ಕೊಲೆ ಆರೋಪಿ ಸಿದ್ದೀಕ್
ಬೆಳ್ತಂಗಡಿ; ತಾಲೂಕಿನ ಪುಂಜಾಲಕಟ್ಟೆ ಠಾಣಾ ವ್ಯಾಪ್ತಿಯ ಬಂಟ್ವಾಳ ಗಡಿಪ್ರದೇಶವಾದ ತೆಂಕಕಜೆಕಾರು ಗ್ರಾಮದ ಕರ್ಲ ನಿವಾಸಿ ರಫೀಕ್(20ವ.) ಎಂಬವರನ್ನು ಚೂರಿಯಿಂದ ಇರಿದು ಬರ್ಬರವಾಗಿ ಕೊಲೆಗೈದ ಆರೋಪಿ ಸಿದ್ದೀಕ್ ಎಂಬಾತನನ್ನು ತ್ವರಿತ ಕಾರ್ಯಾಚರಣೆಯಲ್ಲಿ ಪುಂಜಾಲಕಟ್ಟೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬರ್ಬರವಾಗಿ ಕೊಲೆಯಾಗಿರುವ ರಫೀಕ್
ತೆಂಕಕಜೆಕಾರು ಗ್ರಾಮದ ಕೆಳಗಿನ ಕರ್ಲ ಮನೆ ನಿವಾಸಿ ಸಿದ್ದೀಕ್(30ವ.) ಇದೀಗ ಪೊಲೀಸರ ಅತಿಥಿಯಾಗಿದ್ದು ಘಟನೆ ನಡೆದ ಕೆಲವೇ ಗಂಟೆಗಳ ಅಂತರದಲ್ಲಿ ಆರೋಪಿ ಬಂಧನವಾಗಿದೆ. ಆರೋಪಿ ಸಿದ್ದೀಕ್ ರಫೀಕ್ ಅವರನ್ನು ಕೊಲೆಗೈದುದಲ್ಲದೆ ಮೃತದೇಹವನ್ನು ಬಂಟ್ವಾಳ ತಾಲೂಕಿನ ತೆಂಕಕಜೆಕಾರು ಗ್ರಾಮದ ಕರ್ಲ ಎಂಬಲ್ಲಿನ ರಸ್ತೆ ಬದಿಯ ಮೋರಿಯ ಕೆಳಗೆ ಎಸೆದು ತಲೆಮರೆಸಿಕೊಂಡಿದ್ದ.
ರಫೀಕ್ ಮೃತದೇಹಕಾರು, ಸೊತ್ತುಗಳು ವಶಕ್ಕೆ;
ಆರೋಪಿಯು ಕೃತ್ಯಕ್ಕೆ ಬಳಸಿದ ಮಾರುತಿ ಆಲ್ಟೋ ಕಾರು, ಚಾಕು, ಕೃತ್ಯದ ವೇಳೆ ಆತ ತೊಟ್ಟಿದ್ದ ವಸ್ತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ರಕ್ತಸಿಕ್ತವಾಗಿದ್ದ ಬಟ್ಟೆಯನ್ನು ಆರೋಪಿ ಸಿದ್ದೀಕ್ ಮನೆಗೆ ಕೊಂಡೋಗಿ ತೊಳೆದು ಶುಚಿಗೊಳಿಸಿದ್ದು ಅದನ್ನು ಒದ್ದೆ ರೀತಿಯಲ್ಲೇ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಘಟನೆಯ ವೇಳೆ ಮೃತ ರಫೀಕ್ ಜೀನ್ಸ್ ಪೇಂಟ್ ಮತ್ತು ಕೆಂಪು ಬಣ್ಣದ ಶರ್ಟ್ ಧರಿಸಿದ್ದರು.ಕರ್ಲ ಎಂಬಲ್ಲಿ ಕೊಲೆಯೊಂದು ನಡೆದಿದೆ ಎಂಬ ಮಾಹಿತಿ ಪೊಲೀಸರಿಗೆ ಅದ್ಹೇಗೋ ಗೊತ್ತಾಗಿತ್ತು. ಮೃತದೇಹ ಬಿದ್ದಿದ್ದ ಆ ಪ್ರದೇಶ ಪುಂಜಾಲಕಟ್ಟೆ ಠಾಣಾ ವ್ಯಾಪ್ತಿಯ ಬೀಟ್ ಪೊಲೀಸ್ ವಿಶಾಲಾಕ್ಷಿ ಅವರ ಬೀಟ್ ಏರಿಯಾವಾಗಿದ್ದು, ವಿಚಾರ ತಿಳಿಯುತ್ತಿದ್ದಂತೆಸ್ಥಳಕ್ಕೆ ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ಶಿವಕುಮಾರ್, ಬಂಟ್ವಾಳ ಸರ್ಕಲ್ ಇನ್ಸ್‌ಪೆಕ್ಟರ್ ಟಿ.ಡಿ ನಾಗರಾಜ್, ಪುಂಜಾಲಕಟ್ಟೆ ಠಾಣಾ ಎಸ್. ಐ ಕುಟ್ಟಿ ಎಂ, ಬಂಟ್ವಾಳ ಠಾಣಾ ಎಸ್. ಐ ಪ್ರಸನ್ನ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸ್ವತಃ ಆರೋಪಿ ಸಿದ್ದೀಕ್ ಘಟನಾ ಸ್ಥಳವನ್ನು ತನಿಖಾಧಿಕಾರಿಗೆ ತೋರಿಸುತ್ತಿರುವುದುಬಳಿಕ ಸ್ಥಳಕ್ಕೆ ಎಸ್.ಪಿ ಋಷಿಕೇಶ್ ಭಗವಾನ್ ಸೋನಾವನೆ, ಎಡಿಶನಲ್ ಎಸ್‌ಪಿ ಗಾನಾ ಕುಮಾರ್ ಇವರು ಭೇಟಿ ನೀಡಿ ತನಿಖೆಗೆ ಮಾರ್ಗದರ್ಶನ ನೀಡಿದರು.
