ಮಂಗಳೂರು; ಇಲ್ಲಿನ ಅತ್ತಾವರ ನಿವಾಸಿ ಶ್ರೀ ಗಣೇಶ್ ಆಂಬುಲೆನ್ಸ್ ಮಾಲಕ ಹಾಗೂ ರಾಜ್ಯದ ಹಿರಿಯ ಅಂಬುಲೆನ್ಸ್ ಚಾಲಕರಲ್ಲೋರ್ವರಾಗಿದ್ದ ಗಂಗಾಧರ ಅತ್ತಾವರ(62ವ.) ಅವರು ಡಿ.23 ರಂದು ವಿಧಿವಶರಾಗಿದ್ದಾರೆ.
ಕಳೆದ ಮೂರು ದಿನಗಳಿಂದ ಅಲ್ಪ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರಿಗೆ ಹೈಲ್ಯಾಂಡ್ ಆಸ್ಪತ್ರೆ ಮತ್ತು ಕೆಎಂಸಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಅದಕ್ಕೆ ಸ್ಪಂದಿಸದ ಅವರು ಅಸುನೀಗಿದರು.ಒಂದು ಆಂಬುಲೆನ್ಸ್ ಮೂಲಕ ಅವರು ಸ್ಥಾಪಿಸಿದ್ದ ಶ್ರೀ ಗಣೇಶ್ ಅಂಬುಲೆನ್ಸ್ ಕಂಪೆನಿ ಇಂದು 18 ಕ್ಕೂ ಅಧಿಕ ಅಂಬುಲೆನ್ಸ್ ಗಳನ್ನು ಹಾಗೂ 20 ರಷ್ಟು ನುರಿತ ಚಾಲಕರನ್ನು ಒಳಗೊಂಡು ರಾಜ್ಯದಲ್ಲೇ ಪ್ರಖ್ಯಾತಿ ಪಡೆದಿದೆ.
ಸರಳ ಸಜ್ಜನಿಕೆಯ ವ್ಯಕ್ತಿ ಯಾಗಿದ್ಧ ಗಂಗಾಧರ್ ಅವರು ಎಂತಹಾ ಸಂದಿಗ್ದ ಕಾಲದಲ್ಲೂ ಸ್ಥಿತಪ್ರಜ್ಞರಾಗಿ ನಗುಮೊಗದ ಮೂಲಕವೇ ಸೇವಾದಾತರಾಗಿದ್ದರು. ಅಂಬುಲೆನ್ಸ್ ಚಾಲನೆ ಜೊತೆಗೆ ಹಿರಿಯ ಸಮಾಜ ಸೇವಕರಾಗಿಯೂ ಗುರುತಿಸಿಕೊಂಡಿದ್ದರು.
ತಮ್ಮ ವೃತ್ತಿ ಅವಧಿಯ ದೀರ್ಘ ಅನುಭವದ ವರ್ಷಗಳಲ್ಲಿ ಅವರು ಪೊಲೀಸರು, ರೈಲ್ವೇ ಪೊಲೀಸರು ಹಾಗೂ ಇತರ ಸರಕಾರಿ ಹಾಗೂ ಖಾಸಗಿ ಸಂಸ್ಥೆಗಳ ಜೊತೆ ನಿಕಟ ಬಾಂಧವ್ಯ ಇಟ್ಟುಕೊಂಡು ಅಮೋಲಾಗ್ರ ಸೇವೆ ನೀಡಿದ್ದರು.
ರೈಲ್ವೇ ಹಳಿಗಳಲ್ಲಿ, ಅತ್ಯಂತ ದುರ್ಗಮ ಹಾದಿಗಳಲ್ಲಿ ಹಾಗೂ ಅಂತಹದ್ದೇ ಸ್ಥಿತಿಗಳಲ್ಲಿ ಇದ್ದ ಮೃತದೇಹಗಳ ಸುಗಮ ಸಾಗಾಟ ನಡೆಸುತ್ತಿದ್ದರು.
