ರಫೀಕ್ ಚಿಲಿಂಬಿ
ಬೆಳ್ತಂಗಡಿ; ಶುಕ್ರವಾರ ಸಂಜೆ ಬೆಳ್ತಂಗಡಿ ಪೊಲೀಸರು ಸಬರಬೈಲು ಎಂಬಲ್ಲಿ ಯುವಕರಿಬ್ಬರು ದ್ವಿಚಕ್ರ ವಾಹನದಲ್ಲಿ ಸಾಗಾಟ ಮಾಡುತ್ತಿದ್ದ 1.5 ಕೆ.ಜಿ ಗಾಂಜಾವನ್ನು ಪತ್ತೆಹಚ್ಚಿದ್ದು ಇಬ್ಬರು ಪ್ರಮುಖ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಇತ್ತೀಚೆಗೆ ಪುಂಜಾಲಕಟ್ಟೆ ಠಾಣಾ ವ್ಯಾಪ್ತಿಯ ತೆಂಕಕಜೆಕಾರು ಕೆಳಗಿನಕರ್ಲ ಎಂಬಲ್ಲಿ ನಡೆದ ಮಾದಕ ವ್ಯಸನ ಪ್ರೇರಣೆಯಿಂದ ರಫೀಕ್ ಎಂಬವರನ್ನು ಚೂರಿಯಿಂದ ಇರಿದು ಸಾಯಿಸಿದ ಪ್ರಕರಣದ ಬಳಿಕ ತಾಲೂಕಿನಲ್ಲೂ ಪೊಲೀಸ್ ಕಾರ್ಯಾಚರಣೆ ಬಿಗಿಗೊಳಿಸಲಾಗಿದೆ.ಆ ಹಿನ್ನೆಲೆಯಲ್ಲೇ ಪೊಲೀಸರು ನಾಕಾಬಂದಿ ಪ್ರಾರಂಭಿಸಿದ್ದು, ಶುಕ್ರವಾರ
ಮದ್ದಡ್ಕದ ಚಿಲಿಂಬಿ ನಿವಾಸಿ ಮುಹಮ್ಮದ್ ರಫೀಕ್(35) ಮತ್ತು ಆಲಂದಿಲ ನಿವಾಸಿ ನೌಫಲ್(25) ಎಂಬವರನ್ನು ಗಾಂಜಾ ಸಹಿತ ಬಂಧಿಸಿದ್ದಾರೆ.
ಎಸ್.ಐ ನಂದ ಕುಮಾರ್ ನೇತೃತ್ವದಲ್ಲಿ ರಾಷ್ಟ್ರೀಯ ಹೆದ್ದಾರಿಯ ಸಬರಬೈಲು ಎಂಬಲ್ಲಿ ಸಂಜೆ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಮದ್ದಡ್ಕ ಕಡೆಯಿಂದ ಬೆಳ್ತಂಗಡಿ ಕಡೆಗೆ ದ್ವಿಚಕ್ರ ವಾಹನದಲ್ಲಿ ಇಬ್ಬರು ಯುವಕರು ಬರುತ್ತಿದ್ದಾಗ ವಾಹನ ತಡೆದು ತಪಾಸಣೆ ನಡೆಸಿದ ವೇಳೆ ಗಾಂಜಾ ಸಾಗಾಟ ಪ್ರಕರಣ ಬೆಳಕಿಗೆ ಬಂದಿದೆ. ಸ್ಕೂಟರ್‌ನಲ್ಲಿ 1.5 ಕೆ.ಜಿ ಗಾಂಜಾ ಪತ್ತೆಯಾಗಿದೆ.
ಇತ್ತೀಚೆಗೆ ತಾಲೂಕಿನ ಕೆಲವು ಪ್ರಮುಖ ಕೇಂದ್ರಗಳಲ್ಲಿ ಇಂತಹಾ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಪೊಲೀಸ್ ಇಲಾಖೆ ಗುರುತಿಸಿದ್ದು, ಗಾಂಜಾ ಮಾರಾಟ ಸಹಿತ ಕೆಲವು ಮಾಧಕ ವಸ್ತುಗಳನ್ನು ಬಿಕರಿ ಮಾಡುತ್ತಾ ಹಲವು ಯುವಕರನ್ನು ತಮ್ಮ ಬಲೆಗೆ ಬೀಳಿಸಿ ವ್ಯವಹಾರ ಕುದುರಿಸಲಾಗುತ್ತಿತ್ತು.
ಇದೀಗ ಬಂಧಿತ ಆರೋಪಿಗಳು ಇದರ ಪ್ರಮುಖ ಕೊಂಡಿಯಂತಿದ್ದು, ತಮಿಳುನಾಡಿನಿಂದ ಗಾಂಜಾ ತರಿಸಿಕೊಂಡು ಅದನ್ನು ತಮ್ಮದೇ ನೆಟ್ವರ್ಕ್ ಮೂಲಕ ಆಯಕಟ್ಟಿನ ಸ್ಥಳಗಳಿಗೆ ರವಾನಿಸುತ್ತಿದ್ದರು ಎಂದು ಆರಂಭಿಕ ತನಿಖೆಯಿಂದ ತಿಳಿದುಬಂದಿದೆ.
