Posts

ನೆರಿಯ; ದಲಿತನ ಕೈ ಬೆರಳು ತುಂಡರಿಸಿ ದೌರ್ಜನ್ಯ ಪ್ರಕರಣ;; ನಾಲ್ವರು ಆರೋಪಿಗಳು ಅಪರಾಧಿಗಳೆಂದು ಸಾಬೀತು; ಜೈಲು ಶಿಕ್ಷೆ ಪ್ರಕಟ

ಶಾಶ್ವತ ವಿಕಲಚೇತನರಾಗಿರುವ ಸುಂದರ ಮಲೆಕುಡಿಯ
ಬೆಳ್ತಂಗಡಿ; ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ನೆರಿಯ ಗ್ರಾಮದ ಕಾಟಾಜೆ ಎಂಬಲ್ಲಿ ಹತ್ತು ವರ್ಷಗಳ ಹಿಂದೆ ನಡೆದಿದ್ದ ದಲಿತ ವ್ಯಕ್ತಿಯ ಮೇಲಿನ ಅಮಾನುಷ ಹಲ್ಲೆ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಬುಧವಾರ ನಾಲ್ಕು ಮಂದಿ ಆರೋಪಿಗಳಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಕಾಟಾಜೆ ನಿವಾಸಿ ಗೋಪಾಲ ಗೌಡ ಯಾನೆ ಗೋಪಾಲಕೃಷ್ಣ ಗೌಡ, ಮಂಗಳೂರಿನ ಕುಡುಪು ಪಾಲ್ಕನೆಯ ಎ.ದಮಯಂತಿ, ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದ ವಸಂತ ಗೌಡ ಯಾನೆ ರಾಮಣ್ಣ ಗೌಡ, ನೆರಿಯ ಗ್ರಾಮದ ಪುಷ್ಪಲತಾ ಇದೀಗ ಜೈಲು ಶಿಕ್ಷೆ ಹಾಗೂ ಲಕ್ಷಾಂತರ ರೂ. ದಂಡ ತೆರುವಂತೆ ಶಿಕ್ಷೆಗೊಳಗಾದವರು.

ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿ ಗೋಪಾಲ ಗೌಡನಿಗೆ 3 ವರ್ಷಗಳ ಕಾಲ ಕಠಿಣ ಸಜೆ ಮತ್ತು 1 ಲಕ್ಷ ರೂ. ದಂಡ, ಒಂದು ವೇಳೆ ದಂಡ ತೆರಲು ವಿಫಲವಾದಲ್ಲಿ ಮತ್ತೆ 6 ತಿಂಗಳ ಸಾದಾ ಸಜೆ, ಆರೋಪಿಗಳಾದ ದಮಯಂತಿ, ವಸಂತ ಗೌಡ, ಪುಷ್ಪಲತಾರಿಗೆ 2 ವರ್ಷ ಗಳ ಜೈಲು ಶಿಕ್ಷೆ ಮತ್ತು ತಲಾ 15 ಸಾವಿರ ರೂ. ದಂಡ ಹಾಗೂ ದಂಡ ತೆರಲು ವಿಫಲವಾದಲ್ಲಿ ಮತ್ತೆ 3 ತಿಂಗಳ ಸಾದಾ ಶಿಕ್ಷೆ ವಿಧಿಸಲಾಗಿದೆ. ಅದರ ಜೊತೆಗೆ ಐಪಿಸಿ ಸೆಕ್ಷನ್ 506ರ ಅಡಿ ನಾಲ್ಕೂ ಮಂದಿ ಆರೋಪಿಗಳಿಗೆ 6 ತಿಂಗಳ ಸಾದಾ ಶಿಕ್ಷೆಯನ್ನೂ ವಿಧಿಸಿ ನ್ಯಾಯಾಧೀಶ ಮಲ್ಲಿಕಾರ್ಜುನ ಸ್ವಾಮಿ ಎಚ್.ಎಸ್. ತೀರ್ಪು ನೀಡಿದ್ದಾರೆ. 

ಈ ಪೈಕಿ ದಂಡದ ಮೊತ್ತ 1.45 ಲಕ್ಷ ರೂ.ವನ್ನು ಅಂದಿನ ಗಾಯಾಳು, ತನ್ನ ಎರಡೂ ಕೈ ಬೆರಳುಗಳನ್ನು ಕಳೆದುಕೊಂಡು  ಶಾಶ್ವತ ವಿಕಲಚೇತನರಾಗಿರುವ ಸುಂದರ ಮಲೆಕುಡಿಯ ಅವರಿಗೆ ಪರಿಹಾರವಾಗಿ ನೀಡುವಂತೆಯೂ ನ್ಯಾಯಾಲಯ ತನ್ನ ತೀರ್ಪಿನಲ್ಲಿ ಆದೇಶಿಸಿದೆ‌.

