ಬೆಳ್ತಂಗಡಿ; ವೇಣೂರು ರಸ್ತೆಯಲ್ಲಿ ಸೋಮವಾರ ನಡೆದ ರಸ್ತೆ ಅಪಘಾತದಲ್ಲಿ ಗೋಳಿಯಂಗಡಿ ಎಸ್ಸೆಸ್ಸೆಫ್ ಸಂಘಟನೆಯ ಸಕ್ರೀಯ ಕಾರ್ಯಕರ್ತ ಸಾದಿಕ್ ಗೋಳಿಯಂಗಡಿ ಅವರು ಸಾವನ್ನಪ್ಪಿದ್ದಾರೆ.
ಕುಂಡದಬೆಟ್ಟು ಬಳಿ ರಸ್ತೆ ಕಾಮಗಾರಿ ಪ್ರಗತಿಯಲ್ಲಿದ್ದು ಅದಕ್ಕೆ ನೀರು ಸಾಗಾಟ ಮಾಡುತ್ತಿದ್ದ ಟ್ಯಾಂಕರ್ ಮತ್ತು ಸಾದಿಕ್ ಚಲಾಯಿಸಿಕೊಂಡು ಬರುತ್ತಿದ್ದ ದ್ವಿ ಚಕ್ರ ವಾಹನ ಪರಸ್ಪರ ಡಿಕ್ಕಿ ಹೊಡೆದು ಸಾದಿಕ್ ಅವರು ಗಂಭೀರವಾಗಿ ಗಾಯಗೊಂಡಿದ್ದರು.
ತಕ್ಷಣ ಅವರನ್ನು ಮೂಡಬಿದ್ರೆ ಆಸ್ಪತ್ರೆಗೆ ಸಾಗಿಸಿದರೂ ತೀವ್ರ ರಕ್ತಸ್ರಾವ ಕ್ಕೊಳಗಾದ ಅವರು ಅಸುನೀಗಿದರು.
ಸಾದಿಕ್ ಅವರು ಗೋಳಿಯಂಗಡಿ ಮಸೀದಿ ಪಕ್ಕದ ನಿವಾಸಿ, ಐಸ್ ಕ್ಯಾಂಡಿ ವ್ಯಾಪಾರಿ ಇಬ್ರಾಹಿಂ ಮತ್ತು ರುಕಿಯಾ ದಂಪತಿ ಏಕೈಕ ಪುತ್ರರಾಗಿದ್ದಾರೆ. ಕ್ರಿಯಾಶೀಲ ಗುಣ ಹೊಂದಿರುವ ಅವರು ಎಲ್ಲರ ಪ್ರೀತಿಯ ವ್ಯಕ್ತಿಯಾಗಿದ್ದರು. ಎಳನೀರು ಲೈನ್ ಸೇಲ್ ವ್ಯವಹಾರ ದಲ್ಲಿ ತೊಡಗಿಸಿಕೊಂಡಿದ್ದ ಅವರು ಎಸ್ಸೆಸ್ಸೆಫ್ ಸಂಘಟನೆಯ ಗೋಳಿಯಂಗಡಿ ಶಾಖೆಯ ಜೊತೆ ಕಾರ್ಯದರ್ಶಿ ಯಾಗಿದ್ದರು.
ಮೃತದೇಹ ಮೂಡಬಿದ್ರೆ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ವಿಧಿ ನಡೆಸಿ ಕುಟುಂಬಿಕರಿಗೆ ಹಸ್ತಾಂತರಿಸಲಾಯಿತು.
ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