ಮದ್ದಡ್ಕದಲ್ಲಿ ಹಲವು ಸಮಯದಿಂದ ಗಾಂಜಾ ಮಾರಾಟ ಜಾಲ ಸಕ್ರೀಯವಾಗಿತ್ತು. ಕೆಲವು ಗೂಡಂಗಡಿ, ಪಾಳುಬಿದ್ದ ಮನೆ, ಸಾರ್ವಜನಿಕ ಪ್ರದೇಶಗಳನ್ನು ತಮ್ಮ ಮಾರಾಟ ಕೇಂದ್ರಗಳಾಗಿ ಬದಲಾಯಿಸಿಕೊಂಡಿದ್ದ ಪೆಡ್ಲರ್‌ಗ ಳು ಅಲ್ಲಿಗೆ ಮಾಲು ತಂದು ಅನಾಮತ್ತಾಗಿ ವ್ಯವಹಾರದಲ್ಲಿ ತೊಡಗಿಕೊಂಡಿದ್ದರು. ಈ ವಿಚಾರವಾಗಿ ತಲೆಕೆಡಿಸಿಕೊಂಡಿದ್ದ ಮದ್ದಡ್ಕ ಜಮಾಅತ್ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಪೊಲೀಸ್ ಠಾಣೆಗೆ ಪತ್ರ ಬರೆದು, ಈ ವ್ಯವಹಾರವನ್ನು ಮಟ್ಟಹಾಕುವ ಬಗ್ಗೆ ಭಿನ್ನವಿಸಿಕೊಂಡಿತ್ತು.
ಇತ್ತೀಚೆಗೆ ಬಂಟ್ವಾಳ ತಾಲೂಕಿನ ತೆಂಕಕಜೆಕಾರು ಗ್ರಾಮದ ಕೆಳಗಿನಕರ್ಲ ಎಂಬಲ್ಲಿ ಮಾಧಕ ದ್ರವ್ಯ ಸೇವಿಸಿ ಅಮಲೇರಿಸಿಕೊಂಡಿದ್ದ ಇಬ್ಬರು ಸಂಬಂಧಿಗಳೇ ಕೊಲೆ ಮಾಡುವಷ್ಟರ ಮಟ್ಟಿಗೆ ಹೋದ ಘಟನೆ ಬಳಿಕ ಪೊಲೀಸ್ ಇಲಾಖೆ ಈ ಬಗ್ಗೆ ಗಂಭೀರ ಕಾರ್ಯಾಚರಣೆಗೆ ಇಳಿದಿದೆ. ವಾಹನ ತಪಾಸಣೆ, ಯುವಕರ ಅಡ್ಡೆಗಳ ಮೇಲೆ ತೀವ್ರ ನಿಗಾ ಇರಿಸಿದೆ. ಅನೇಕ ಮಂದಿ ನಿರುದ್ಯೋಗಿ ಯುವಕರ ಚಲನವಲನಗಳ ಮೇಲೆ ವಿಶೇಷ ಕಣ್ಣಿಟ್ಟಿದ್ದಾರೆ. ಅಲ್ಲಿ ನಡೆದ ಕೊಲೆಗೆ ಅಮಲು ಪದಾರ್ಥವೇ ಕಾರಣ ಎಂದು ದೃಢಪಡಿಸಿಕೊಂಡಿದ್ದು, ಮುಂದಕ್ಕೆ ಇಂತಹಾ ಘಟನೆ ಎಲ್ಲೂ ಮರುಕಳಿಸದಂತೆ ಎಚ್ಚರ ಕೈಗೊಂಡಿದೆ.
ಆರೋಪಿಗಳು ಎಷ್ಟೇ ಪ್ರಭಾವಿಗಳಾದರೂ ಅವರ ವಿರುದ್ಧ ಮುಲಾಜಿಲ್ಲದೆ ಕ್ರಮಕೈಗೊಳ್ಳಲು ಕಠಿಣ ನಿಲುವು ತಾಳಿದ್ದಾರೆ. ಅದರ ಭಾಗವಾಗಿ ಸಬರಬೈಲಿನಲ್ಲಿ ಗಾಂಜಾದ ಪ್ರಮುಖ ಇಬ್ಬರು ಪೆಡ್ಲರ್‌ಗಳನ್ನೇ ಬಲೆಗೆ ಕೆಡವಿದ್ದಾರೆ.
ಪತ್ತೆ ತಂಡದಲ್ಲಿ ಯಾರ್ಯಾರು?
ಶುಕ್ರವಾರ ನಡೆಸಿದ ಕಾರ್ಯಾಚರಣೆಯಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ಶಿವಕುಮಾರ್ ಬಿ ಅವರ ಮಾರ್ಗದರ್ಶನದಲ್ಲಿ ಎಸ್.ಐ ನಂದಕುಮಾರ್, ಎಎಸ್‌ಐ ತಿಲಕ್, ಸಿಬ್ಬಂದಿಗಳಾದ ಇಬ್ರಾಹಿಂ ಗರ್ಡಾಡಿ, ಲೆತೀಫ್ ಉಪ್ಪಿನಂಗಡಿ, ನಾಗರಾಜ್, ಬಸವರಾಜ್, ಪ್ರಮೋದ್, ವಿಜಯಕುಮಾರ್, ಲಾರೆನ್ಸ್,ಗೀತಾ, ಸರ್ಕಲ್ ಇನ್ಸ್‌ಪೆಕ್ಟರ್ ಶಿವಕುಮಾರ್ ಬಿ ಅವರ ವಾಹನ ಚಾಲಕ ಆಸಿಫ್ ಮುಂಡಾಜೆ ಇವರು ಭಾಗಿಯಾಗಿದ್ದರು.