ಬೆಳ್ತಂಗಡಿ: ಅಕ್ರಮವಾಗಿ ಕೋಣಗಳನ್ನು ಸಾಗಾಟ ಮಾಡುತ್ತಿದ್ದ ವಾಹನವನ್ನು ಧರ್ಮಸ್ಥಳ ಠಾಣೆ ಪೊಲೀಸರು ಚಾರ್ಮಾಡಿ ಚೆಕ್ ಪೊಸ್ಟ್ ಬಳಿ ತಡೆದು ನಿಲ್ಲಿಸಿ, ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದ ಘಟನೆ ಜು.10ರಂದು ನಡೆದಿದೆ.
ಬಂಧಿತರು ಟಿ.ಶಿವಣ್ಣ ಮತ್ತು ಕೆ.ಪಿ ಸೋಮೇಗೌಡ ಎಂಬವರೆಂದು ಗುರುತಿಸಲಾಗಿದೆ.
ಧರ್ಮಸ್ಥಳ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕ ಚಂದ್ರಶೇಖರ ಕೆ ಅವರು ಸಿಬ್ಬಂದಿಗಳೊಂದಿಗೆ ಚಾರ್ಮಾಡಿ ಚೆಕ್ ಪೋಸ್ಟ್ ಬಳಿ ಕಾರ್ಯನಿರ್ವಹಿಸುತ್ತಿರುವ ವೇಳೆ ಚಿಕ್ಕಮಗಳೂರು ಕಡೆಯಿಂದ ಬರುತ್ತಿದ್ದ ಮಹೀಂದ್ರಾ ಜಿತೋ ವಾಹನವನ್ನು ತಡೆದು ನಿಲ್ಲಿಸಿ ವಾಹನವನ್ನು ತಪಾಸಣೆ ನಡೆಸಿದ ವೇಳೆ ಕೃತ್ಯ ಬೆಳಕಿಗೆ ಬಂದಿದೆ. ವಾಹನದ ಹಿಂಬದಿಯಲ್ಲಿ 2 ಕೋಣಗಳನ್ನು ಹಿಂಸಾತ್ಮಕ ರೀತಿಯಲ್ಲಿ ಅಕ್ರಮ ಸಾಗಾಟ ಮಾಡುತ್ತಿರುವುದು ಕಂಡು ಬಂದಿದ್ದು, ಈ ಬಗ್ಗೆ ವಿಚಾರಣೆ ನಡೆಸಿದ ಸಂದರ್ಭದಲ್ಲಿ ಆರೋಪಿಗಳು ದಾಖಲೆ ಹಾಜರುಪಡಿಸದೆ ಇರುವುದರಿಂದ ಆರೋಪಿಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ ವಾಹನ ವಶಕ್ಕೆ ಪಡೆದುಕೊಳ್ಳಲಾಗಿದೆ. ಕೋಣ ಗಳನ್ನೂ ಕೂಡ ಸಂರಕ್ಷಿಸಲಾಗಿದೆ.
ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.