ಅಲ್ಲದೆ ಅನೇಕ ರೋಗಿಗಗಳನ್ನು ಸಕಾಲದಲ್ಲಿ ತುರ್ತು ಸ್ಪಂದಿಸಿ ಆಸ್ಪತ್ರೆ ಸೇರಿಸುವ ಮೂಲಕ ಅದೆಷ್ಟೋ ಪ್ರಾಣ ರಕ್ಷಣೆ ಮಾಡಿದ ಕೀರ್ತಿ ಹೊತ್ತಿದ್ದಾರೆ.
ಕಳೆದ ಎರಡೂ ವರ್ಷಗಳಲ್ಲಿ ವಕ್ಕರಿಸಿದ ಕೋವಿಡ್ ಸಂದರ್ಭದಲ್ಲಿ ಯಾರೂ ಕೂಡ ರೋಗಿಯ ಮತ್ತು ಮೃತದೇಹದ ಬಳಿ ಸಮೀಪಿಸಲೂ ಭಯಪಡುತ್ತಿದ್ದ ಕಾಲಘಟ್ಟದಲ್ಲಿ ರಾಜ್ಯಾಂದ್ಯಂತ ಸೇವೆ ನೀಡಿದ್ದ
ಶ್ರೀ ಗಣೇಶ್ ಸಂಸ್ಥೆಯ ಸೇವೆ ಇಂದಿಗೂ ಸ್ಮರಣೀಯವಾಗಿದೆ.ಫ್ರೀಝರ್ ಅಂಬುಲೆನ್ಸ್ ಸೇವೆ ಕೂಡ ಹೊಂದಿರುವ ಶ್ರೀ ಗಣೇಶ್ ಅಂಬುಲೆನ್ಸ್ ಮೂಲಕ, ನಗರದಲ್ಲಿ ಮೃತರಾಗುವ ಅಥವಾ ಗಂಭೀರ ಕಾಯಿಲೆಗೆ ಒಳಗಾದವರನ್ನು ಒರಿಸ್ಸಾ, ಛತ್ತೀಸ್‌ಘಡ, ಚೆನೈ, ಮಹಾರಾಷ್ಟ್ರ ಸೇರಿದಂತೆ ಇತರ ರಾಜ್ಯಗಳಿಗೆ ಸುರಕ್ಷಿತ ಮತ್ತು ಸಕಾಲಿಕವಾಗಿ ಸಾಗಾಟವನ್ನೂ ಮಾಡುತ್ತಾ ಅಂಬುಲೆನ್ಸ್ ಸೇವೆಯಲ್ಲಿ ಬ್ರಾಂಡ್ ಅಂಬಾಸಿಡರ್ ಆಗಿ ಗುರುತಿಸಲ್ಪಟ್ಟಿದೆ.
ಮೃತರು ಪತ್ನಿ ಚಿತ್ರಾ, ಮಕ್ಕಳಾದ ಪ್ರಸಾದ್( ಪಚ್ಚು), ಪುತ್ರಿ ಪಲ್ಲವಿ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ. ಅವರ
ಅಂತ್ಯಸಂಸ್ಕಾರ ಇಂದು (ಗುರುವಾರ) ನಂದಿಗುಡ್ಡೆ ಹಿಂದೂ ರುದ್ರಭೂಮಿಯಲ್ಲಿ ಅಪರಾಹ್ನ3 ಗಂಟೆಗೆ ಭಕ್ತಿ ಗೌರವದಿಂದ ನಡೆಯಲಿದೆ ಎಂದು ಪುತ್ರ ಪಚ್ಚು ತಿಳಿಸಿದ್ದಾರೆ.
----
ಅಚ್ಚು ಮುಂಡಾಜೆ, ಪ್ರಿನ್ಸಿಪಲ್ ಎಡಿಟರ್, ಲೈವ್ ಮೀಡಿಯಾ ಟೀಮ್: 9449640130