ಬೆಳ್ತಂಗಡಿ: ಇತ್ತೀಚೆಗೆ ಉಜಿರೆಯಲ್ಲಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಹೆಸರಿನಲ್ಲಿ ಬೆಂಗಳೂರಿನಿಂದ ಕೆಲವು ಪದಾಧಿಕಾರಿಗಳು ಆಗಮಿಸಿ ಸಭೆ ನಡೆಸಿದ ಬೆನ್ನಿಗೇ ತಾಲೂಕಿನಲ್ಲಿ ಈ ಹಿಂದೆಯೇ ಅಸ್ತಿತ್ವದಲ್ಲಿರುವ ಎಕ್ಸ ಸರ್ವಿಸ್‌ಮೆನ್ಸ್ ಅಸೋಸಿಯೇಷನ್ ಅದರ ವಿರುದ್ಧ ಅಧಿಕೃತ ಪತ್ರಿಕಾ ಹೇಳಿಕೆ ಬಿಡುಗಡೆಗೊಳಿಸಿದೆ.
ದಕ್ಷಿಣ ಕನ್ನಡ ಜಿಲ್ಲಾ ಮಾಜಿ ಸೈನಿಕರ ಸಂಘವನ್ನು ಕೇಂದ್ರವಾಗಿಟ್ಟುಕೊಂಡು
ಬೆಳ್ತಂಗಡಿ ತಾಲೂಕಿನಲ್ಲಿ ಅಧಿಕೃತವಾಗಿ ಎಕ್ಸ್-ಸರ್ವೀಸ್‌ಮೆನ್ಸ್ ಆಸೋಸಿಯೇಷನ್(ರಿ) ಬೆಳ್ತಂಗಡಿ ಎಂಬ ಹೆಸರಿನಲ್ಲಿ ಸಂಘಟನೆ ನೋಂದಾವಣೆಗೊಂಡು ಕಳೆದ ಹಲವಾರು ವರ್ಷಗಳಿಂದ ಕಾರ್ಯಾಚರಿಸುತ್ತಿದೆ.
ಬೆಳ್ತಂಗಡಿ ತಾಲೂಕಿನಲ್ಲಿ ನಮ್ಮ ಸಂಘಕ್ಕೆ ಯಾವುದೇ ಪರ್‍ಯಾಯ ಸಂಘ ಇರುವುದಿಲ್ಲ ಎಂದು ಸಂಘವು ದೃಢಪಡಿಸಿದೆ.
ಸಂಘದ ಸದಸ್ಯರು ಬೇರೆ ಯಾವುದೇ ಸಂಘಟನೆಯಲ್ಲಿ ತೊಡಗಿಸಿಕೊಂಡು ಅದರಿಂದಾಗಿ ಸದರಿ ಸದಸ್ಯರುಗಳಿಗೆ, ಸಾರ್ವಜನಿಕರಿಗೆ ತೊಂದರೆ ಅಥವಾ ಗೌರವಕ್ಕೆ ಧಕ್ಕೆಯಾದಲ್ಲಿ ಮಾಜಿ ಸೈನಿಕರ ಸಂಘ ಬೆಳ್ತಂಗಡಿ ಯಾವುದೇ ರೀತಿಯಲ್ಲಿ ಜವಾಬ್ದಾರಿಯಾಗಿರುವುದಿಲ್ಲ ಎಂದು ಸಂಘದ ಅಧ್ಯಕ್ಷ ಶ್ರೀಕೃಷ್ಣ ಭಟ್ ಮತ್ತು ಕಾರ್ಯದರ್ಶಿ ಮುಹಮ್ಮದ್ ರಫಿ ಪ್ರಕಟಣೆ ನೀಡಿದ್ದಾರೆ.
ಜೊತೆಗೆ ಸೇವೆಯಿಂದ ನಿವೃತ್ತಿಗೊಂಡು ಸಂಘದ ಸದಸ್ಯತ್ವವನ್ನು ಪಡೆಯದೇ ಇರುವ ನಿವೃತ್ತ ಸೈನಿಕರಿಗೆ ಸದಸ್ಯತ್ವವನ್ನು ಪಡೆಯುವಂತೆ ಅವರು ಕೋರಿಕೊಂಡಿದ್ದಾರೆ.
ಬೆಳ್ತಂಗಡಿ ತಾಲೂಕು ಮಾಜಿ ಸೈನಿಕರ ಸಂಘವು 2004-05 ನೇ ಸಾಲಿನಲ್ಲಿ ನೊಂದಾವಣೆಗೊಂಡು ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಅದರ ನೇತೃತ್ವದಲ್ಲಿ ಪ್ರತೀ ವರ್ಷ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ, ವರ್ಷಕ್ಕೆ ಒಂದು ಬಾರಿ ಸೈನಿಕರ ಕುಟುಂಬೋತ್ಸವ ಕಾರ್ಯಕ್ರಮ, ಮನೋರಂಜನಾತ್ಮಕ ಆಟೋಟ ಸ್ಪರ್ಧೆಗಳನ್ನು ಆಯೋಜಿಸುವುದು, ಮಾಜಿಸೈನಿಕರಿಗೆ ಕಾನೂನಾತ್ಮಕ ತೊಂದರೆಗಳು ಆದಲ್ಲಿಅದಕ್ಕೆ ಸ್ಪಂದಿಸುವುದು, ಮಾಜಿ ಸೈನಿಕರ ಅಕಾಲಿಕಮರಣ ಅಥವಾ ಕರ್ತವ್ಯ ನಿರತ ಸೈನಿಕರ ಅಕಾಲಿಕ ಮರಣ ಇತ್ಯಾಧಿ ಸಂಭವಿಸಿದ ವೇಳೆ ಬೇಕಾದ ಎಲ್ಲಾ ಅಗತ್ಯ ಕೆಲಸ ಕಾರ್ಯಗಳನ್ನು ಮಾಡುತ್ತಾ ಬರುತ್ತಿದೆ.
ಸಂಘಕ್ಕೆ ಈಗಾಗಲೇ ಸರಕಾರದ ವತಿಯಿಂದ ಲಾಯಿಲ ಗ್ರಾಮದ ಕಾಶಿಬೆಟ್ಟು ಎಂಬಲ್ಲಿ ಸ್ವಂತ ಜಮೀನು ಕೂಡ ದೊರಕಿದೆ.