ಮುಂಡಾಜೆ ಸರಕಾರಿ ಶಾಲೆಯಲ್ಲಿ ಆಂಗ್ಲಮಾದ್ಯಮ ತರಗತಿ ಉದ್ಘಾಟನೆ
ಶತಮಾನೋತ್ಸವ ಪ್ರಯುಕ್ತ ಅಭಿವೃದ್ಧಿ ಬಗ್ಗೆ ಸಮಾಲೋಚನೆ
ಬೆಳ್ತಂಗಡಿ; ಸರಕಾರಿ ಶಾಲೆಗಳನ್ನು ಇದು ಸರಕಾರಿ ಶಾಲೆ, ಇದರ ಸಂಪೂರ್ಣ ಜವಾಬ್ದಾರಿ ಸರಕಾರದ್ದು ಎಂಬ ನಮ್ಮ ಮನಸ್ಥಿತಿ ಮೊದಲು ಬದಲಾಗಬೇಕು. ಇವುಗಳನ್ನು ಅಭಿವೃದ್ಧಿ ಪಥದತ್ತ ಸಾಗಿಸಲು ಊರವರು ಹಾಗೂ ಹಳೆ ವಿದ್ಯಾರ್ಥಿಗಳು ಪ್ರಮುಖ ಪಾತ್ರವಹಿಸಬೇಕು. ಶತಮಾನೋತ್ಸವ ಸಮಿತಿ ವತಿಯಿಂದ, ಸದ್ರಿ ಶಾಲೆಯಲ್ಲಿ 100 ವರ್ಷಗಳ ಅವಧಿಯಲ್ಲಿ ಕಲಿತ ಹಳೆವಿದ್ಯಾರ್ಥಿಗಳನ್ನು, ಊರವರನ್ನು, ಪೋಷಕರನ್ನು ಮನಗೆಲ್ಲುವ ಪ್ರಯತ್ನ ಮಾಡಿ ಮೂಲಭೂತ ಸೌಲಭ್ಯಗಳನ್ನು ಪೂರೈಸಿಕೊಳ್ಳಬೇಕು. ಪೂರಕವಾದ ಸಹಕಾರ ಶಾಸಕನಾಗಿ ನೀಡಲು ನಾನು ಬದ್ಧ ಎಂದು ಶಾಸಕ ಹರೀಶ್ ಪೂಂಜ ಭರವಸೆ ನೀಡಿದರು.
ಮುಂಡಾಜೆ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಗೆ ಸರಕಾರದಿಂದ ಮಂಜೂರಾದ ಆಂಗ್ಲಮಾಧ್ಯಮ ಒಂದನೇ ತರಗತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಒಂದನೇ ತರಗತಿ ಪುಟಾಣಿಗಳಾದ ಅಭಿಜ್ಞಾ ಮತ್ತು ವರ್ಷಿತಾ ಅವರಿಂದಲೇ ಶಾಸಕರು ದೀಪಬೆಳಗಿಸಿದರು.
ಬಳಿಕ ನಡೆದ ಶಾಲೆಯ ಶತಮಾನೋತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಶಾಸಕರು, ಈಗಾಗಲೇ ಎರಡು ನೂತನ ಕೊಠಡಿಗಳಿಗೆ 22.5 ಲಕ್ಷ ರೂ. ಅನುದಾನವನ್ನು ಶಿಕ್ಷಣ ಇಲಾಖೆ ಮೂಲಕ ಒದಗಿಸಲಾಗಿದೆ. ಹಳೆ ವಿದ್ಯಾರ್ಥಿಗಳು ಹಾಗೂ ಊರವರು ಸೇರಿ ಹೆಚ್ಚಿನ ಕೊಠಡಿಗಳ ನಿರ್ಮಾಣಕ್ಕೆ ಪಣತೊಡಬೇಕು. ಇದಕ್ಕಾಗಿ ಬೈಲುವಾರು ಉಪಸಮಿತಿಗಳನ್ನು ರಚಿಸಿ ಯೋಜನಾನಿಧಿ ಸಂಗ್ರಹಿಸಬೇಕು ಎಂದು ಸಲಹೆ ನೀಡಿದರು.
ಶತಮಾನೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಎ. ರಾಮಣ್ಣ ಶೆಟ್ಟಿ, ಕಾರ್ಯದರ್ಶಿ ಬಾಬು ಪೂಜಾರಿ ಕೂಳೂರು, ಕನ್ವೀನರ್ ನಾಮದೇವ ರಾವ್, ಎಸ್‌ಡಿಎಂಸಿ ಅಧ್ಯಕ್ಷ ಗಣೇಶ್ ಬಂಗೇರ ಕೂಳೂರು ಅಭಿಪ್ರಾಯ ವ್ಯಕ್ತಪಡಿಸಿದರು.
ಗ್ರಾಪಂ ಅಧ್ಯಕ್ಷೆ ರಂಜಿನಿ, ಪಿಡಿಒ ಸುಮಾ ಎ. ಎಸ್ ವೇದಿಕೆಯಲ್ಲಿದ್ದರು.
ಗ್ರಾ.ಪಂ ಉಪಾಧ್ಯಕ್ಷೆ ದಿಶಾ ಪಟವರ್ಧನ್ ಸಹಿತ ಸದಸ್ಯರುಗಳು, ಎಸ್‌ಡಿಎಂಸಿ ಸದಸ್ಯರುಗಳು, ಊರಿನ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿ ಚರ್ಚೆಯಲ್ಲಿ ತೊಡಗಿಸಿಕೊಂಡರು. ಶತಮಾನೋತ್ಸವ ಸಮಿತಿ ಗೌರವ ಸಲಹೆಗಾರರಲ್ಲೋರ್ವರಾದ ಅಡೂರು ವೆಂಕಟ್ರಾಯ ಪ್ರಸ್ತಾವನೆಗೈದರು.
ಪ್ರ. ಕಾರ್ಯದರ್ಶಿ ಸೇವಂತಿ ಸ್ವಾಗತಿಸಿದರು. ಕಾರ್ಯದರ್ಶಿ ಅಶ್ರಫ್ ಆಲಿಕುಂಞಿ ಮುಂಡಾಜೆ ಕಾರ್ಯಕ್ರಮ ನಿರೂಪಿಸಿದರು. ಶತಮಾನೋತ್ಸವ ಸಮಿತಿ ಅಧ್ಯಕ್ಷ ಅಡೂರು ಗೋಪಾಲಕೃಷ್ಣ ರಾವ್ ಅಧ್ಯಕ್ಷೀಯ ಮಾತುಗಳನ್ನಾಡಿ ವಂದಿಸಿದರು.