2015 ರಲ್ಲಿ ತಾಲೂಕು ಕಚೇರಿ ಎದುರು ನಡೆದಿದ್ದ ಬೃಹತ್ ಪ್ರತಿಭಟನೆ

ಭೂದಾಹದಿಂದ ಅಪರಾಧಿಗಳು ಕಳೆಕೊಚ್ಚುವ ಯಂತ್ರದಲ್ಲಿ ಸುಂದರ ಮಲೆಕುಡಿಯ ಅವರ ಕೈ ಬೆರಳುಗಳನ್ನು ಕೊಚ್ಚಿದ್ದರು;

2015ರ ಜು. 26ರಂದು ಸಂಜೆ ನೆರಿಯ ಗ್ರಾಮದ ಕಾಟಾಜೆ ಎಂಬಲ್ಲಿನ ಜಮೀನಿನಲ್ಲಿದ್ದ ಕಾಡನ್ನು ರೇವತಿ ಮತ್ತು ಬಿ.ಎ. ಸುಂದರ ಮಲೆಕುಡಿಯ ಅವರು ಮಕ್ಕಳಾದ ಪೂರ್ಣೇಶ್ ಮತ್ತು ಪೂರ್ಣಿಮಾರೊಂದಿಗೆ ಕಡಿಯುತ್ತಿದ್ದಾಗ ಆರೋಪಿಗಳು ಅಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದದಿಂದ ಬೈದು ಕಳೆ ಕತ್ತರಿಸುವ ಯಂತ್ರದಿಂದ ಸುಂದರ ಮಲೆಕುಡಿಯರ ಕೈಬೆರಳುಗಳನ್ನು ಅಮಾನುಷವಾಗಿ ತುಂಡರಿಸಿ ಗಂಭೀರ ಗಾಯಗೊಳಿಸಿದ್ದರು. ಈ ವಿಕೃತಿ‌ಮೆರೆದಿದ್ದ ಆರೋಪಿಗಳು ಬಳಿಕ ಅಲ್ಲಿಂದ ಪರಾರಿಯಾಗಿದ್ದರು. ಅಂದು ಸುಂದರ ಮಲೆಕುಡಿಯ ಅವರ ತುಂಡಾಗಿದ್ದ ಬೆರಳುಗಳು ಅಲ್ಲಲ್ಲಿ ಬಿದ್ದುಕೊಂಡು ಘಟನೆಯ  ಗಂಭೀರತೆಯನ್ನು ಎತ್ತಿತೋರಿಸಿತ್ತು.ಅಂದು ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿತ್ತು.


ಅಂದು ಆರೋಪಿಯ ಅಣಕು ಶವಯಾತ್ರೆ, ಪ್ರತಿಕೃತಿ ದಹನ  ನಡೆಸಿದ್ದ ಪ್ರತಿಭಟನಾಕಾರರು

ಈ ಘಟನೆ ಎಟ್ರಾಸಿಟಿಯಾಗಿದ್ದುದರಿಂದ ಅಂದಿನ ಬಂಟ್ವಾಳ ಉಪವಿಭಾಗದ ಎಎಸ್ಪಿ ಯಾಗಿದ್ದ ಐಪಿಎಸ್ ಅಧಿಕಾರಿ ರಾಹುಲ್ ಕುಮಾರ್ ಅವರು ಪ್ರಕರಣದ ಇಂಚಿಂಚು ತನಿಖೆ ಕೈಗೊಂಡು ಸಮಗ್ರ ವರದಿ ತಯಾರಿಸಿದ್ದರು. ವೆನ್ಲಾಕ್ ಜಿಲ್ಲಾ ಸರಕಾರಿ ಆಸ್ಪತ್ರೆಯ ಅಂದಿನ ವೈದ್ಯಾಧಿಕಾರಿಯಾಗಿದ್ದ ಡಾ. ನಮ್ರತ್ ಭಾನು ಮತ್ತು ಎ.ಜೆ. ಆಸ್ಪತ್ರೆಯ ವೈದ್ಯ ಡಾ. ದಿನೇಶ್ ಕದಮ್, ಫೊರೆನ್ಸಿಕ್ ಲ್ಯಾಬ್‌ನ ಡಿಎನ್‌ಎ ವಿಭಾಗದ ತಜ್ಞೆ ಡಾ. ಶಹನಾಝ್ ಫಾತಿಮಾ ಸಹಿತ 29 ಮಂದಿ ಈ ಘಟನೆ ಬಗ್ಗೆ ಸರಕಾರದ ಪರವಾಗಿ ಸಾಕ್ಷಿ ನುಡಿದಿದ್ದರು. ಸರಕಾರದ ಪರವಾಗಿ ಸರಕಾರಿ ಅಭಿಯೋಜಕಿ ಜುಡಿತ್ ಓಲ್ಲಾ ಮಾರ್ಗರೇಟ್ ಕ್ರಾಸ್ತಾ ವಾದಿಸಿದ್ದರು.

ಅಂದು ಈ ದಲಿತ ದೌರ್ಜನ್ಯ ಪ್ರಕರಣ ದೇಶ ಮಟ್ಟದವರೆಗೆ ಚರ್ಚೆಗೆ ಕಾರಣವಾಗಿತ್ತು. ಸಿಪಿಐಎಂ ಹಾಗೂ ಇತರ ಸಮಾನ ಮನಸ್ಕ ಸಂಘಟನೆಗಳ ನೇತೃತ್ವದಲ್ಲಿ ಆಗಿನ ಹಳೆ ತಾಲೂಕು ಕಚೇರಿ ಬಳಿ ಭಾರೀ ಪ್ರತಿಭಟನೆ ನಡೆದಿತ್ತು. ಪ್ರಭಾವಿಗಳಾಗಿದ್ದ ಆರೋಪಿಗಳ ಪ್ರತಿಕೃತಿಗೆ ಚಪ್ಪಲಿ‌ಹಾರ ಹಾಕಿ ಮೆರವಣಿಗೆ, ಕಳೆಬರದ ಅಂತಿಮ ಯಾತ್ರೆ ಮತ್ತು ದಹನ ಕೂಡ ನಡೆಸಿದ್ದ ಪ್ರತಿಭಟನಾಕಾರರು ತಮ್ಮ ಆಕ್ರೋಶ ಹೊರಹಾಕಿದ್ದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment

© Live Media News. All rights reserved. Distributed by Pixabin Official