ಬೆಳ್ತಂಗಡಿ; ಡಿಕೆಆರ್‌ಡಿಎಸ್ ಬೆಳ್ತಂಗಡಿ, ನವಜೀವನ ಆರೈಕೆ ಮತ್ತು ಬೆಂಬಲ ಕಾರ್ಯಕ್ರಮದಡಿ ಹೆಚ್.ಐ.ವಿ ಸೋಂಕಿತ ಮತ್ತು ಬಾಧಿತ ವ್ಯಕ್ತಿಗಳ ಸಭೆಯನ್ನು ಪ್ರತಿ ತಿಂಗಳ 3ನೇ ಶನಿವಾರ ಸಂಸ್ಥೆ ಮಟ್ಟದಲ್ಲಿ ನಡೆಸುತ್ತಿದ್ದು ಅಂತಹಾ ಫಲಾನುಭವಿಗೆ ಕೋವಿಡ್ ಸಂಕಷ್ಟಕ್ಕೆ ಸಹಕಾರಿಯಾಗಿ ಪೌಷ್ಟಿಕ ಆಹಾರದ ಕಿಟ್ ವಿತರಿಸಲಾಯಿತು.
ಈಗಾಗಲೇ ಸಂಸ್ಥೆಯ ವತಿಯಿಂದ ಆರೈಕೆಯಲ್ಲಿರುವ ಎಚ್‌ಐವಿ ಪೀಡಿತ ಹಾಗೂ ಬಾಧಿತರಿಗೆ ದೈಹಿಕ ಮತ್ತು ಮಾನಸಿಕ ಸ್ಥೈರ್ಯ ನೀಡುವ ಕಾರ್ಯ ಬೆಳ್ತಂಗಡಿಯ ಸಾನ್ ತೋಮ್ ಟವರ್ ನಲ್ಲಿ ನಡೆಸಲಾಗುತ್ತಿದೆ.
ಇದರಲ್ಲಿ ಹೆಚ್.ಐ.ವಿ ಸೋಂಕಿತರಿಗೆ ಉಚಿತ ವೈದ್ಯಕೀಯ ಸೇವೆ ಮತ್ತು ಪೌಷ್ಠಿಕ ಆಹಾರವನ್ನು ನಿರಂತರವಾಗಿ ವಿತರಣೆ ಮಾಡುತ್ತಿದ್ದು, ಇದಕ್ಕೆ ಹಲವಾರು ದಾನಿಗಳು ಸಹಕರಿಸಿದ್ದಾರೆ.
ಕೋವಿಡ್ ಲಾಕ್ ಡೌನ್ ನಿಮಿತ್ತ ಸರ್ಕಾರದ ನಿಯಮದಂತೆ ಮಾಸಿಕ ಸಭೆಯನ್ನು ನಡೆಸಲು ಸಾಧ್ಯವಾಗದ ಕಾರಣ ಸಂಸ್ಥೆಯ ನಿರ್ದೇಶಕ ಫಾ.ಬಿನೋಯಿ ಎ.ಜೆ ಹಾಗೂ ಕಾರ್ಯಕರ್ತ ಮಾರ್ಕ್ ಡಿಸೋಜ ಇವರು ಬೆಳ್ತಂಗಡಿ ತಾಲೂಕಿನ ಹಲವಾರು ಗ್ರಾಮಗಳಲ್ಲಿರುವ ಫಲಾನುಭವಿಗಳ ಮನೆಗೇ ತೆರಳಿ ರೂ.1000 ಮೌಲ್ಯದ ಅಕ್ಕಿ ಮತ್ತು ಇತರೆ ದಿನಸಿ ಸಾಮಾಗ್ರಿಗಳನ್ನು ಒಟ್ಟು 46 ಜನರಿಗೆ ವಿತರಿಸಿದ್ದಾರೆ.