ಬೆಳ್ತಂಗಡಿ: ಇಲ್ಲಿಯ ಸಾಂತೋಮ್ ಟವರ್‌ನಲ್ಲಿ ಕಾರ್ಯಾಚರಿಸುತ್ತಿರುವ ಬೆಳ್ತಂಗಡಿ ಸಿರಿಯನ್ ಕಥೊಲಿಕ್ ವಿವಿಧೋದ್ದೇಶ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೋಸೆಫ್ ಸಿ. (56.ವ) ಅವರು ಹೃದಯಾಘಾತದಿಂದ ಬುಧವಾರ ನಿಧನರಾಗಿದ್ದಾರೆ.
ಮಧ್ಯಾಹ್ನ ಕಛೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂದರ್ಭದಲ್ಲಿ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು, ಪಕ್ಕದಲ್ಲೇ ಕಾರ್ಯನಿರ್ವಹಿಸುವ ಸ್ಪಂದನಪಾಲಿಕ್ಲಿನಿಕ್‌ನಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಅಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.
ಹಿಂದೆ ಬೆಳ್ತಂಗಡಿ ಧರ್ಮಪ್ರಾಂತ್ಯದ ಜ್ಞಾನ ನಿಲಯದ ಧರ್ಮೋಪದೇಶ ಕೇಂದ್ರದಲ್ಲಿ ಸುಮಾರು 10 ವರ್ಷಗಳ ಕಾಲ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿದ್ದ ಜೋಸೆಫ್ ಅವರು, ಬಳಿಕ ಸಿರಿಯನ್ ಕಥೊಲಿಕ್ ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕಳೆದ 11 ವರ್ಷಗಳಿಂದ ಕರ್ತವ್ಯದಲ್ಲಿದ್ದಾರೆ.ಮೃತರು ಪತ್ನಿ ಸಿಂಧೂ ಜೋಸೆಫ್, ಪುತ್ರರಾದ ಜೋನ್ಸನ್ ಪಿ.ಜೆ, ರೋಷನ್ ಪಿ.ಜೆ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.