ಬೆಳ್ತಂಗಡಿ; ಆರಿಫ್ ಬಣಕಲ್. ಈ ಹೆಸರು ಮೂಡಿಗೆರೆ, ಕೊಟ್ಟಿಗೆಹಾರ, ಬಣಕಲ್, ಚಿಕ್ಕಮಗಳೂರು ಈ ಭಾಗದಲ್ಲೆಲ್ಲಾ ಪ್ರಸಿದ್ಧ ಹೆಸರು.ಯಾಕೆಂದರೆ ಯಾವುದೇ ಜಾತಿ ಧರ್ಮದವರೇ ಇರಲಿ ಅವರೆಲ್ಲರಿಗೂ ತುರ್ತು ಸಂದರ್ಭದಲ್ಲಿ ನೆನಪಾಗುವ ಹೆಸರೇ ಇವರದ್ದು.ಆಂಬುಲೆನ್ಸ್ ಚಾಲಕನಾಗಿರುವ ಆರಿಫ್ ಅವರು ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಕೊಟ್ಟಿಗೆಹಾರ ಕಡೆಯಿಂದ ಅದ್ಯಾವುದೇ ಅಪಘಾತ ಅಥವಾ ತುರ್ತು ಸಂದರ್ಭ ಬಂದಾಗ ತಕ್ಷಣ ಧಾವಿಸುವವರು ಇವರೇ.
ಎರಡು ದಿನಗಳ ಹಿಂದಷ್ಟೇ ಅವರು ಘಾಟ್ ನಲ್ಲಿ 100 ಅಡಿ ಪ್ರಪಾತಕ್ಕೆ ಉರುಳಿದ್ದ ವಾಹನದಲ್ಲಿದ್ದ ಪ್ರಯಾಣಿಕರನ್ನು ಸುರಕ್ಷಿತವಾಗಿ ಮೇಲೆತ್ತಿ, ಆ ಪೈಕಿ ಗಂಭೀರ ಗಾಯಗೊಂಡಿದ್ದ ಇಬ್ಬರ ಪ್ರಾಣ ರಕ್ಷಣೆ ಮಾಡಿದ್ದಾರೆ. ಅಪಾಯಕಾರಿ ಕಾರ್ಯಾಚರಣೆಯಾಗಿರುವ ಇದರಲ್ಲಿ ಪೊಲೀಸರು ಮತ್ತು ಸಾರ್ವಜನಿಕರ ನೆರವನ್ನು ಪಡೆದುಕೊಂಡು, ಹಗ್ಗದ ಮೂಲಕ ಕೆಳಗಿಳಿದು ಗಾಯಾಳುಗಳನ್ನು ಸಿನಿಮೀಯ ರೀತಿಯಲ್ಲಿ ಮೇಲೆತ್ತಿದ್ದಾರೆ. ಇಬ್ಬರು ಗಂಭೀರ ಗಾಯಗೊಂಡಿದ್ದ ಆ ಗಾಯಾಳುಗಳು ಇದೀಗ ಶಿವಮೊಗ್ಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಆರೈಕೆಯಲ್ಲಿದ್ದಾರೆ. ಅಲ್ಲದೆ ಅಪಘಾತದಿಂದ ಜಖಂ ಗೊಂಡಿದ್ದ ವಾಹನವನ್ನು ಪ್ರಪಾತದಿಂದ ಮೇಲೆತ್ತುವ ಕಾರ್ಯಾಚರಣೆಯನ್ನೂ ಯಶಸ್ವಿಯಾಗಿ ನಡೆಸಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಅವರು ಚಾರ್ಮಾಡಿ ಕಣಿವೆ ರಸ್ತೆಯಲ್ಲಿ ಪ್ರಪಾತಕ್ಕೆ ಉರುಳಿದ್ದ ಕಾರನ್ನು ಅತ್ಯಂತ ಸುರಕ್ಷಿತವಾಗಿ ಮೇಲೆತ್ತಿದ್ದಾರೆ. ಅಲ್ಲದೆ ಪ್ರಪಾತದ ಹಳ್ಳದ ಕೆಳಗೆ ಬಿದ್ದಿದ್ದ ದಾಖಲೆಪತ್ರಗಳಿದ್ದ ಬ್ಯಾಗನ್ನು ಕ್ರೈನ್ ಮೂಲಕ ಬೆಲ್ಟ್ ಅಳವಡಿಸಿ ತೀರಾ ಅಪಾಯಕಾರಿಯಾಗಿದ್ದ ಸನ್ನಿವೇಶವನ್ನು ಎದುರಿಸಿ ಪ್ರಪಾತಕ್ಕೆ ಇಳಿದು ಮೇಲೆತರುವಲ್ಲಿ ಸಫಲರಾಗಿದ್ದಾರೆ. ಅದರ ವೀಡಿಯೋ ತುಣುಕು ಸಾಮಾಜಿಕ ಜಾಲ ತಾಣದಲ್ಲಿ ಬಾರೀ ವೈರಲ್ ಆಗಿತ್ತು.
