ಬೆಳ್ತಂಗಡಿ; ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಸಾಂಪ್ರದಾಯಿಕ ಕಾರ್ಯಕ್ರಮಗಳ ಬಲವರ್ಧನೆ, ನವಜೀವನ ಸಮಿತಿ ಸದಸ್ಯರಿಗೆ ಉದ್ಯೋಗ ಕೌಶಲ್ಯ ತರಬೇತಿ, ಕಿರುಚಿತ್ರ ಪ್ರದರ್ಶನದ ಮೂಲಕ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನ, ಕಾರ್ಯಾಚರಣೆ ವ್ಯಾಪ್ತಿಯೊಳಗಡೆ ಭಜನಾ ಪರಿಷತ್ ಗಳ ಸಂಯೋಜನೆ ಮೊದಲಾದ ಮಹತ್ವದ ಕ್ರಿಯಾಯೋಜನೆಗೆ ತಾಲೂಕು ಜನಜಾಗೃತಿ ವೇದಿಕೆ ಸಭೆಯಲ್ಲಿ ಅನುಮೋದನೆ ನೀಡಲಾಯಿತು.
ಎಸ್‌ಡಿಎಂ ಪಿನಾಕಿ ಸಭಾಂಗಣದಲ್ಲಿ ಏ.23 ರಂದು ನಡೆದ ಜನಜಾಗೃತಿ ವೇದಿಕೆಯ ಆರ್ಥಿಕ ವರ್ಷದ ಪ್ರಥಮ ಸಭೆಯಲ್ಲಿ ನೂತನ ವರ್ಷದ ಕ್ರಿಯಾಯೋಜನೆಗೆ ಮಂಜೂರಾತಿ ನೀಡಲಾಯಿತು. ಅಧ್ಯಕ್ಷತೆಯನ್ನು ತಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಕಾಸಿಂ ಮಲ್ಲಿಗೆಮನೆ ವಹಿಸಿದ್ದರು.
ಜನಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷ ವಸಂತ ಸಾಲಿಯಾನ್ , ಮಾಜಿ ಅಧ್ಯಕ್ಷರಾದ ಅಡೂರು ವೆಂಕಟ್ರಾಯ ಮತ್ತು ಕಿಶೋರ್ ಹೆಗ್ಡೆ ಸಲಹೆ ನೀಡಿದರು.
ಗ್ರಾ. ಯೋಜನೆಯ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್ ಮಾತನಾಡಿ, ಕಾರ್ಯಕ್ರಮ ಅನುಷ್ಠಾನದಲ್ಲಿ ಲಭ್ಯವಿರುವ ಅನುದಾನ, ಮೌಲ್ಯಾಂಕನ ಮಾಡಿ ಬಹುಮಾನ ನೀಡುವ ವಿಚಾರ ಪ್ರಕಟಿಸಿದರು. ಜನಜಾಗೃತಿ ವೇದಿಕೆಯ ಕರಾವಳಿ ಪ್ರಾದೇಶಿಕ ನಿರ್ದೇಶಕ ಗಣೇಶ್ ಕ್ರಿಯಾಯೋಜನೆ ಮಂಡಿಸಿ ವಿವರಣೆ ನೀಡಿದರು. ವಲಯವಾರು ವಿವಿಧ ಜವಾಬ್ದಾರಿ ಹಂಚಿಕೆ ಮಾಡಲಾಯಿತು. ಗುರುವಾಯನಕೆರೆ ವಿಭಾಗದ ಯೋಜನಾಧಿಕಾರಿ ದಯಾನಂದ ಮತ್ತು ಬೆಳ್ತಂಗಡಿ ವಿಭಾಗದ ಯೋಜನಾಧಿಕಾರಿ ಸುರೇಂದ್ರ ಅನುಪಾಲನೆ ಮತ್ತು ವಾರ್ಷಿಕ ವರದಿ ಪ್ರಸ್ತುತಪಡಿಸಿದರು. ಶೌರ್ಯ ವಿಪತ್ತು ನಿರ್ವಹಣೆ ವಿಭಾಗದ ಯೋಜನಾಧಿಕಾರಿ ಜಯವಂತ ಪಟಗಾರ ವಿಪತ್ತು ಸಾಧನಾ ವರದಿ ಮಂಡಿಸಿದರು.
ಪೂರ್ವಾಧ್ಯಕ್ಷರುಗಳಾದ ಡಿ.ಎ ರಹಿಮಾನ್, ಬೆಳಾಲು ತಿಮ್ಮಪ್ಪ ಗೌಡ, ಶೌರ್ಯ ವಿಪತ್ತು ವಿಭಾಗದ ಅಧಿಕಾರಿ ಕಿಶೋರ್ ಕಡಬ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಾಮ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.
ಸುರೇಂದ್ರ ವಂದಿಸಿದರು.