ಬೆಳ್ತಂಗಡಿ; ಶಂಕಿತ ಇಲಿ ಜ್ವರಕ್ಕೊಳಗಾಗಿ ಮುಂಡಾಜೆ ಗ್ರಾಮದ ಸೋಮಂತಡ್ಕ ಮಸೀದಿಬಳಿ ನಿವಾಸಿ ಅಬೂಬಕ್ಕರ್ ಮುಸ್ಲಿಯಾರ್ ಕೂಳೂರು(70ವ.) ಅವರು ಮಂಗಳವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಆರೋಗ್ಯವಂತರಾಗಿದ್ದ ಅವರಿಗೆ ಮೂರು ದಿನಗಳಿಂದ ಜ್ವರ ಹಾಗೂ ನಿತ್ರಾಣ ಆವರಿಸಿತ್ತು. ಎರಡು ದಿನಗಳ ಹಿಂದೆ ಅವರು ಕೋವಿಡ್ ಲಸಿಕೆಯನ್ನೂ ಪಡೆದುಕೊಂಡಿದ್ದರು. ಈ ಮಧ್ಯೆ ಅವರು ಜಮಾಅತ್ ನಲ್ಲಿ ನಡೆದ ಖಾಸಗಿ ಕಾರ್ಯಕ್ರಮಗಳಲ್ಲಿ ಹಾಗೂ ಕಲ್ಲಡ್ಕದಲ್ಲಿ ಮೊಮ್ಮಗಳ ವಿವಾಹ ನಿಶ್ಚಿತಾರ್ಥದಲ್ಲೂ ಭಾಗವಹಿಸಿದ್ದರು. ಅಲ್ಲಿಂದ ತನ್ನ ಬೈಕಿನಲ್ಲೇ ಮನೆಗೆ ಮರಳಿದ್ದರು. ಆದರೆ ಸೋಮವಾರ ಸಂಜೆ ವೇಳೆ ಅವರ ಆರೋಗ್ಯದಲ್ಲಿ ತೀವ್ರ ಏರುಪೇರಾಗಿ ಅವರನ್ನು ಕಕ್ಕಿಂಜೆಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಅಲ್ಲಿ ರಕ್ತ ಪರೀಕ್ಷೆ ನಡೆಸಿದ ವೇಳೆ ಅವರಿಗೆ ತೀವ್ರ ಪ್ರಮಾಣದಲ್ಲಿ ಪ್ಲೇಟ್‌ಲೆಟ್ ಕೊರತೆ ಆಗಿರುವುದು ಗೋಚರಕ್ಕೆ ಬಂತು. ವೈದ್ಯರ ಸಲಹೆ ಮೇರೆಗೆ ಅದಾಗಲೇ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಸುತ್ತಿರುವಂತೆ ಅವರು ಮಂಗಳವಾರ ಮಧ್ಯಾಹ ಕೊನೆಯುಸಿರೆಳೆದಿದ್ದಾರೆ.
ಅಬೂಬಕ್ಕರ್ ಮುಸ್ಲಿಯಾರ್ ಅವರು ಹಿರಿಯ ಧರ್ಮಗುರುಗಳಲ್ಲಿ ಓರ್ವರಾಗಿದ್ದು, ಬಂಟ್ವಾಳ ತಾಲೂಕಿನ ಕೆಳಗಿನ ವಗ್ಗ, ಹಂಡೇಲ್, ಕೊಟ್ಟಿಗೆಹಾರ, ಕುಕ್ಕಾಜೆ, ಚಾರ್ಮಾಡಿ, ಪಡುಬಿದ್ರೆ ಮೊದಲಾದ ಮಸೀದಿ- ಮದರಸಗಳಲ್ಲಿ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದ್ದರು.
ಮೃತರು ಪತ್ನಿ ಆಮಿನಾ, ಓರ್ವ ಪುತ್ರ ಅನ್ವರ್ ಸಾದಾತ್, ನಾಲ್ವರು ಪುತ್ರಿಯರಾದ ರೈಹಾನಾ, ರಂಳತ್, ಝೀನತ್ ಮತ್ತು ಸುಮಯ್ಯಾ, ಸಹೋದರರಾದ ಪುತ್ತಾಕ ಕೂಳೂರು ಮತ್ತು ಇಬ್ರಾಹಿಂ ಕೂಳೂರು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.