ಬೆಳ್ತಂಗಡಿ; ಕಕ್ಕಿಂಜೆ ಮುಖ್ಯ ರಸ್ತೆ ಬದಿ ಇರುವ ಖಾಸಗಿ ವಸತಿಗೃಹದಲ್ಲಿ ವಾಸ್ತವ್ಯ ಹೂಡಿದ್ದ ಬೇಲೂರಿನ ಜೆಪಿ ನಗರ ಹೇಮಾವತಿ ನಗರ ನಿವಾಸಿ
ಕುಮಾರ್ ಎಮ್ ಎಸ್ (36) ಎಂಬವರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ನಡೆದಿದೆ. ಅವರು ಕೊನೆಯದಾಗಿ ಪತ್ನಿಗೆ ಕರೆ ಮಾಡಿ ಬಳಿಕ ಕೃತ್ಯವೆಸಗಿಕೊಂಡಿದ್ದಾರೆ.
ಈ ಬಗ್ಗೆ ಮೃತರ ಅಣ್ಣ ರಾಜು ಎಂ ಅವರು ಠಾಣೆಗೆ ದೂರು ನೀಡಿದ್ದಾರೆ.
ಕುಮಾರ್ ಅವರು ಅವರ ಅಣ್ಣನ ದ್ವಿಚಕ್ರ ವಾಹನ ಪಡೆದು ಜ.11 ರಂದು ಮನೆಯಿಂದ ಹೊರಟವರೇ ಜ. 12 ರಂದು ಬೆಳಿಗ್ಗೆ 8 ಗಂಟೆಗೆ ಪತ್ನಿಗೆ ಕರೆ ಮಾಡಿ, ತಾನು ಧರ್ಮಸ್ಥಳದಿಂದ 10 ಕಿ ಮಿ ದೂರ ಇರುವುದಾಗಿ ತಿಳಿಸಿದ್ದರು. ಬಳಿಕ ಎಷ್ಟೇ ಪ್ರಯತ್ನಿಸಿದರೂ ಕರೆ ಸ್ವೀಕರಿಸುತ್ತಿರಲಿಲ್ಲ. ಆ ಹಿನ್ನೆಲೆಯಲ್ಲಿ ಅವರ ಅಣ್ಣ ಹಾಗೂ ಸ್ನೇಹಿತರ ಜೊತೆ ಹುಡುಕುತ್ತಾ ಧರ್ಮಸ್ಥಳ ಕಡೆಗೆ ಬರುವ ವೇಳೆ ಅವರ ದ್ವಿಚಕ್ರ ವಾಹನ ಕಕ್ಕಿಂಜೆಯ ಖಾಸಗಿ ವಸತಿಗೃಹದ ಎದುರು ಇರುವುದನ್ನು ಗುರುತಿಸಿ ವಿಚಾರಿಸಿದರು. ವಸತಿಗೃಹದ ಮೇಲ್ವಿಚಾರಕರ ಮೂಲಕ ಪರಿಶೀಲಿಸಲಾಗಿ, ಅವರು ಬಾಡಿಗೆಗೆ ಪಡೆದಿದ್ದ ಕೊಠಡಿಯಲ್ಲಿ ಕಬ್ಬಣದ ಕೊಂಡಿಗೆ ನೈಲಾನ್ ಹಗ್ಗದಿಂದ ಕುತ್ತಿಗೆಗೆ ಬಿಗಿದು ಕೃತ್ಯವೆಸಗಿರುವುದು ತಿಳಿದುಬಂದಿದೆ.
ಮೃತರು ರಿಯಲ್ ಎಸ್ಟೇಟ್ ವ್ಯವಹಾರ ನಡೆಸಿಕೊಂಡಿದ್ದು ಅದಕ್ಕಾಗಿ ಖಾಸಗಿ ವ್ಯಕ್ತಿಗಳಿಂದ ಕೈ ಸಾಲವನ್ನು ಪಡೆದು, ಸಾಲ ತೀರಿಸಲಾಗದೆ ಮನನೊಂದು ಆತ್ಮ ಹತ್ಯೆ ಮಾಡಿಕೊಂಡಿದ್ದಾಗಿರುತ್ತದೆ ಎಂದು ಅವರ ಅಣ್ಣ ನೀಡಿದ ಪೊಲೀಸ್ ದೂರಿನಲ್ಲಿ ವಿವರಿಸಿದ್ದಾರೆ.