ಬೆಳ್ತಂಗಡಿ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿ.ಎಫ್.ಐ.) ಇದರ ಮಾಜಿ ರಾಷ್ಟ್ರೀಯ ಅಧ್ಯಕ್ಷ ಕೆ.ಎಂ.ಶರೀಫ್ (56ವ.) ಕೆಲವು ದಿನಗಳ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ಕೊನೆಯುಸಿರೆಳೆದರು.
ಶ್ವಾಸಕೋಶ, ರಕ್ತದೊತ್ತಡ, ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಇತ್ತೀಚೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು ಎಂದು ಪಿ.ಎಫ್.ಐ. ರಾಷ್ಟ್ರೀಯ ಕಾರ್ಯದರ್ಶಿ ಅನೀಸ್ ಅಹ್ಮದ್ ತಿಳಿಸಿದ್ದಾರೆ.
ಖ್ಯಾತ ಧಾರ್ಮಿಕ ವಿದ್ವಾಂಸ ದಿವಂಗತ ಮಿತ್ತಬೈಲ್ ಅಬ್ದುಲ್ ಹಾಜಿ ಮತ್ತು ನಫೀಸಾ ದಂಪತಿಯ ಪುತ್ರರಾದ ಕೆ.ಎಂ.ಶರೀಫ್ 1964 ಸೆಪ್ಟಂಬರ್ 1ರಂದು ಜನಿಸಿದ್ದರು.
ಬಾಲ್ಯದಲ್ಲೇ ಸಾಮಾಜಿಕ ಕಳಕಳಿ ಹೊಂದಿದ್ದ ಅವರು ಸಮಸ್ತ ಕೇರಳದ ಆಧೀನ ಸಂಘಟನೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು. ಬಿಎಸ್ಸಿ ಪದವೀಧರ ಆಗಿದ್ದು, ಖ್ಯಾತ ಧಾರ್ಮಿಕ ವಿದ್ವಾಂಸ ದಿ.ಮಿತ್ತಬೈಲ್ ಜಬ್ಬಾರ್ ಉಸ್ತಾದ್ ಅವರ ಶಿಷ್ಯರಾಗಿ ಧಾರ್ಮಿಕ ವಿದ್ಯಾಭ್ಯಾಸ ಪಡೆದಿದ್ದರು.
ವಿದೇಶದಲ್ಲಿ ವೃತ್ತಿ ಜೀವನ ನಡೆಸುತ್ತಿದ್ದ ಅವರು ಬಳಿಕ ಮಂಗಳೂರಿನ ಕೊಡಿಯಾಲ್ ಬೈಲ್ ನಲ್ಲಿ ಜೆರಾಕ್ಸ್ ಅಂಗಡಿ ಮತ್ತು ಎಸ್.ಟಿ.ಡಿ. ಬೂತ್ ಹೊಂದಿ ವೃತ್ತಿ ಜೀವನ ನಡೆಸುತ್ತಿದ್ದರು. ಮಂಗಳೂರಿನ ತನ್ನ ಜೆರಾಕ್ಸ್ ಅಂಗಡಿಯಲ್ಲಿ ಜಾಗತಿಕ ಇತಿಹಾಸ, ಇಸ್ಲಾಮಿಕ್ ಇತಿಹಾಸ ಹಾಗೂ ಇತರ ಇಸ್ಲಾಮಿಕ್ ಪುಸ್ತಕಗಳ ಸಣ್ಣ ಗ್ರಂಥಾಲಯವನ್ನು ಸ್ಥಾಪಿಸಿ ಸಾರ್ವಜನಿಕರಿಗೆ ಪುಸ್ತಕಗಳನ್ನು ನೀಡಿ ಓದಿಸುತ್ತಿದ್ದರು. ಅಲ್ಲದೆ ಅವರು ಕೆಲವು ಪುಸ್ತಕಗಳನ್ನೂ ಬರೆದಿದ್ದರು.
