Posts

ಬೆಳ್ತಂಗಡಿ‌ ಕಾಂಗ್ರೆಸ್ ಟಿಕೆಟ್‌ಗಾಗಿ ಮೂರು ಮಂದಿಯಿಂದ KPCC ಗೆ ಅರ್ಜಿ; ಕಾರ್ಯಕರ್ತರ ನಡುವೆ ಬಿರುಸಿನ ಚರ್ಚೆ

1 min read


ಬೆಳ್ತಂಗಡಿ: ಮುಂದಿನ ವಿಧಾನ ಸಭಾ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದ ಆಕಾಂಕ್ಷಿಗಳು ಕೆಪಿಸಿಸಿ ಗೆ ತಮ್ಮ ಅರ್ಜಿ ಸಲ್ಲಿಸಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಪ್ರಕಟಿಸಿ ನ.15 ಕೊನೆಯ ದಿನ ಎಂದು ನಿಗಧಿಗೊಳಿಸಿದ ಬೆನ್ನಿಗೇ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಿಂದ 3 ಅರ್ಜಿಗಳು ಸಲ್ಲಿಕೆಯಾಗಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ. 
ಆ ಮೂಲಕ ಕಾಂಗ್ರೆಸ್ ‌ನಲ್ಲಿ ಟಿಕೆಟ್ ಫೈಟ್ ಗೆ ಕಣ ಸಿದ್ದವಾದಂತಾಗಿದೆ. 

ಈ ಬಾರಿ  2023 ರ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ನಿಂದ ಸ್ಪರ್ಧಿಸಲು ಮಾಜಿ ಶಾಸಕ ಕೆ.ವಸಂತ ಬಂಗೇರ, ಮಾಜಿ ಸಚಿವ ಕೆ ಗಂಗಾಧರ ಗೌಡ ಮತ್ತು ಬೆಸ್ಟ್ ಫೌಂಡೇಷನ್ ನ ಅಧ್ಯಕ್ಷ ಹಾಗೂ ಕೆಪಿಸಿಸಿ ಕಾರ್ಯದರ್ಶಿಯಾಗಿರುವ ರಕ್ಷಿತ್ ಶಿವರಾಂ ಅವರು ಸೇರಿ ಮೂರು ಮಂದಿ ಉಮೇದ್ವಾರಿಕೆ ಸಲ್ಲಿಸಿದ್ದಾರೆ.

ರಕ್ಷಿತ್ ಶಿವರಾಂ ಅವರು ನ.14 ರಂದು ಅರ್ಜಿ ನೀಡಿದ್ದರೆ, ಗಂಗಾಧರ ಗೌಡ ಮತ್ತು ವಸಂತ ಬಂಗೇರ ಅವರು ನ.15 ಕೊನೆಯ ದಿನ ಅರ್ಜಿ ಸಲ್ಲಿಸಿದ್ದಾರೆ. ವಸಂತ ಬಂಗೇರ ಮತ್ತು ಗಂಗಾಧರ ಗೌಡ ಅವರು ಅರ್ಜಿ ಸಲ್ಲಿಸುವ ವೇಳೆ ಬೆಳ್ತಂಗಡಿ ಕಾಂಗ್ರೆಸ್ ನ‌ ವಿವಿಧ ಘಟಕಗಳ ಮುಖಂಡರು ಭಾಗಿಯಾಗಿದ್ದು ಅವರೆಲ್ಲರೂ ವಿಶೇಷ ಬಸ್ಸಿನ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದರು. 

‌ಕೆಪಿಸಿಸಿ ಅಧ್ಯಕ್ಷರು ಇತ್ತೀಚೆಗೆ ಪ್ರಕಟಿಸಿದಂತೆ ಅವರೂ ಸೇರಿದಂತೆ ಪಕ್ಷದಿಂದ ಚುನಾವಣಾಕಾಂಕ್ಷಿಗಳಿದ್ದರೆ  5,000 ರೂ ಶುಲ್ಕ ತೆತ್ತು ಅರ್ಜಿ ಫಾರಂ ಪಡೆದು ಭರ್ತಿ ಮಾಡಿ, ಪಕ್ಷದ ಹೆಸರಿನಲ್ಲಿ 2 ಲಕ್ಷ ರೂ. ಡಿಡಿ ನೀಡಬೇಕು. ಪಕ್ಷದ ಆಯ್ಕೆ ಮಂಡಳಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದೆ. ಒಂದು ವೇಳೆ ಟಿಕೆಟ್ ಕೈ ತಪ್ಪಿದರೆ ಪಕ್ಷದ ಹೆಸರಿನಲ್ಲಿ ಕಟ್ಟುವ 2 ಲಕ್ಷದ  ಡಿ.ಡಿ ಮೊತ್ತವನ್ನು ಮರಳಿಸದೆ ಪಕ್ಷದ ಕಟ್ಟಡ ಫಂಡ್ ಗೆ ಜಮೆ ಮಾಡಲಾಗುವುದು ಎಂದು ಷರತ್ತು ವಿಧಿಸಿದೆ.

ಇದೀಗ ಬೆಳ್ತಂಗಡಿಯ ಹಿರಿಯ ತಲೆಗಳ ಮಧ್ಯೆ ಬೆಳ್ತಂಗಡಿಯ ಯುವ ನಾಯಕ ರಕ್ಷಿತ್ ಶಿವರಾಂ ಕೂಡ ಅರ್ಜಿ ಸಲ್ಲಿಸಿರುವುದರಿಂದ ಪಕ್ಷದ ವರಿಷ್ಠರು ಯಾರಿಗೆ ಮಣೆ ಹಾಕಲಿದ್ದಾರೆ ಎಂಬ ಬಗ್ಗೆ ಪಕ್ಷದೊಳಗೆ ಕುತೂಹಲದ ವಾತಾವರಣ ನಿರ್ಮಾಣವಾಗಿದೆ. ಕಾರ್ಯಕರ್ತರಿಗೆ ಚರ್ಚೆ, ಪರ ವಿರೋಧ ಅಭಿಪ್ರಾಯಕ್ಕೆ ಅವಕಾಶವಾದಂತಾಗಿದೆ.

-----

ವರದಿ; ಅಚ್ಚು ಮುಂಡಾಜೆ

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment