ಬೆಳ್ತಂಗಡಿ; ಸ್ವಾತಂತ್ರ್ಯೋತ್ಸವ ಸಂಭ್ರಮದ 75 ನೇ ವರ್ಷಾಚರಣೆಯ ಜೊತೆಗೆ ಮಹಾತ್ಮಾ ಗಾಂಧೀಜಿ ಅವರ ವಿಚಾರ ಪರಂಪರೆಯನ್ನೂ ಜೀವಂತಗೊಳಿಸಿ ಪ್ರಚಾರ ಮಾಡುವ ಉದ್ದೇಶದಿಂದ ಹುಟ್ಟಿಕೊಂಡಿರುವ ಗಾಂಧಿ ವಿಚಾರ ವೇದಿಕೆ ಇದರ ವತಿಯಿಂದ ಮುಂಡಾಜೆಯಲ್ಲಿ ಗಾಂಧಿ ಸ್ಮಾರಕ ಆಲದ ಮರದ ಕೆಳಗೆ ಕಾರ್ಯಕ್ರಮ ಆಯೋಜನೆಗೆ ತೀರ್ಮಾನಿಸಲಾಯಿತು.
ಗುರುವಾರ ಉಜಿರೆ ಕೃಷ್ಣಾನುಗ್ರಹ ಸಭಾಂಗಣದಲ್ಲಿ ನಡೆದ ಗಾಂಧಿ ವಿಚಾರ ವೇದಿಕೆ ಮಾತೃಸಮಿತಿ ಸಭೆ ಮತ್ತು ತಾಲೂಕು ಘಟಕದ ಪದಾಧಿಕಾರಿಗಳ ಅಂತಿಮಗೊಳಿಸುವಿಕೆ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಯಿತು.
ಗಾಂಧಿ ವಿಚಾರ ವೇದಿಕೆ ಸ್ಥಾಪಕ ಅಧ್ಯಕ್ಷ ಶ್ರೀಧರ ಜಿ ಭಿಡೆ ಅವರು ಮಾತನಾಡಿ, ಗಾಂಧೀಜಿಯವರ ಸರಳತೆ ನಮ್ಮ ಜೀವನದಲ್ಲಿ ಅಳವಡೊಸಿಕೊಂಡರೆ ನಮಗೆ ಸಮಾಜದಲ್ಲಿ ಸಂದೇಶ ಪ್ರಚಾರ ಮಾಡಲು ಸಾಧ್ಯ. ಆದ್ದರಿಂದ ಚಾವಡಿ ಚರ್ಚೆಗಳ ಮೂಲಕವೇ ವಿಚಾರದ ಪ್ರಚಾರ ಆಗಬೇಕು. ನಮ್ಮದು ಯಾರಿಗೂ ಪ್ರತಿಸ್ಪರ್ಧಿ ಸಂಘಟನೆ ಅಲ್ಲ ಎಂದರು.
ಖ್ಯಾತ ವಿದ್ವಾಂಸ ವಿಷ್ಣು ಭಟ್ ಗೋಖಲೆ ಅವರು ಬರೆದ 1948 ರ ಮುಂಡಾಜೆ ಎಂಬ ಗ್ರಂಥದಲ್ಲಿ ಉಲ್ಲೇಖಿತವಾದ ಮಹಾತ್ಮಾ ಗಾಂಧೀಜಿಯವರ ಚಿತಾಭಸ್ಮವನ್ನು ತಂದು ಮುಂಡಾಜೆ ಭಿಡೆ ತಿರುವು ಬಳಿ ನೆಡಲಾಗಿದ್ದ ಗಾಂಧಿ ಸ್ಮಾರಕ ಆಲದ ಮರದ ಪ್ರದೇಶವನ್ನು ಮುಂದಕ್ಕೆ ಜತಣದಿಂದ ಕಾಯ್ದುಕೊಂಡುಬರುವ ಉದ್ದೇಶದಿಂದ ಗಾಂಧಿ ಜಯಂತಿಯಂದು ಅಲ್ಲಿ ಸರಳ ರೀತಿಯಲ್ಲಿ ಕಾರ್ಯಕ್ರಮ ಆಯೋಜಿಸುವುದು, ಗ್ರಾಮಪಂಚಾಯತ್ ಸಹಾಯದಿಂದ ಗಾಂಧಿ ಸ್ಮಾರಕವನ್ನು ಸಂರಕ್ಷಿಸಿ ಅಂದು ಅದಕ್ಕೆ ಶಾಸಕರನ್ನು ಆಹ್ವಾನಿಸಿ ನಾಮಫಲಕ ಅಳವಡಿಸುವುದು ಇತ್ಯಾಧಿ ವಿಚಾರಗಳ ಬಗ್ಗೆ ಸದಸ್ಯರ ಒಪ್ಪಿಗೆ ಪಡೆಯಲಾಯಿತು.