ಪೊಲೀಸ್ ಅಧಿಕಾರಿಗಳಿಂದ ಸ್ಥಳ ಪರಿಶೀಲನೆ
ಕೊಲೆ ಏಕೆ ನಡೆಯಿತು?
ಕೊಲೆ ಆರೋಪಿ ಸಿದ್ದೀಕ್ ರೊಂದಿಗೆ ಮೃತ ರಫೀಕ್ ಎಂಬವನು ಹಲವು ಬಾರಿ ಕ್ಷುಲ್ಲಕ ಕಾರಣಗಳಿಗಾಗಿ ಗಲಾಟೆ ಮಾಡುತ್ತಿದ್ದ. ಇದರಿಂದ ಬೇಸತ್ತಿದ್ದ ಆರೋಪಿ ಸಿದ್ದೀಕ್ ರಫೀಕ್‌ನಿಗೆ ಬುದ್ದಿ ಕಲಿಸಬೇಕೆಂದು ಹಲವು ಸಮಯದಿಂದ ಕಾಯುತ್ತಿದ್ದನೆನ್ನಲಾಗಿದೆ.ಅಂತೆಯೆ ರವಿವಾರ ಸಂಜೆ 6 ಗಂಟೆಯ ವೇಳೆಗೆ ಸಂಬಂಧಿಯೇ ಆಗಿರುವ ಸಿದ್ದೀಕ್‌ನ ಮನೆಯ ಮುಂಭಾಗ ಶಟ್ಲ್ ಬ್ಯಾಡ್ಮಿಂಟನ್ ಆಟ ಆಡುತ್ತಿದ್ದ ಸಮಯ ರಫೀಕ್‌ನನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಲ್ಲಿನ ಸಮೀಪದ ಗುಡ್ಡ ಪ್ರದೇಶಕ್ಕೆ ಸಿಗರೇಟು ಸೇದುವ ನೆಪದಲ್ಲಿ ಕರೆದುಕೊಂಡು ಹೋಗಿದ್ದಾನೆ. ಆತನಲ್ಲಿ ಮಾತಾನಾಡುತ್ತಾ ಸಿದ್ದೀಕ್ ತಾನು ತಂದಿದ್ದ ಚಾಕುವಿನಿಂದ ರಫೀಕ್ ಅವರ ಕುತ್ತಿಗೆಗೆ, ಎದೆಗೆ ಮತ್ತು ಹೊಟ್ಟೆಗೆ ತಿವಿದು ಕೊಲೆ ಮಾಡಿದ್ದಾನೆ. ತೀವ್ರ ರಕ್ರಸ್ರಾವವಾಗಿ ಬಿದ್ದವನನ್ನು ಅಲ್ಲಿಯೇ ಇದ್ದ ಕಲ್ಲನ್ನು ಎತ್ತಿ ಮುಖಕ್ಕೆ ಜಜ್ಜಿ ಕೊಲೆಮಾಡಲಾಗಿದೆ. ರಫೀಕ್ ಮೃತಪಟ್ಟಿರುವುದನ್ನು ಖಚಿತಪಡಿಸಿಕೊಂಡ ಸಿದ್ದೀಕ್ ಮೃತದೇಹವನ್ನು ಅಲ್ಲಿಯೇ ಬಿಟ್ಟರೆ ತೊಂದರೆಯಾಗಬಹುದೆಂದು ಅಲ್ಲಿಂದ ತನ್ನ ಗೆಳೆಯ ಪಯಾಝ್ ಎಂಬವರಿಗೆ ಕರೆ ಮಾಡಿ ಆತನ ಮನೆಗೆ ಹೋಗಿ ಕಾರು ಪಡೆದುಕೊಂಡು, ವಾಹನದಲ್ಲಿ ಮೃತದೇಹವನ್ನು ಇಟ್ಟುಕೊಂಡು ವಗ್ಗ ಕಡೆ ಬರುತ್ತಾ ಕೊಡ್ಯಮಲೆ ಕಾಡುಪ್ರದೇಶದ ಮೋರಿಯಲ್ಲಿ ಹರಿಯುತ್ತಿರುವ ನೀರಿಗೆ ಬಿಸಾಡಿದ್ದ. ಅಲ್ಲಿಂದ ನೇರ ಮನೆಗೆ ಬಂದು ಕಾರಿನಲ್ಲಿದ್ದ ರಕ್ತದ ಕಲೆಗಳನ್ನು ನೀರಿನಿಂದ ತೊಳೆದು ಬಟ್ಟೆ ಬರೆಗಳನ್ನು ಬಕೆಟ್ ನೀರಿನಲ್ಲಿ ಹಾಕಿ ತೊಳೆದು ಪ್ರಕರಣದ ಸಾಕ್ಷ್ಯ ನಾಶ ಮಾಡಿದ್ದ ಎಂದು ಆರಂಭಿಕ ತನಿಖೆಯಿಂದ ತಿಳಿದುಬಂದಿದೆ.
ನಿರುದ್ಯೋಗಿಯಾಗಿದ್ದ ಮೃತ ರಫೀಕ್;
ಕೊಲೆಯಾಗಿರುವ ರಫೀಕ್ ತಂದೆ ಅವನ ತಾಯಿಯನ್ನು ತೊರೆದು ಬೇರೆಯೇ ಮದುವೆಯಾಗಿ ಜೀವಿಸುತ್ತಿದ್ದಾರೆ. ಇತ್ತ ರಫೀಕ್ 20 ವರ್ಷ ತುಂಬಿದ ಯುವಕನಾದರೂ ಯಾವುದೇ ನಿಖರ ಉದ್ಯೋಗ ಮಾಡದೆ ಉಂಡಾಡಿಗುಂಡಗಳ ಹಾಗೆ ತಿರುಗಾಡುತ್ತಿದ್ದ. ದುಶ್ಚಟಗಳನ್ನೂ ಮೈಗಂಟಿಸಿಕೊಂಡಿದ್ದ ಆತ ಮಾದಕ ವ್ಯಸನಕ್ಕೆ ತುತ್ತಾಗಿದ್ದ ಎಂದೂ ಹೇಳಲಾಗಿದೆ. ಈ ಮಧ್ಯೆ ಕೌಟುಂಬಿಕ ನೆಲೆಗಟ್ಟಿನಲ್ಲಿ ನಡೆದ ಘಟನೆಯೊಂದರಿಂದ ಆತನ ಬಗ್ಗೆ ಆಕ್ರೋಶಹೊಂದಿದ್ದ ಆರೋಪಿ ಸಿದ್ದೀಕ್ ಆತನನ್ನು ಈ ರೀತಿ ಮುಗಿಸಿಬಿಡುವ ಸ್ಕೆಚ್ ಹಾಕಿದ್ದ ಎನ್ನಲಾಗಿದೆ. ಅದಕ್ಕಾಗಿ ಸಮಯ ಹೊಂಚು ಹಾಕುತ್ತಿದ್ದ ಆತ ರವಿವಾರ ಸಮಯ ಬಳಸಿಕೊಂಡಿದ್ದ ಎಂದು ತಿಳಿದುಬಂದಿದೆ.
ಕೊಲೆಗೈದು ಮಿತ್ರನಿಗೆ ಕರೆಮಾಡಿದ್ದ ಆರೋಪಿ:
ಸಿದ್ದೀಕ್ ರಫೀಕ್‌ನನ್ನು ಕೊಲೆಗೈದ ಬಳಿಕ ಮುಂದೇನು ಮಾಡಬೇಕೆಂದು ತೋಚದೆ ಮಿತ್ರನಿಗೆ ಕರೆ ಮಾಡಿದ್ದ. ವಿಚಾರ ಪೊಲೀಸರಿಗೆ ಗಮನ ಬಂದ ತಕ್ಷಣ ಆರೋಪಿಯನ್ನು ಸಂಪರ್ಕಿಸಿದ ಪೊಲೀಸರು ಚಾಣಾಕ್ಷತನದಿಂದ ಆತನನ್ನು ಪೊಲೀಸ್ ಬಲೆಗೆ ಕೆಡಹುವಲ್ಲಿ ಯಶಸ್ವಿಯಾಗಿದ್ದಾರೆ.