ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಎಡ್ವರ್ಡ್ ಡಿಸೋಜರಿಗೆ ಶಾಲೆಗೇ ತೆರಳಿ ಸನ್ಮಾನ
ಬೆಳ್ತಂಗಡಿ; ವಿದ್ಯಾರ್ಥಿಗಳ ಮನಸ್ಸು ಮತ್ತು ಭಾವನೆ ಅರ್ಥೈಸಿಕೊಂಡು ಅವರಿಗೆ ಪೂರಕ ಶಿಕ್ಷಣ ಮತ್ತು ತರಬೇತಿ ನೀಡಿ ಅವರ ಭವಿಷ್ಯ ರೂಪಿಸುವವನೇ ನಿಜವಾದ ಶಿಕ್ಷಕ. ಅಂತಹಾ ಕೆಲಸ ಮಾಡಿದ ಕಟ್ಟದಬೈಲು ಶಾಲೆಯ ಮುಖ್ಯ ಶಿಕ್ಷಕ ಎಡ್ವರ್ಡ್ ಡಿಸೋಜ ಅವರು ಅರ್ಹವಾಗಿಯೇ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದು ಮಾಜಿ ಶಾಸಕ ವಸಂತ ಬಂಗೇರ ಮೆಚ್ಚುಗೆಯ ಮಾತುಗಳನ್ನಾಡಿದರು.
ಈ ಬಾರಿಯ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಎಡ್ವರ್ಡ್ ಡಿಸೋಜಾ ಅವರಿಗೆ ಮಂಗಳವಾರ ಅವರ ಶಾಲೆಗೇ ತೆರಳಿ ಸನ್ಮಾನ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ನಾನು ಶಾಸಕನಾಗಿದ್ದಾಗ ಈಶಾಲೆಯ ಎಲ್ಲಾ ಬೇಡಿಕೆಗಳನ್ನು ಪೂರೈಸಿದ್ದೇನೆ. ಇಲ್ಲಿ ಶಿಕ್ಷಕರ ಕೊರತೆ ಇದೆ ಎಂದು ತಿಳಿದುಕೊಂಡಿದ್ದೇನೆ. ನಾನು ಈಗ ಮಾಜಿ ಶಾಸಕನಾಗಿದ್ದರೂ ನೀವು ಮನವಿ ನೀಡಿದಲ್ಲಿ ಈ ಬಗ್ಗೆ ನಾನೂ ಸಂಬಂಧಪಟ್ಟವರ ಗಮನಸೆಳೆಯಲು ಸಿದ್ದನಿದ್ದೇನೆ. ಅತೀ ಹೆಚ್ಚು ಬಡವರು ಇರುವ ಈ ಗ್ರಾಮ ಇನ್ನಷ್ಟು ಅಭಿವೃದ್ಧಿ ಆಗಬೇಕು. ಅದಕ್ಕೆ ಪೂರಕವಾಗಿ ಎಡ್ವರ್ಡ್ ಡಿಸೋಜ ಅವರ ಪ್ರಶಸ್ತಿ ಪೂರಕವಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷ ಶೇಖರ್ ಪೆಜತ್ತಕಾಡು ವಹಿಸಿದ್ದು ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಕಳಿಯ ಗ್ರಾ.ಪಂ ಸದಸ್ಯರಾದ ಕೆ. ಎಮ್ ಅಬ್ದುಲ್ ಕರೀಮ್ ಗೇರುಕಟ್ಟೆ, ಶ್ವೇತಾ, ಮೋಹಿನಿ ಮತ್ತು ಪುಷ್ಪಾ, ಕುವೆಟ್ಟು ಗ್ರಾ.ಪಂ ಸದಸ್ಯೆ ವನಿತಾ, ಎಸ್‌ಡಿಎಂಸಿ ಉಪಾಧ್ಯಕ್ಷ ಅಲೆಕ್ಸಾಂಡರ್, ಅಂಗ ವಾಡಿ ಕಾರ್ಯಕರ್ತೆ ಪ್ರಮೀಳಾ, ಸಹಶಿಕ್ಷಕರಾದ ಶಾರದಾಮಣಿ, ಭಾಗೀರಥಿ, ಮುಖಂಡರಾದ ಸಲೀಂ ಗುರುವಾಯನಕೆರೆ, ಬಿ.ಕೆ ವಸಂತ, ಪ್ರಭಾಕರ್ ಶಾಂತಿಕೋಡಿ ಮೊದಲಾದವರು ಉಪಸ್ಥಿತರಿದ್ದರು.
ಶಿಕ್ಷಕಿ ತುಳಸಿ ಕಾರ್ಯಕ್ರಮ ನಿರೂಪಿಸಿದರು.
ಹಿಂದಿನ ಮುಖ್ಯಮಂತ್ರಿ ಮತ್ತು ಈಗಿನ ಮುಖ್ಯಮಂತ್ರಿಗಳಿಬ್ಬರೂ ನನ್ನ ಆತ್ಮೀಯರಾಗಿದ್ದು, ನಾನು ಅವರ ಬಳಿ ಯಾವುದೇ ಬೇಡಿಕೆ ಕೇಳಿದ್ದಿಲ್ಲ. ಓಡಿಲ್ನಾಳ ಗ್ರಾಮದ ದೇವಸ್ಥಾನದ ಅಭಿವೃದ್ಧಿಗಾಗಿ ನಾನು ಕ್ಷೇತ್ರದ ಶಾಸಕ ಹರೀಶ್ ಪೂಂಜ ಅವರ ಜೊತೆ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದು ಅವರು 50 ಲಕ್ಷ ರೂ. ಮಂಜೂರು ಮಾಡಿದ್ದಾರೆ. ಆ ನಿಟ್ಟಿನಲ್ಲಿ ಕ್ಷೇತ್ರದ ಶಾಸಕರನ್ನು ನಾನು ವೈಯುಕ್ತಿಕವಾಗಿ ಅಭಿನಂದಿಸುತ್ತೇನೆ.
+ವಸಂತ ಬಂಗೇರ, ಮಾಜಿ ಶಾಸಕರು.