ಬೆಳ್ತಂಗಡಿ: ಶಿಕ್ಷಣ ಇಲಾಖೆಯಲ್ಲಿ ಸುದೀರ್ಘ 32 ವರ್ಷಗಳ ಕಾಲ ಸೇವೆ ಸಲ್ಲಿಸಿ ವೃತ್ತಿ ಅವಧಿಯ ಕೊನೇಗೆ ಕುವೆಟ್ಟು ಶಾಲಾ ಮುಖ್ಯೋಪಾಧ್ಯಾಯರಾಗಿ ಕರ್ತವ್ಯದಲ್ಲಿದ್ದ ಕರುಣಾಕರ ಜೆ ಉಚ್ಚಿಲ ಅವರು ಇದೀಗ ವಯೋನಿವೃತ್ತರಾಗಿದ್ದಾರೆ.
ಮಂಗಳೂರು ತಾಲೂಕು ಸೋಮೇಶ್ವರ ಗ್ರಾಮದ ಉಚ್ಚಿಲದಲ್ಲಿ ಹುಟ್ಟಿದ ಇವರು 1988 ರಲ್ಲಿ ಮಂಡ್ಯ ಜಿಲ್ಲೆಯ ಮಳವಳ್ಳಿ ಸರಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದವರಾಗಿದ್ದಾರೆ. ಬೆಳ್ತಂಗಡಿ ತಾಲೂಕಿನಲ್ಲಿ ಗೇರುಕಟ್ಟೆ ಸನಿಹದ ಕೊರಂಜ ಶಾಲೆ ಮತ್ತು ಪಡಂಗಡಿ ಶಾಲೆಯಲ್ಲಿ ಸೇವೆ ಸಲ್ಲಿಸಿ, 2020 ರಲ್ಲಿ ಪೂರ್ಣಕಾಲಿಕ ಮುಖ್ಯೋಪಾಧ್ಯಾಯರಾಗಿ ಪದೋನ್ನತಿ ಹೊಂದಿದ್ದರು.
ಈ ಮಧ್ಯೆ ಅವರು ಕೆಲ ವರ್ಷ ಗುರುವಾಯನಕೆರೆ ಸಮೂಹ ಸಂಪನ್ಮೂಲ ಕೇಂದ್ರದ ಪ್ರಭಾರ ಸಂಪನ್ಮೂಲ ವ್ಯಕ್ತಿಯಾಗಿಯೂ ಸೇವೆ ಸಲ್ಲಿಸಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.
ಶಿಕ್ಷಕ ವೃತ್ತಿಯ ಜೊತೆಗೆ ಅತ್ಯುತ್ತಮ ಸಂಘಟಕರೂ ಆಗಿ ಗುರುತಿಸಿಕೊಂಡಿರುವ ಕರುಣಾಕರ ಜೆ ಉಚ್ಚಿಲ್ ಅವರು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಲ್ಲೂ 17 ವರ್ಷಗಳ ಕಾಲ ಸೇವೆ ಸಲ್ಲಿಸಿರುತ್ತಾರೆ. ಇವರ ಪತ್ನಿ ಉಷಾ ಪಿ ಅವರು ಪ್ರಸ್ತುತ ಓಡಿಲ್ನಾಳ ಸರಕಾರಿ ಶಾಲೆಯಲ್ಲಿ ಮುಖ್ಯಶಿಕ್ಷಕರಾಗಿ ಸೇವೆಯಲ್ಲಿದ್ದರೆ, ರೂಪೇಶ್ ಮತ್ತು ದೀಕ್ಷಾ ಎಂಬಿಬ್ಬರು ಮಕ್ಕಳನ್ನು ಪಡೆದು ಸಂತೃಪ್ತ ಜೀವನ ಸಾಗಿಸುತ್ತಿದ್ದಾರೆ. ಪ್ರಸ್ತುತ ಗೇರುಕಟ್ಟೆಯ ಪರಪ್ಪು ಎಂಬಲ್ಲಿ ಸ್ವಂತ ಮನೆ ಹೊಂದಿ ಸಣ್ಣ ಪ್ರಮಾಣದ ಕೃಷಿಕರಾಗಿಯೂ ತೊಡಗಿಸಿಕೊಂಡಿದ್ದಾರೆ.