ಜೊತೆಗೆ ಆರಿಫ್ ಅವರು ಉರಗ ಪ್ರೇಮಿಯೂ ಆಗಿದ್ದು, ವಿಷಕಾರಿ ಹಾವುಗಳು ಮನೆ, ಹಟ್ಟಿ ಅಥವಾ ಜನರಿಗೆ ತೊಂದರೆಯಾಗುವ ರೀತಿಯಲ್ಲಿ ಕಂಡು ಬಂದಿತ್ತೆಂದರೆ ಯಾರಾದರೂ ಕರೆ ಮಾಡಿದ ಸಾಕು ಕ್ಷಣಾರ್ಧದಲ್ಲಿ ಆರಿಫ್ ಅವರು ಅಲ್ಲಿ ಸಿದ್ದರಾಗಿರುತ್ತಾರೆ.ಅತ್ಯಂತ ಕಾರ್ಕೋಟಕ ವಿಷಕಾರಿ ಕಿಂಗ್ಕೋಬ್ರಾದಂತಹಾ ಹಾವನ್ನೂ ಅವರು ನಾಜೂಕಿನಿಂದ ಹಿಡಿದು ಸುರಕ್ಷಿತ ಸ್ಥಳಕ್ಕೆ ಸಾಗಿಸುತ್ತಾರೆ.
ಅಂಬುಲೆನ್ಸ್ ಚಾಲಕರಾಗಿ ಅನೇಕ ಮಂದಿಯ ಪ್ರಾಣ ರಕ್ಷಣೆ ಕಾರ್ಯವನ್ನೂ ಅವರು ಮಾಡಿದ್ದಾರೆ. ಆರಿಫ್ ಬಣಕಲ್ 24*7 ಎಂದೇ ಟ್ಯಾಗ್ ಲೈನ್ ಮೂಲಕ ಅವರು ಎಲ್ಲರ ತುರ್ತು ಕರೆಗೆ ದಿನದ 24 ಗಂಟೆಯೂ ಸಿದ್ಧರಿರುತ್ತಾರೆ. ಆಂಬುಲೆನ್ಸ್ ಚಾಲಕರ ರಾಜ್ಯಮಟ್ಟದ ಸಂಘಟನೆ ಕಟ್ಟಿಕೊಂಡಿದ್ದು ಅದರಲ್ಲಿ ಸಕ್ರೀಯರಾಗಿ ತೊಡಗಿಸಿಕೊಂಡಿದ್ದಾರೆ. ಮಂಗಳೂರು ವೆನ್ಲಾಕ್ ಆಸ್ಪತ್ರೆ ಬಳಿ ಆಂಬುಲೆನ್ಸ್ ನಲ್ಲಿ ನಲುವತ್ತು ವರ್ಷಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿ ಇತ್ತೀಚೆಗೆ ಲಾಕ್ಡೌನ್ ಕಾಲಘಟ್ಟದ ಬಳಿಕ ಪಾರ್ಶ್ವವಾಯು ಪೀಡಿತರಾಗಿ ಅನಾರೋಗ್ಯದಿಂದಿರುವ ಚಾರ್ಮಾಡಿಯ ಹಿರಿಯ ಆಂಬುಲೆನ್ಸ್ ಚಾಲಕರೊಬ್ಬರಿಗೆ ಆರ್ಥಿಕ ನೆರವು ನೀಡುವಲ್ಲಿ ಹಾಗೂ ಸಂಘದ ಇತರ ರಿಲೀಫ್ ಚಟುವಟಿಕೆಗಳಲ್ಲಿ ತನ್ನನ್ನು ಅವರು ಮುಂಚೂಣಿಯಲ್ಲಿ ತೊಡಗಿಸಿಕೊಂಡಿದ್ದಾರೆ.
ಬಹುವಿಧ ಸಾಹಸ ಪ್ರವೃತಿಗೆ ಹೆಸರಾಗಿರುವ ಆರಿಫ್ ಬಣಕಲ್ ವಿಡಿಯೋ ಕ್ಲಿಕ್ ಮಾಡಿ
https://youtu.be/GFVNDRGeJG4