ಬೆಳ್ತಂಗಡಿ; ನೀರು ಕುಡಿಯುವ ನೆಪದಲ್ಲಿ ಮನೆಗೆಯೊಳಗೆ ಹೊಕ್ಕಿದ ಅಪರಿಚಿ ಮಹಿಳೆ ಮತ್ತು ಪುರುಷನೊಬ್ಬ ಮನೆಯೊಡತಿಗೆ ಚೂರಿ ತೋರಿಸಿ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಕರಾಯ ಗ್ರಾಮದಲ್ಲಿ ಮೇ 11 ರಂದು ನಡೆದಿದೆ.
ಕರಾಯ ಸನಿಹದ ತುರ್ಕಳಿಕೆ ಸುಹೈಬಾ (25) ಎಂಬವರ ಮನೆಯಲ್ಲೇ ಈಘಟನೆ ನಡೆದುದಾಗಿದೆ.
ಮೇ 11 ರಂದು ಬೆಳಿಗ್ಗೆ ಸುಹೈಬಾ ಅವರು ತನ್ನ ಮನೆಯ ಬಳಿಯಿದ್ದಾಗ, ಮನೆಯ ಅಂಗಳಕ್ಕೆ ಅಪರಿಚಿತ ಓರ್ವ ಗಂಡಸು ಮತ್ತು ಓರ್ವ ಮಹಿಳೆ ಬಂದಿದ್ದರು. ಮನೆಯೊಡತಿ ಬಳಿ ಮಾತನಾಡತ್ತಾ ಆತ್ಮೀಯರಂತೆ ನಟಿಸಿ ಮನೆಯಲ್ಲಿರುವ ಸದಸ್ಯರುಗಳ ಬಗ್ಗೆಯೂ ವಿಚಾರಿಸಿದ್ದಾರೆ.ಬಳಿಕ ಕುಡಿಯಲು ನೀರು ಬೇಕು ಎಂದು ಕೇಳಿದ್ದು, ಈ ವೇಳೆ ಸುಹೈಬಾ ಅವರು ನೀರು ತರಲೆಂದು ಒಳಗೆ ಹೋದಾಗ ಬಂದ ಮಹಿಳೆ ಹಾಗೂ ಪುರುಷ ಒಮ್ಮೆಲೇ ಮನೆಯೊಳಗೆ ಪ್ರವೇಶಿಸಿ, ಮನೆಯಲ್ಲಿದ್ದ ಕಪಾಟು ಬಾಗಿಲು ತೆರೆದು ಹುಡುಕಾಡಲು ಆರಂಭಿಸಿದ್ದಾರೆ. ಇದನ್ನು ಕಂಡು ಭಯಗೊಂಡ ಸುಹೈಬಾ ಬೊಬ್ಬೆ ಹಾಕಿ ತನ್ನ ಗಂಡನಿಗೆ ಕರೆ ಮಾಡಲು ಯತ್ನಿಸಿದ್ದು, ಆರೋಪಿಗಳು ಸುಹೈಬಾ ಕೈಯಲ್ಲಿದ್ದ ಮೊಬೈಲ್ ಫೋನನ್ನು ಎಳೆದು ಬಿಸಾಡಿ, ಹಲ್ಲೆ ನಡೆಸಿ, ಚೂರಿ ತೋರಿಸಿ ಬೆದರಿಸಿದ್ದಾರೆ. ಅಲ್ಲದೆ ಆಕೆಯ ಕೈಯಲ್ಲಿದ್ದ ಎರಡು ಚಿನ್ನದ ಉಂಗುರಗಳನ್ನು ಹಾಗೂ ಕುತ್ತಿಗೆಯಲ್ಲಿದ್ದ ಚಿನ್ನದ ಕರಿಮಣಿ ಸರವನ್ನು ಕಸಿದುಕೊಂಡು ತಕ್ಷಣ ಸ್ಥಳದಿಂದ ಪರಾರಿಯಾಗಿದ್ದಾರೆ.
ಒಮ್ಮೆಲೇ ನಡೆದ ಘಟನೆಯಿಂದ ಸಂಪೂರ್ಣ ಬದರಿ ಹೋಗಿದ್ದ ಸುಹೈನಾ ಅವರು ಅವರು ಜೋರಾಗಿ ಕಿರುಚಿಕೊಂಡಿದ್ದು, ಬೊಬ್ಬೆ ಕೇಳಿ ನೆರೆಮನೆಯ ಮಹಿಳೆ ಬರುತ್ತಿರುವುದನ್ನು ಕಂಡ ಆರೋಪಿಗಳು ತಾವು ಬಂದಿದ್ದ ಬೈಕಿನಲ್ಲಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಸುಹೈಬಾ ಅವರಿಂದ ದೋಚಿದ ಆಭರಣಗಳ ಅಂದಾಜು ಮೌಲ್ಯ ರೂ 1,00,000/- ಆಗಬಹುದು ಎಂದು ಅಂದಾಜಿಸಲಾಗಿದ್ದು ಈ ಬಗ್ಗೆ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.