ಬೆಳ್ತಂಗಡಿ; ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಅಕ್ರಮ ನಡೆದಿರುವ ಸಂಶಯವಿದೆ ಎಂದು ಬಳಂಜ 27 ನೇ ಮತ ಕ್ಷೇತ್ರದ ಅಭ್ಯರ್ಥಿಯೂ ಆಗಿರುವ ಜೆರೋಂ ಲೋಬೋ ಅವರು ಮಾತನಾಡಿರುವ ವೀಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಪ್ರಮುಖವಾಗಿ ಅವರು ಹೇಳಿರುವ ವಿಚಾರದಲ್ಲಿ ತಮ್ಮ ಮತಕ್ಷೇತ್ರಕ್ಕೆ ಸಂಬಂಧಪಡದ ಮತಪತ್ರ ಸಿಕ್ಕಿದೆ ಎಂದಿರುವುದು ಹಾಗೂ ಬೇಲೆಟ್ ಪೇಪರ್‌ಗಳು ಜೊತೆಯಾಗಿ ಅಂಟಿಕೊಂಡಿತ್ತು ಎಂದಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಜೆರೋಮ್ ಲೋಬೋ ಅವರು ಆಪಾದಿಸುವಂತೆ ತಾನು ಮತದಾನದ ದಿನ ಮೊದಲ ಮತದಾರನು ಆಗಿದ್ದು ಸಂಜೆಯ ವರೆಗೆ ಮತಕ್ಷೇತ್ರದಲ್ಲೇ ಇದ್ದೆ. ಮತಪೆಟ್ಟಿಗೆಯನ್ನು ಬಿಳಿ ಬಟ್ಟೆಯಲ್ಲಿ ಸುತ್ತಿ ಸೀಲ್ ಮಾಡಿ ಬಸ್ಸಿನಲ್ಲಿ ಸಾಗಿಸುವಲ್ಲಿವರೆಗೆ ಇದ್ದೆ.ಕೆಲವೊಂದು ದೃಷ್ಯಗಳನ್ನು ವೀಡಿಯೋ ಕೂಡ ಮಾಡಿದ್ದೇನೆ.
ಮತ ಎಣಿಕೆ ಕೇಂದ್ರದಲ್ಲಿ ಮತಪೆಟ್ಟಿಗೆಯನ್ನು ಟೇಬಲ್‌ಗೆ ತರಲಾದ ಸಂದರ್ಭ ಅದರಲ್ಲಿ ಯಾವುದೇ ಸೀಲುಗಳಾಗಲೀ, ಬಿಳಿ ವಸ್ರ್ತದಲ್ಲಿ ಸುತ್ತಿರುವುದಾಗಲೀ ಕಂಡು ಬಾರದೆ, ಬಕ್ಕ್ ಹಗ್ಗದಿಂದ ಕಟ್ಟಿರುವುದು ಕಂಡುಬಂದಿದೆ. ಮತ ಎಣಿಕೆ ವೇಳೆ ಮತಪತ್ರಗಳು ಕೆಲವು ಒಂದಕ್ಕೊಂದು ಅಂಟಿಕೊಂಡಂತೆ ಇತ್ತು.
ಮತಕೇಂದ್ರಕ್ಕೆ ಸಂಬಂಧಪಡದ ಬೇಲೆಟ್ ಪೇಪರೊಂದು ನಮ್ಮದರಲ್ಲಿ ಪತ್ತೆಯಾಗಿದ್ದು ನಾವು ಅದನ್ನು ಚಿತ್ರೀಕರಣ ಮಾಡಲು ಹೊರಟಾಗ ಅವಕಾಶ ನಿರಾಕರಿಸಿ ಅಧಿಕಾರಿಗಳು ಸಂಶಯಬರುವಂತೆ ಮಾಡಿದ್ದಾರೆ.
ನಾವು ಆಗಲೇ ಮಾಜಿ ಶಾಸಕ ವಸಂತ ಬಂಗೇರರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದು, ಅವರ ಸಲಹೆಯಂತೆ ಚುನಾವಣಾಧಿಕಾರಿಗೆ ಲಿಖಿತ ದೂರು ನೀಡಿದ್ದೇವೆ
ಯಾವುದೇ ಕಾರಣಕ್ಕೂ ಸದ್ರಿ ಕ್ಷೇತ್ರದ ಫಲಿತಾಂಶ ಪ್ರಕಟಿಸದೆ ಮರು ಮತದಾನಕ್ಕೆ ಅವಕಾಶ ನೀಡಬೇಕೆಂದು ಆಗ್ರಹಿಸಿದ್ದೇವೆ ಎಂದು ವೀಡಿಯೋದಲ್ಲಿ ಅವರು ಮಾತನಾಡಿದ್ದಾರೆ.
ಇದು ದೇಶಾಧ್ಯಂತ ಇವಿಎಮ್ ಮೆಷಿನ್ ಗಳ ಮೇಲೆ ಸಂಶಯ ಇರುವಂತೆಯೇ ಬೇಲೆಟ್ ಪೇಪರ್ ಚುನಾವಣೆ ಯ ಮೇಲೂ ಸಂಶಯದ ವಾತಾವರಕ್ಕೆ ಕಾರಣವಾಗಿದೆ.