ಅಧ್ಯಕ್ಷತೆ ವಹಿಸಿದ್ದ ಗಾಂಧಿ ವಿಚಾರ ವೇದಿಕೆ ತಾ.ಅಧ್ಯಕ್ಷ ಶರತ್‌ಕೃಷ್ಣ ಪಡುವೆಟ್ನಾಯ, ಕಾರ್ಯಾಧ್ಯಕ್ಷ ದೇವಿಪ್ರಸಾದ್, ಮಾತೃ ಸಮಿತಿಯ ಸಂಚಾಲಕ ಖ್ಯಾತ ಸಾಹಿತಿ ಅರವಿಂದ ಚೊಕ್ಕಾಡಿ ವಿಷಯ ಮಂಡಿಸಿದರು. ಸಂಯೋಜಕ ಕಾಂಚೋಡು ಗೋಪಾಲಕೃಷ್ಣ ಭಟ್ ಅನಿಸಿಕೆ ವ್ಯಕ್ತಪಡಿಸಿದರು. ಮಹಿಳಾ ವಿಭಾಗದ ಉಪಾಧ್ಯಕ್ಷೆ ವಿನುತಾರಜತ ಗೌಡ ಸಹಿತ ಗಾಂಧಿ ವಿಚಾರಾಸಕ್ತ ಸದಸ್ಯರುಗಳು ಭಾಗವಹಿಸಿದ್ದರು.
ಸಭೆಯಲ್ಲಿ ಹೊಸ ಸದಸ್ಯರು ತಮ್ಮನ್ನು ಪರಿಚಯಿಸಿಕೊಂಡರು. ತಾಲೂಕಿನಲ್ಲಿ ಪ್ರಸ್ತುತ ಇರುವ 7 ಜಿ.ಪಂ ಕ್ಷೇತ್ರಗಳ ಮಟ್ಟದಲ್ಲಿ ಉಪಾಧ್ಯಕ್ಷರುಗಳನ್ನು ಆಯ್ಕೆ ಮಾಡಲಾಗಿ ಮುಂದಕ್ಕೆ ಅವರ ಮೂಲಕ ಸಮಿತಿಗಳನ್ನು ಗ್ರಾಮ ಮಟ್ಟಕ್ಕೆ ವಿಸ್ತರಿಸುವ ನಿರ್ಧಾರ ಕೈಗೊಳ್ಳಲಾಯಿತು.
ಮಹಿಳೆಯರು ಮತ್ತು ಕಾಲೇಜು ವಿದ್ಯಾರ್ಥಿಗಳು ಸಭೆಯಲ್ಲಿ ಗಣನೀಯವಾಗಿ ಭಾಗವಹಿಸಿದ್ದರು.ವಿದ್ಯಾರ್ಥಿ ಸಾಹಿತಿ ಅತುಲ್ ದಾಮ್ಲೆ ವಿದ್ಯಾರ್ಥಿಗಳ ತೊಡಗಿಸಿಕೊಳ್ಳುವಿಕೆಯ ಅಗತ್ಯತೆ ಬಗ್ಗೆ ತಿಳಿಸಿದರು. ಮಾತೃ ಸಮಿತಿ ಜತೆ ಕಾರ್ಯದರ್ಶಿ ಶಶಿಧರ ಠೋಸರ್, ಅಶ್ರಫ್ ಆಲಿ ಕುಂಞಿ ಮುಂತಾದವರು ಭಾಗವಹಿಸಿದ್ದರು.
ತಾ.ಸಮಿತಿ ಕಾರ್ಯದರ್ಶಿ ವಿದ್ಯಾಕುಮಾರ್ ಓಡಲ ವಂದಿಸಿದರು.