾಂ ಬಂಗಾರದ ಆಭರಣಗಳು, ಅದರ ಅಂದಾಜು ಮೌಲ್ಯ ಸುಮಾರು  7,87,000 ರೂ/, 288 ಗ್ರಾಂ ಬೆಳ್ಳಿ ಅದರ ಅಂದಾಜು ಮೌಲ್ಯ ಸುಮಾರು  30,240 ರೂ/-ಹಾಗೂ, ಟಿವಿಎಸ್‌ ಕಂಪೆನಿಯ ಅಪಾಚೆ ಮೋಟರ್ ಬೈಕ್‌ -1 ಅದರ ಅಂದಾಜು ಮೌಲ್ಯ ಸುಮಾರು  25,000/- ಸೇರಿ ಒಟ್ಟು ಮೌಲ್ಯ 8,42,240/- ಆಗಬಹುದು ಎಂದು ಅಂದಾಜಿಸಲಾಗಿದೆ.

ಅಚ್ಚುತ ಭಟ್ ಅವರ ಅಡಿಕೆ ಅಂಗಡಿಯಲ್ಲೇ ಕೆಲಸಕ್ಕಿದ್ದ ಆರೋಪಿ ರಿಯಾಝ್

ದರೋಡೆ ಪ್ರಕರಣದಲ್ಲಿ ನಾಲ್ಕು ವರ್ಷಗಳ ಬಳಿಕ ಸಿಕ್ಕಿ ಬಿದ್ದಿರುವ ಮುಂಡಾಜೆಯ ರಿಯಾಝ್ ಇದೇ ಅಚ್ಚುತ ಭಟ್ ಅವರ ಅಡಿಕೆ ಅಂಗಡಿಯಲ್ಲಿ ಈ ಹಿಂದೆ ಕೆಲಸಕ್ಕಿದ್ದ ಎಂಬ ಬಗ್ಗೆ ತಿಳಿದುಬಂದಿದೆ. ದರೋಡೆ ನಡೆದ ಆ ಸಂದರ್ಭದಲ್ಲಿ ಆಗಿನ ತನಿಖಾಧಿಕಾರಿಗಳು ವಿವಿಧ ಆಯಾಮದಿಂದ ತನಿಖೆ ಕೈಗೊಂಡಿದ್ದು, ಆ ವೇಳೆ ಭಟ್ಟರ ಅಂಗಡಿಯಲ್ಲಿ ಯಾರೆಲ್ಲಾ ಹಿಂದೆ ಕೆಲಸ ಮಾಡಿದ್ದಾರೆ ಎಂದು ಮಾಹಿತಿ ಕಲೆ ಹಾಕಿದ್ದರು. ಈ ವೇಳೆ ರಿಯಾಝ್ ಹೆಸರೂ ಕೂಡ ಪೊಲೀಸರ ಪಟ್ಟಿಯಲ್ಲಿ ಸೇರಿಕೊಂಡಿತ್ತು. ಆದರೆ ಆತನ ಬಗ್ಗೆ ನನಗೆ‌ ಯಾವುದೇ ಅನುಮಾನಗಳಿಲ್ಲ. ಆತ ಈ ರೀತಿ ಮಾಡುವವನಲ್ಲ ಎಂದು ಭಟ್ಟರು ಪೊಲೀಸರಿಗೆ ಹೇಳಿದ್ದರೆಂದು ತಿಳಿದುಬಂದಿದೆ.

ಪತ್ತೆ ತಂಡದಲ್ಲಿದ್ದ ಪೊಲೀಸರ ವಿವರ;

ಈ ಪ್ರಕರಣದ ಪತ್ತೆ ಕಾರ್ಯಾಚರಣೆಯಲ್ಲಿ ಎಸ್.ಪಿ ಸಿ.ಬಿ. ರಿಶ್ಯಂತ್‌, ಹೆಚ್ಚುವರಿ ಪೋಲಿಸ್‌ ಅದೀಕ್ಷಕರುಗಳಾದ ಎಂ ಜಗದೀಶ್‌ ಮತ್ತು ರಾಜೇಂದ್ರ ಡಿ ಎಸ್, ಬಂಟ್ವಾಳ ಎಸ್‌‌ಎಸ್‌ಪಿ ವಿಜಯ ಪ್ರಸಾದ್‌ ಎಸ್‌ ರವರ ನಿರ್ದೆಶನದಂತೆ ಸರ್ಕಲ್ ಇನ್ಸ್‌ಪೆಕ್ಟರ್ ವಸಂತ್‌ ಆರ್‌ ಆಚಾರ್‌, ವಿಟ್ಲ ಎಸ್‌ಐ ನಾಗರಾಜ್ ಹೆಚ್.ಇ, ಬೆಳ್ತಂಗಡಿ ಪೊಲೀಸ್ ಇನ್ಸ್‌ಪೆಕ್ಟರ್ ಬಿ.ಜಿ ಸುಬ್ಬಾಪುರ ಮಠ ಇವರ ಮಾರ್ಗದರ್ಶದಂತೆ  ಧರ್ಮಸ್ಥಳ ಪೋಲಿಸ್‌ ಠಾಣಾ ಎಸ್‌ಐ ಗಳಾದ ಅನೀಲ್‌ ಕುಮಾರ ಡಿ ಮತ್ತು ಸಮರ್ಥ ರ ಗಾಣಿಗೇರ ಹಾಗೂ ಸಿಂಬಂದಿಗಳಾದ ರಾಜೇಶ ಎನ್‌, ಪ್ರಶಾಂತ್‌ ಎಂ , ಸತೀಶ್‌ ನಾಯ್ಕ್,  ಪ್ರಮೋದಿನಿ , ಶೇಖರ್‌ ಗೌಡ , ಕೃಷ್ಣಪ್ಪ, ಆನಿಲ್‌ ಕುಮಾರ್‌, ಜಗದೀಶ್‌, ಮಲ್ಲಿಕಾರ್ಜುನ್‌, ವಿನಯ್‌ ಪ್ರಸನ್ನ , ಗೋವಿಂದರಾಜ್‌, ಭಿಮೇಶ್‌, ನಾಗರಾಜ್‌ ಬುಡ್ರಿ ಹಾಗೂ ಹುಲಿರಾಜ್‌ ಇವರು ಭಾಗಿಯಾಗಿದ್ದಾರೆ.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment