ಬೆಸ್ಟ್ ಫೌಂಡೇಶನ್ ಬೆಳ್ತಂಗಡಿ ವತಿಯಿಂದ ಯಕ್ಷಗಾನ ನಾಟ್ಯ ತರಬೇತಿ ಉದ್ಘಾಟನೆ; ಬಹುಮಾನಗಳ ವಿತರಣೆ
ಬೆಳ್ತಂಗಡಿ; ಯಕ್ಷಗಾನ ಕಲೆ ಕಾಲಮಿತಿಗೆ ಬಂದಿರುವುದು ಖೇದಕರ. ಈ ಕಲೆ ನಿಂತ ನೀರಾಗಬಾರದು.ಇದರ ಕಳೆ ಮುಂದುವರಿಯಬೇಕು. ನಾವು ಹೆಜ್ಜೆ ಇಡುವ ಕ್ಷೇತ್ರದ ಬಗ್ಗೆ ನಮಗೆ ತೀವ್ರವಾದ ಆಸಕ್ತಿ ಮತ್ತು ಪ್ರೀತಿ ಇದ್ದರೆ ಆ ಕ್ಷೇತ್ರದಲ್ಲಿ ನಾವು ಸಾಧನೆಯನ್ನು ಮಾಡಬಹುದು ಎಂದು ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘದ ಸಂಸ್ಥಾಪಕ ಅಧ್ಯಕ್ಷ ನಾಮದೇವ ರಾವ್ ಅವರು ಹೇಳಿದರು.
ಬೆಸ್ಟ್ ಫೌಂಡೇಶನ್ ಬೆಳ್ತಂಗಡಿ ಇದರ ವತಿಯಿಂದ ಯಕ್ಷಗಾನ ನಾಟ್ಯ ತರಬೇತಿ ಮತ್ತು ದೇಶಭಕ್ತಿಗೀತೆ, ಭಾಷಣ ಸ್ಪರ್ಧೆ, ಶ್ರೀಕೃಷ್ಣ ವೇಷ ಫೋಟೋ ಸ್ಪರ್ಧೆಯ ಬಹುಮಾನ ವಿತರಣೆ ಸಮಾರಂಭದಲ್ಲಿ ಅವರು ಪ್ರಧಾನ ಅತಿಥಿಯಾಗಿ ಮಾತನಾಡುತ್ತಿದ್ದರು.ರಕ್ಷಿತ್ ಶಿವರಾಮ್ ಅವರು ಎಲದಲಿಯವರೋ ಅಲ್ಲ. ಅವರು ಹುಟ್ಟಿದ್ದೇ ಬೆಳ್ತಂಗಡಿಯಲ್ಲಿ. ಉದ್ಯಮದ ಕಾರಣಕ್ಕೆ ಅವರು ಬೆಂಗಳೂರಿನಲ್ಲಿದ್ದು ತಮ್ಮ ಸಂಪಾದನೆಯಲ್ಲಿ ಒಂದಂಶವನ್ನು ತನ್ನ ಹುಟ್ಟೂರಿಗೆ ನೀಡಬೇಕೆಂಬ ಉದ್ದೇಶದಿಂದ ಬೆಸ್ಟ್ ಫೌಂಡೇಶನ್ ಕಟ್ಟಿಕೊಂಡಿದ್ದಾರೆ. ತರಬೇತಿ ಶಾಲೆಯನ್ನು ಪ್ರಾರಂಭಿಸಿ ಕಲಾಕುಸುಮಗಳ ಹುಡುಕಾಟ ಆರಂಭಿಸಿರುವುದು ಅಭಿನಂದನಾರ್ಹ ಎಂದರು.
ಖ್ಯಾತ ಕಲಾವಿದರು, ಸಮಾಜ ಸೇವಕರೂ ಆಗಿರುವ ರವಿ ಕಟಪಾಡಿ ಸಮಾರಂಭವನ್ನುದ್ದೇಶಿಸಿ ಮಾತನಾಡಿ, ನಾವು ನಮಗಿಂತ ಮೇಲ್ಮಟ್ಟದಲ್ಲಿರುವವರನ್ನು ಅನುಕರಿಸದೆ ಕೆಳಮಟ್ಟದಲ್ಲಿರುವವ ಬಗ್ಗೆ ಆಲೋಚನೆ ಮಾಡಬೇಕು. ನಮ್ಮ ಆದಾಯ ಎಷ್ಟಿದೆ ಎಂದು ಕೊರಗಿಕೊಳ್ಳುವುದಕ್ಕಿಂತ ನಮ್ಮ ದೇಹದ ಎಲ್ಲಾ ಅಂಗಾಂಗಗಳು ಸುಸ್ಥಿತಿಯಿಂದ ಕೆಲಸ ಮಾಡುತ್ತಿದೆ ಎಂದು ಅಭಿಮಾನಪಟ್ಟುಕೊಳ್ಳಬೇಕು. ನಮ್ಮ ಜೀವನದಲ್ಲಿ ಕೊನೆಗೆ ಉಳಿಯುವಂತದ್ದು ಜನರ ಪ್ರೀತಿ ವಿಶ್ವಾಸ ಮಾತ್ರ. ಆದ್ದರಿಂದ ನಾನು ಕಲಾವಿದನಾಗಿ ಇದುವರೆಗೆ ತಮ್ಮ ತಂಡದಲ್ಲಿರುವ 71ಮಂದಿಯ ಸೇರುವಿಕೆಯಿಂದ 41 ಮಂದಿ ಅರ್ಹರಿಗೆ 80 ಲಕ್ಷ ರೂ.ಗಳ ನೆರವು ನೀಡಲು ಸಾಧ್ಯವಾಗಿದೆ ಎಂದರು.
ಧರ್ಮಸ್ಥಳ ಯಕ್ಷಗಾನ ಮೇಳದ ಖ್ಯಾತ ಕಲಾವಿದ ಚಂದ್ರಶೇಖರ ಧರ್ಮಸ್ಥಳ ಮಾತನಾಡಿ, ಕೇವಲ ಐದನೇ ತರಗತಿ ಮಾತ್ರ ಓದಿರುವ ನಾನು ಇಂದು ಐದು ಬಾರಿ ಅಮೇರಿಕಕ್ಕೆ ಪ್ರಯಾಣ ಮಾಡಿದ್ದರೆ ಅದಕ್ಕೆ ಯಕ್ಷಗಾನ ಕಲಾಭೂಮಿ ಕಾರಣ. ಈ ತರಬೇತಿಯನ್ನು ಮಕ್ಕಳಿಗೆ ನೀಡಲು ರಕ್ಷಿತ್ ಅವರು ನನ್ನನ್ನು ಆಯ್ಕೆ ಮಾಡಿದ್ದು ಅದಕ್ಕೆ ನ್ಯಾಯ ಕೊಡುತ್ತೇನೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಬೆಸ್ಟ್ ಫೌಂಡೇಶನ್ ಬೆಳ್ತಂಗಡಿ ಅಧ್ಯಕ್ಷ, ಹೈಕೋರ್ಟ್ ನ್ಯಾಯವಾದಿ ರಕ್ಷಿತ್ ಶಿವರಾಂ ವಹಿಸಿದ್ದು, ಕೊರೋನಾ ಸಂದರ್ಭದಲ್ಲಿ ನನ್ನ ಊರಿನ ಜನ ಸಂಕಷ್ಟದಲ್ಲಿದ್ದಾರೆ ಎಂದು ತಿಳಿದು ಈ ತಾಲೂಕಿನಲ್ಲಿ ಏನಾದರೂ ಕೆಲಸ ಮಾಡಬೇಕೆಂದು ನಿರ್ಧರಿಸಿದೆ. ತಾಲೂಕಿನಲ್ಲಿ 81 ಗ್ರಾಮಗಳ ಪೈಕಿ ಈಗಾಗಲೇ 70 ಗ್ರಾಮಗಳನ್ನು ನಾನು ಸುತ್ತಾಡಿದ್ದು ಇಲ್ಲಿಯ ಜನರ ಬದುಕಿನ ಬವಣೆ ಅರ್ಥಮಾಡಿಕೊಂಡಿದ್ದೇನೆ. ಈ ತಾಲೂಕಿನಲ್ಲಿ ಐಎಎಸ್, ಐಪಿಎಸ್ ಅಧಿಕಾರಿಗಳನ್ನು ತಯಾರು ಮಾಡುವ ತರಬೇತಿ ಆರಂಭಿಸಲಿದ್ದೇವೆ.ಇಚ್ಛಾ ಶಕ್ತಿ ಇರುವವರು ನೊಂದಾಯಿಸಿಕೊಳ್ಳಿ ಎಂದರು.
ಚಿನ್ಮಯಿ ಜಿ.ಕೆ ಪ್ರಾರ್ಥನೆ ಹಾಡಿದರು. ಅಂಜನಿ ಅನಿಲ್ ಪೈ ಸ್ವಾಗತಿಸಿದರು. ವಿಜಯ್ ಗೌಡ ಅತ್ತಾಜೆ ಕಾರ್ಯಕ್ರಮ ನಿರೂಪಿಸಿದರು. ಗುರುರಾಜ್ ಗುರಿಪಳ್ಳ ಧನ್ಯವಾದವಿತ್ತರು.