ಬೆಳ್ತಂಗಡಿ: ಮದ್ಯವರ್ಜನದಂತಹಾ ದುಶ್ಚಟದಿಂದ ಜನರನ್ನು ಅಮಲುಮುಕ್ತ ಸಮಾಜದೆಡೆಗೆ ಪರಿವರ್ತಿಸಲು ರಾಜಕಾರಣದಿಂದ ಸಾಧ್ಯವಿಲ್ಲ. ಭಾರತ ದೇಶ ಧರ್ಮದ ಜಾಗೃತಿಯ ನೆಲೆನಿಂತಿರುವಂತಹದ್ದು. ಧರ್ಮಸ್ಥಳದಲ್ಲಿ ಧರ್ಮಕ್ಕಾಗಿ ಜೀವನವನ್ನೇ ತೊಡಗಿಸಿಕೊಂಡಿರುವ ಸಾಕ್ಷಾತ್ ಶಿವನ ಪ್ರತಿರೂಪದಂತಿರುವ ಡಾ. ಡಿ ವೀರೇಂದ್ರ ಹೆಗ್ಗಡೆಯವರಂತಹಾ ಮಹಾತ್ಮರಿಂದ ಮಾತ್ರ ಸಾಧ್ಯ ಎಂದು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಮಲ್ಲಿಕಾರ್ಜುನ ಬಸವಣ್ಣೆಪ್ಪ ತುಬಾಕಿ ಅಭಿಪ್ರಾಯಪಟ್ಟರು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇದರ ವತಿಯಿಂದ ರಾಜ್ಯಾದ್ಯಂತ ನಡೆಸಲಾದ ಮದ್ಯವರ್ಜನ ಶಿಬಿರಗಳಲ್ಲಿ ಭಾಗವಹಿಸಿ ಸಂತೃಪ್ತ ಜೀವನ ನಡೆಸುತ್ತಿರುವ ನವಜೀವನ ಸಮಿತಿ ಸದಸ್ಯರ ಶತದಿನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.ಈ
ಹರ್ ಘರ್ ತಿರಂಗಾ ಅಭಿಯಾನಕ್ಕೆ ಚಾಲನೆ ನೀಡಿದ ರಾಜ್ಯಸಭಾ ಸದಸ್ಯರೂ ಆಗಿರುವ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ನಿಮ್ಮ ಶತದಿನೋತ್ಸವ ನಿಮಗೆ ಮಾತ್ರ ಸಂಭ್ರಮವಲ್ಲ.ನೀವೆಲ್ಲಾ 100 ದಿನಗಳಲ್ಲಿ ತಪಸ್ಸು ಮಾಡಿ ಬಂದಿದ್ದೀರಿ. ಆದ್ದರಿಂದ ನಮಗೂ ಇದು ಸಂಭ್ರಮವಾಗಿದೆ ಎಂದರು.
ದುಶ್ಚಟದಿಂದ ಹೊರಬರಲು ಬಲಾತ್ಕಾರದಿಂದ ಸಾಧ್ಯವಿಲ್ಲ. ಸ್ವಯಂ ಪ್ರೇರಣೆ ಮತ್ತು ಪ್ರೀತಿ, ಸ್ನೇಹದಿಂದ ಮಾತ್ರ ಈ ಪರಿವರ್ತನೆ ಸಾಧ್ಯ ಎಂದರು.
ಈ ಸಂದರ್ಭದಲ್ಲಿ ನವಜೀವನ ಸಮಿತಿ ಕುಟುಂಬದ ಸದಸ್ಯೆ ಭಾಗ್ಯಲಕ್ಷ್ಮೀ ಕೊಪ್ಪಳ ಮತ್ತು ಲತಾ ಚನ್ನಬಸಪ್ಪ ಚೆನ್ನಗಿರಿ ಅನಿಸಿಕೆ ವ್ಯಕ್ತಪಡಿಸಿದರು.ವೇದಿಕೆಯಲ್ಲಿ ಮಾಣಿಲ ಶ್ರೀಧಾಮದ ಯತಿಗಳಾದ ಮೋಹನದಾಸ ಸ್ವಾಮೀಜಿಯವರು,ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್ ಹೆಚ್ ಮಂಜುನಾಥ್, ಜನಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷ ವಸಂತ ಸಲ್ಯಾನ್, ಕೃಷ್ಣಕುಮಾರ್ ಸಿಂಗ್, ಜನಜಾಗೃತಿ ವರ್ಷದ ವೇದಿಕೆಯ ಟ್ರಸ್ಟಿಗಳೂ ಆಗಿರುವ ಮನೋರೋಗ ತಜ್ಞ ಡಾ. ಪಿ.ವಿ ಭಂಡಾರಿ ಉಡುಪಿ ಮತ್ತು ಡಾ. ಶ್ರೀನಿವಾಸ ಭಟ್, ಶಾಂತಾರಾಮ ಪೈ, ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಎಸ್.ಎಸ್ ಮೊದಲಾದವರು ಉಪಸ್ಥಿತರಿದ್ದರು.
ಜನಜಾಗೃತಿ ವೇದಿಕೆಯ ಯೋಜನಾಧಿಕಾರಿ ನಾಗೇಶ್ ವೈ. ಎ ಮತ್ತು ಗಣೇಶ್ ಪಿ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಅಖಿಲ ಭಾರತ ಜನಜಾಗೃತಿ ವೇದಿಕೆಯ ಕಾರ್ಯದರ್ಶಿ ವಿವೇಕ್ ವಿನ್ಸೆಂಟ್ ಪಾಯಿಸ್ ಸ್ವಾಗತಿಸಿ ಪ್ರಸ್ತಾವನೆಗೈದರು.
ಅಖಿಲ ಜಯಕರ್ನಾಟಕ ಜನಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ವಿ ರಾಮಸ್ವಾಮಿ ವಂದನಾರ್ಪಣೆಗೈದರು.
ಗೌರವಾರ್ಪಣೆ;
ರಾಜ್ಯಸಭೆಗೆ ನಾಮನಿರ್ದೇಶನ ಗೊಂಡಿರುವ ಡಾ. ಡಿ ವೀರೇಂದ್ರ ಹೆಗ್ಗಡೆಯವರಿಗೆ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ವತಿಯಿಂದ ಮತ್ತು ಬೆಳ್ತಂಗಡಿ, ಗುರುವಾಯನಕೆರೆ, ಮೂಡಿಗೆರೆ ಮತ್ತು ಸುಳ್ಯ ಇಲ್ಲಿನ 'ಶೌರ್ಯ' ವಿಪತ್ತು ನಿರ್ವಹಣಾ ಬಳಗದ ವತಿಯಿಂದ ಗೌರವಾರ್ಪಣೆ ನಡೆಯಿತು.
------
ವರದಿ; ಅಚ್ಚು ಮುಂಡಾಜೆ
9449640130