ಬೆಳ್ತಂಗಡಿ: ಕೊರೋನಾದಿಂದ ತೀವ್ರ ಸಂಕಷ್ಟಕ್ಕೆ ಒಳಗಾಗಿರುವ ಮಾನಸಿಕ ಅಸ್ವಸ್ಥರ ಹಾಗೂ ನಿರ್ಗತಿಕರ ಪೋಷಣಾ ಹಾಗೂ ಚಿಕಿತ್ಸಾ ಕೇಂದ್ರವಾದ ನೆರಿಯ ಗ್ರಾಮದ ಗಂಡಿಬಾಗಿಲು ಸಿಯೋನ್ ಆಶ್ರಮಕ್ಕೆ ಸಮಾನಮನಸ್ಕ ದಾನಿಗಳು ಸೇರಿ ಸಂಗ್ರಹಿಸಿದ ಸುಮಾರು 30 ಸಾವಿರ ಮೌಲ್ಯದ ಔಷಧಿ ಸಹಿತ ತುರ್ತುಪರಿಸ್ಥಿತಿ ಎದುರಿಸುವ ವಸ್ತುಗಳನ್ನು ಬುಧವಾರ ಹಸ್ತಾಂತರಿಸಲಾಯಿತು.
ಆಶ್ರಮದ ರೋಗಿಗಳಿಗೆ ಹಾಗೂ ವಾಸಿಗಳಿಗೆ ತುರ್ತು ಅಗತ್ಯವಿರುವ ಮಾಸ್ಕ್, ಸ್ಯಾನಿಟೈಸರ್,ಅಗತ್ಯ ಔಷಧಿ ಹಾಗೂ ಇನ್ನಿತರ ವಸ್ತುಗಳು ಈ ಕೊಡುಗೆಯಲ್ಲಿ ಒಳಗೊಂಡಿರುತ್ತದೆ.
ತಾಲೂಕು ತಹಶಿಲ್ದಾರ್ ಮಹೇಶ್ ಜೆ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ, ತಾಲೂಕು ಆರೋಗ್ಯಾಧಿಕಾರಿ ಡಾ. ಕಲಾಮಧು, ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ ಅವರು ಸದ್ರಿ ಕಿಟ್ ಹಸ್ತಾಂತರಿಸಿದರು. ಅಧ್ಯಕ್ಷತೆ ವಹಿಸಿದ್ದ ಗಂಡಿಬಾಗಿಲು ಸೈಂಟ್ ಥೋಮಸ್ ಚರ್ಚ್‌ನ ಧರ್ಮಗುರು ಫಾ. ಷಾಜಿ ಪ್ರಾಸ್ತಾವಿಕವಾಗಿ ಮಾತನಾಡಿ ದೇಣಿಗೆ ನೀಡಿದವರನ್ನು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಮಾನವ ಸ್ಪಂದನ ತಂಡದ ಚೇರ್ಮೆನ್ ಪಿ.ಸಿ ಸೆಬಾಸ್ಟಿಯನ್, ಕೋವಿಡ್ ಸೋಲ್ಜರ್ಸ್ ತಂಡದ ಕೇಪ್ಟನ್ ಅಶ್ರಫ್ ಆಲಿಕುಂಞಿ ಮುಂಡಾಜೆ, ನೆರಿಯ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಮನೋಜ್ ಎಂ.ಡಿ, ವಿನ್ಸೆಂಟ್ ಡಿಪೌಲ್ ಸೊಸೈಟಿಯ ಅಧ್ಯಕ್ಷ ಚಾಂಡಿ ಸಿ.ವಿ, ಮುಂಡಾಜೆ ಸಹಕಾರಿ ಸಂಘದ ನೆರಿಯ ಶಾಖೆ ವ್ಯವಸ್ಥಾಪಕ ಚಂದ್ರಕಾಂತ ಪ್ರಭು, ನೆರಿಯ ಗ್ರಾ.ಪಂ ಸದಸ್ಯ ಬಾಬು ಗೌಡ ಹಾಗೂ ವಾಸು ಇವರು ಉಪಸ್ಥಿತರಿದ್ದರು. ದೇಣಿಗೆ ಸ್ವೀಕರಿಸಿದ ಸಿಯೋನ್ ಆಶ್ರಮ ಟ್ರಸ್ಟಿ ಯು.ಸಿ ಪೌಲೋಸ್ ಆಶ್ರಮದ ಸ್ಥಿತಿಗತಿ ವಿವರಿಸಿದರು. ಜಾನುವಾರುಗಳಿಗೆ ಮೇವು, ಆಂಬುಲೆನ್ಸ್ ಸೇವೆ ಸಹಿತ ಜನರ ನೆರವು ಬೇಕು ಎಂದರು.
ಕಾರ್ಯಕ್ರಮದಲ್ಲಿ, ದೇಣಿಗೆ ನೀಡಿದ ಗಂಡಿಬಾಗಿಲು ಚರ್ಚ್, ಜಿಲ್ಲಾ ಔಷಧ ವ್ಯಾಪಾರಸ್ಥರ ಸಂಘದ ಅಧ್ಯಕ್ಷ, ಭಿಡೆ ಮೆಡಿಕಲ್ಸ್ ನ ಸುಜಿತ್ ಭಿಡೆ, ಲೆಫ್ಟಿನೆಂಟ್ ಕರ್ನಲ್ ನಿತಿನ್ ಭಿಡೆ, ತೋಮಸ್ ನಂದಲತ್ ರಾಯ್, ಡಾ. ಕೆ.ವಿ ಮೂರ್ತಿ ಹಾಗೂ ಇತರ ದಾನಿಗಳನ್ನು ಸ್ಮರಿಸಿ ಕೃತಜ್ಞತೆ ಸಲ್ಲಿಸಲಾಯಿತು.