ಬೆಳ್ತಂಗಡಿ; ಕಾರು ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೆಳ್ತಂಗಡಿಯ ಟಯರ್ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಟೆಕ್ನೀಷಿಯನ್ ಒಬ್ಬರು ಮೃತಪಟ್ಟಿದ್ದಾರೆ.
ಘಟನೆ ಶನಿವಾರ ನಡೆದಿದ್ದು ಅಪಘಾತದಿಂದ ಗಂಭೀರ ಗಾಯಗೊಂಡಿದ್ದ ಅವರು ರವಿವಾರ ಬೆಳಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಮೃತರನ್ನು ಮೂಲತಃ ಸಕಲೇಶಪುರ ನಿವಾಸಿ, ಪ್ರಸ್ತುತ ತಣ್ಣೀರುಪಂತದ ಸಂಬಂಧಿಕರ ಮನೆಯಲ್ಲಿ ನೆಲೆಸಿದ್ದ ಅರುಣ್ (23) ಎಂದು ತಿಳಿದುಬಂದಿದೆ.
ಯುವಕ ಕಳೆದ ಒಂದು ವರ್ಷದಿಂದ ಬೆಳ್ತಂಗಡಿ ಚರ್ಚ್ ಕ್ರಾಸ್ ಬಳಿ ಇರುವ ಟಯರ್ ಕೇರ್ ಸಂಸ್ಥೆಯಲ್ಲಿ ಟೆಕ್ನೀಷಿಯನ್ ಆಗಿ ದುಡಿಯುತ್ತಿದ್ದರು. ಇವರು ರಾತ್ರಿ 8.00 ಕ್ಕೆ ಎಂದಿನಂತೆ ಕೆಲಸ ಮುಗಿಸಿ ಬೈಕಿನಲ್ಲಿ ತಣ್ಣೀರುಪಂತ ಕಡೆಗೆ ಹೊರಟವರು ಗುರುವಾಯನಕೆರೆ ತಲುಪುತ್ತಿದ್ದಂತೆ ಎದುರಿನಿಂದ ಬಂದ ಧರ್ಮಸ್ಥಳದ ವ್ಯಕ್ತಿ ಚಲಾಯಿಸುತ್ತಿದ್ದ ಶಿಫ್ಟ್ ಕಾರು ಡಿಕ್ಕಿ ಹೊಡೆದು ಅಪಘಾತವಾಗಿದೆ. ಈ ವೇಳೆ ಕಾರಿನ ಮುಂಭಾಗದ ಟಯರ್ ಒಡೆದು ಹೋದರೆ, ಅರುಣ್ ಚಲಾಯಿಸುತ್ತಿದ್ದ ಬೈಕ್ ನುಜ್ಜುಗುಜ್ಜಾಗಿದೆ. ಈವೇಳೆ ಅರುಣ್ ಅವರ ಎರಡೂ ಕಾಲುಗಳು ಜರ್ಝರಿತಗೊಂಡು ತೀವ್ರ ರಕ್ತಸ್ರಾವ ವಾಗಿತ್ತು. ಅಪಘಾತ ಆದ ತಕ್ಷಣ ಗಾಯಾಳುವಿಗೆ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ರವಿವಾರ ಬೆಳಗ್ಗೆ ಅವರು ಅಸುನೀಗಿದ್ದಾರೆ. ಬೆಳ್ತಂಗಡಿ ಸಂಚಾರಿ ಠಾಣಾ ಎಸ್.ಐ ಓಡಿಯಪ್ಪ ಮತ್ತು ಸಿಬ್ಬಂದಿಗಳು ಧಾವಿಸಿ ಅಗತ್ಯ ಕಾನೂನು ಕ್ರಮ ಜರುಗಿಸಿದರು.