ಕರ್ನಾಟಕದಲ್ಲಿ ಕೆ.ಎಫ್.ಡಿ. ಸಂಘಟನೆಯ ಆರಂಭದಲ್ಲೇ ಸದಸ್ಯತ್ವ ಪಡೆದ ಅವರು ಬಳಿಕ ಕೆ.ಎಫ್.ಡಿ. ರಾಜ್ಯಾಧ್ಯಕ್ಷರೂ ಆಗಿದ್ದರು. ಆ ಬಳಿಕ ಕೆ.ಎಫ್.ಡಿ. ಸಂಘಟನೆ ಪಿ.ಎಫ್.ಐ.ಯೊಂದಿಗೆ ವಿಲೀನ ಆದ ಬಳಿಕ ಪಿ.ಎಫ್.ಐ. ರಾಜ್ಯಾಧ್ಯಕ್ಷರಾಗಿದ್ದರು. ಬಳಿಕ ಉತ್ತಮ ವಾಗ್ಮಿಯೂ ಆದ ಅವರು ಪ್ರಸಕ್ತ ಪಿ.ಎಫ್.ಐ. ರಾಷ್ಟ್ರೀಯ ಕೋಶಾಧಿಕಾರಿಯಾಗಿಯೂ ಸೇವೆಯಲ್ಲಿದ್ದರು.
ಅಲ್ಪಸಂಖ್ಯಾತ ಸಮುದಾಯಗಳ ಮತ್ತು ದಲಿತ ಸಮುದಾಯದ ಒಗ್ಗಟ್ಟು, ರಾಜಕೀಯ ಅಸ್ತಿತ್ವದ ಬಗ್ಗೆ ತನ್ನದೇ ಪರಿಕಲ್ಪನೆಯನ್ನು ಹೊಂದಿದ್ದ ಕೆ.ಎಂ.ಶರೀಫ್, ರಾಜಕೀಯ ಪಕ್ಷವಾದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ.)ದ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲದೆ ಪಿ.ಎಫ್.ಐ.ಯನ್ನು ಉತ್ತರ ಭಾರತದಾದ್ಯಂತ ವಿಸ್ತರಿಸಲು ಕೆ.ಎಂ.ಶರೀಫ್ ನಾಯಕತ್ವ ವಹಿಸಿದ್ದ ತಂಡದ ಪಾತ್ರ ಅತೀ ದೊಡ್ಡದು ಎಂದು ಪಿ.ಎಫ್.ಐ. ಮೂಲಗಳು ತಿಳಿಸಿವೆ.
ವರದಕ್ಷಿಣೆ ರಹಿತ ಸಮಾಜ ನಿರ್ಮಾಣಕ್ಕೆ ಪ್ರತೀ ಜಮಾಅತ್ ನಲ್ಲಿ ಕರಪತ್ರಗಳನ್ನು ಹಂಚುವುದು ಸಹಿತ ಈ ಬಗ್ಗೆ ಕರಾವಳಿಯಲ್ಲಿ ಹಲವು ಕಾರ್ಯಕ್ರಮಗಳನ್ನು ನಡೆಸಿ ಮುಸ್ಲಿಮ್ ಸಮುದಾಯದ ಯುವಕರಲ್ಲಿ ಜಾಗೃತಿ ಮೂಡಿಸುವ ಆಂದೋಲನದಲ್ಲಿ ಅವರು ಮುಂದಿದ್ದರು.
ಉಪ್ಪಿನಂಗಡಿಯ ಪ್ರತಿಷ್ಠಿತ ಕುಟುಂಬದ ಸಿ.ಎಚ್.ಉಮರ್ ಎಂಬವರ ಪುತ್ರಿ ಫಾತಿಮಾ ಎಂಬವರನ್ನು ವಿವಾಹವಾಗಿದ್ದ ಕೆ.ಎಂ.ಶರೀಫ್ ಅವರು ಪತ್ನಿ, ಮೂವರು ಪುತ್ರರು, ಮೂವರು ಪುತ್ರಿಯರು ಹಾಗೂ ಬಂಧುವರ್ಗದವರನ್ನು, ಅಭಿಮಾನಿಗಳನ್ನು ಅಗಲಿದ್ದಾರೆ.