ಬೆಳ್ತಂಗಡಿ; 1926 ನವಂಬರ್ 1 ರಂದು ಜನಿಸಿ 1951 ನೇ ಕಾಲಘಟ್ಟದಲ್ಲಿ ಕಾಜೂರಿನ ಅರೆಬಿಕ್ ಧಾರ್ಮಿಕ ಗುರುಗಳಾಗಿ ಸೇವೆ ಸಲ್ಲಿಸಿ ಅದೆಷ್ಟೋ ವಿದ್ಯಾರ್ಥಿಗಳ ಮನಪಟಲದಲ್ಲಿ ಧರ್ಮಬೋಧನೆಯ ಅಚ್ಚು ಒತ್ತಿದ ಸತಾಯುಷಿ ಧರ್ಮಗುರುಗಳಾದ ಹಾಜಿ ಅಬ್ದುಸ್ಸಮದ್ ಉಸ್ತಾದ್ ಕಿಲ್ಲೂರು ಅವರನ್ನು ಅವರ ಇಬ್ಬರು ಆರಂಭಿಕ ಹಿರಿಯ ವಿದ್ಯಾರ್ಥಿಗಳಾದ ಬಿ.ಎ ಯೂಸುಫ್ ಶರೀಫ್ ಮತ್ತು ಪಿ.ಎ ಇಬ್ರಾಹಿಂ ಮದನಿ ಅವರು ಅವರ ನಿವಾಸದಲ್ಲೇ ಸನ್ಮಾನಿಸುವ ಮೂಲಕ ಗುರುಭಕ್ತಿ ಮೆರೆದಿದ್ದಾರೆ.
ಬಿ.ಎ ಯೂಸುಫ್ ಶರೀಫ್ ಅಭಿನಂದನೆಇಬ್ರಾಹಿಂ ಮದನಿಯಿಂದ ಅಭಿನಂದನೆ
ಮೂಲತಃ ವೇಣೂರಿನ ಪುಂಜಿಲ ನಿವಾಸಿ ಮರ್‌ಹೂಮ್ ಅಬ್ದುಲ್ ಖಾದರ್ ಮತ್ತು ಅವ್ವಮ್ಮ ದಂಪತಿ ಪುತ್ರರಾಗಿರುವ ಅಬ್ದುಸ್ಸಮದ್ ಉಸ್ತಾದರು ಕಾಜೂರಿನಲ್ಲಿ ಆಗಿನ ಕಾಲದಲ್ಲಿ ಮದರಸ ಧರ್ಮಗುರುಗಳಾಗಿ ಆಧ್ಯಾತ್ಮಿಕ ಪ್ರಭೆ ಹರಡಲು ಕಾರಣರಾದವರಲ್ಲಿ ಪ್ರಮುಖ ಒಬ್ಬರಾಗಿದ್ದರು.
ಇವರ ಇಬ್ಬರೂ ಆರಂಭಿಕ ಹಿರಿಯ ಶಿಷ್ಯರು ಅವರ ಬಳಿ ವಿದ್ಯಾಭ್ಯಾಸ ಕಲಿತು ಆ ಬಳಿಕ ಅದೇ ಕಾಜೂರು ದರ್ಗಾಶರೀಫ್ ನಲ್ಲಿ ಅಧ್ಯಕ್ಷರಾದುದೂ ಒಂದು ಇತಿಹಾಸ.
ಆ ಇಬ್ಬರು ಶಿಷ್ಯರಾದ ಬಿ.ಎ ಯೂಸುಫ್ ಶರೀಫ್ ಪಾದೆ ಮತ್ತು ಪಿ.ಎ ಇಬ್ರಾಹಿಂ ಮದನಿ ಪಾದೆಗುತ್ತು ಕಾಜೂರು ಅವರು ಇದೀಗ 105 ರ ಇಳಿವಯಸ್ಸಿನಲ್ಲಿರುವ ಗುರುಗಳನ್ನು ಅವರ ಮನೆಗೇ ತೆರಳಿ ಸನ್ಮಾನಿಸಿ ಆಶೀರ್ವಾದ ಪಡೆಯುವ ಮೂಲಕ ಭಾವುಕ ಸನ್ನಿವೇಶಕ್ಕೆ ಸಾಕ್ಷಿಯಾದರು. ಸತಾಯುಷಿಯಾದರೂ ಕನ್ನಡಕ ಇಲ್ಲದೆ ಓದುವ, ಊರುಗೋಲಿಲ್ಲದೆ ನಡೆಯಲು ಸಾಧ್ಯವಿರುವ ಅಬ್ದುಸ್ಸಮದ್ ಉಸ್ತಾದರು ಈ ಶಿಷ್ಯರ ಪ್ರೀತಿಗೆ ಅವರೂ ಭಾವುಕರಾಗಿ ಇಬ್ಬರನ್ನೂ ಹರಸಿದರು. ಈ ಸಂದರ್ಭದಲ್ಲಿ ಕಾಜೂರು ಆಡಳಿತ ಮಂಡಳಿ ಪ್ರಧಾನ ಕಾರ್ಯದರ್ಶಿ ಜೆ.ಹೆಚ್ ಅಬೂಬಕ್ಕರ್ ಸಿದ್ದೀಕ್ ಕಾಜೂರು ಉಪಸ್ಥಿತರಿದ್ದರು.