ಬೆಳ್ತಂಗಡಿ; ಇಲ್ಲಿನ ಕಲಾ ಸಂಸ್ಥೆಯೊಂದರ ಕೀಲುಕುದುರೆ ಬಳಗದ ಸ್ತ್ರೀ ವೇಷದಾರಿಯಾಗಿ ಅನೇಕ ವರ್ಷಗಳಿಂದ ಪ್ರಸಿದ್ಧಿ ಪಡೆದಿದ್ದ ಕಲಾವಿದ ಜಗದೀಶ್(42ವ.)ಜು.9 ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಮಲಗಿ ನಿದ್ರಿಸಿದವರು ಅಸಹಜವಾಗಿ ಕೊನೆಯುಸಿರೆಳೆದಿದ್ದಾರೆ.
ಮೂಲತಃ ಕಲ್ಮಂಜ ಗ್ರಾಮದ ಕುಕ್ಕೆ ಮಜಲು ನಿವಾಸಿಯಾದ ಇವರು ಪ್ರಸ್ತುತ ಕಕ್ಕಿಂಜೆ ಸಮೀಪ ಬಾಡಿಗೆ ಮನೆಯಲ್ಲಿ ವಾಸವಿದ್ದರು.
ಜೂ.8ರಂದು ರಾತ್ರಿ ಬಳಿಕ ಅವರು ವಾಸ್ತವ್ಯವಿದ್ದ ಮನೆಯ ಬಾಗಿಲು ತೆರೆಯದೇ ಇದ್ದುದರಿಂದ ಅಕ್ಕ ಪಕ್ಕದವರಿಗೆ ಸಂದೇಹಬಂದು ಕೂಗಿ ಕರೆದರೂ ಪ್ರಯೋಜನವಾಗದ್ದರಿಂದ ವಿಚಾರ ಬೆಳಕಿಗೆ ಬಂದಿದೆ. ಬಳಿಕ ಸ್ಥಳೀಯರು ಬಾಡಿಗೆ ಮನೆಯ ಬಾಗಿಲು ಒಡೆದು ನೋಡಿದಾಗ ಅವರು ಮೃತಪಟ್ಟ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ.
ಒಂದೂವರೆ ವರ್ಷದ ಹಿಂದಷ್ಟೇ ಅವರಿಗೆ ವಿವಾಹವಾಗಿದ್ದು, ಪತ್ನಿ ತವರುಮನೆಗೆ ಹೋಗಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಮೃತದೇಹವನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ.
ಹಿಂದೊಮ್ಮೆ ಜಗದೀಶ್ ಅವರ ಕೋಣೆಯಲ್ಲಿ ಅವರ ಜೊತೆಯೇ ಇದ್ದ ಸಹಕಲಾವಿದ ಯುವಕನೊಬ್ಬ ನಿಗೂಢವಾಗಿ ಸಾವನ್ನಪ್ಪಿದ ಘಟನೆ ನಡೆದಿತ್ತು. ಈ ಬಗ್ಗೆ ಜಗದೀಶ್ ಅವರ ಮೆಲೆಯೇ ಸಂಶಯ ವ್ಯಕ್ತಪಡಿಸಿ ಬಾಲಕನ ಹೆತ್ತವರು ಅಂದು ಪೊಲೀಸರಿಗೆ ದೂರುನೀಡಿದ್ದ ಘಟನೆ ನಡೆದಿತ್ತು.
ಆ ಬಾಲಕ ಅಮಲು ಪದಾರ್ಥ ಸೇವಿಸುವ ಚಟಹೊಂದಿದ್ದು ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದ ಎಂದು ಪೊಲೀಸ್ ತನಿಖೆಯ ಬಳಿಕ ತಿಳಿದುಬಂದಿತ್ತು