ಬೆಳ್ತಂಗಡಿ; ಉಜಿರೆ ಎಸ್.ಡಿ.ಎಂ ಕಾಲೇಜಿನ ಆವರಣದಲ್ಲಿ ನಡೆದ ಮತ ಎಣಿಕೆ ಬಳಿಕದ ಸಂಭ್ರಮಾಚರಣೆ ವೇಳೆ ಎಸ್.ಡಿ.ಪಿ.ಐ ಪರವಾಗಿದ್ದ ಜನರು ಪಾಕಿಸ್ತಾನಕ್ಕೆ ಝೀಂದಾಬಾದ್ ಕೂಗಿದ್ದಾರೆಂಬ ವೀಡಿಯೋ ವೈರಲ್ ಆಗಿದ್ದು ಈ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ 10-15 ಮಂದಿಯ ವಿರುದ್ದ ದೇಶದ್ರೋಹದ ಗಂಭೀರ ಸೆಕ್ಷನ್‌ನಡಿ ಎಫ್.ಐ.ಆರ್ ದಾಖಲಾಗಿದೆ.
ತಾಲೂಕಿನ 46 ಗ್ರಾ.ಪಂ ಗಳಿಗೆ ನಡೆದ ಈ ಚುನಾವಣೆಯ ಫಲಿತಾಂಶ ಒಂದೊಂದಾಗಿ ಹೊರಬರುತ್ತಿರುವಂತೆಯೇ ಬಹುತೇಕ ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತರು ಜಯಗಳಿಸುತ್ತಿದ್ದುದರಿಂದ ಬಿಜೆಪಿ ಕಾರ್ಯಕರ್ತರ ಸಂಭ್ರಮ ಜೋರಾಗಿತ್ತು. ಇದರ ಮಧ್ಯೆಯೇ ಚಾರ್ಮಾಡಿ, ಮಿತ್ತಬಾಗಿಲು, ಕುವೆಟ್ಟು, ಕ್ಷೇತ್ರದಲ್ಲಿ ಎಸ್.ಡಿ.ಪಿ.ಐ ಅಭ್ಯರ್ಥಿಗಳು ಜಯಗಳಿಸಿರುವುದಾಗಿ ಘೋಷಣೆಯಾಯಿತು.
ಈ ವೇಳೆ ವಿಜಯೋತ್ಸವ ಕೈಗೊಂಡ ಎಸ್.ಡಿ.ಪಿ.ಐ ಕಾರ್ಯಕರ್ತರೂ ವಿಜಯೋತ್ಸವ ಆರಂಭಿಸಿದರು. ಈ ವೇಳೆ ಆವೇಶದಿಂದ ಅವರ ಪಕ್ಷದ ಪರ ಘೋಷಣೆಯ ಮಧ್ಯೆ ಕಿಡಿಗೇಡಿಗಳು ಪಾಕಿಸ್ತಾನ ಪರ ಘೋಷಣೆ ಕೂಗಿದ್ದು ಆ ವೀಡಿಯೋ ವೈರಲ್ ಆಗಲು ಪ್ರಾರಂಭಿಸಿತು. ತಕ್ಷಣ ಸ್ಥಳಕ್ಕೆ ಎಸ್.ಪಿ ಲಕ್ಷ್ಮೀ ಪ್ರಸಾದ್, ಬಂಟ್ವಾಳ ಡಿವೈಎಸ್‌ಪಿ ವೆಲೆಂಟೈನ್ ಡಿಸೋಜಾ ಆಗಮಿಸಿ ಪರಿಸ್ಥಿತಿ ಅವಲೋಕಿಸಿದರು.
ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್, ವಿಶ್ವ ಹಿಂದೂ ಪರಿಷತ್ ಮುಖಂಡರು ಸ್ಥಳಕ್ಕೆ ಬಂದು ದೇಶದ್ರೋಹಿಗಳನ್ನು ಬಂಧಿಸುವಂತೆ ಆಗ್ರಹಿಸಿದರು.
ಈ ವೇಳೆ ಪರಿಸ್ಥಿತಿ ಇನ್ನಷ್ಟು ಬಿಗಿಯಾಗ ತೊಡಗಿತು. ತಕ್ಷಣ ಕ್ರಮಕ್ಕೆ ಮುಂದಾದ ಪೊಲೀಸರು ಎಸ್.ಡಿ.ಪಿ.ಐ ಪಕ್ಷದ ಪರ ಇದ್ದ 10 ರಿಂದ 15 ಮಂದಿಯ ವಿರುದ್ಧ ಅಪರಾಧ ಕ್ರಮಸಂಖ್ಯೆ 99/20 ಕಲಂ 143,124A r/w 149 ರಂತೆ ದೇಶದ್ರೋಹ ಗಂಭೀರ ಸೆಕ್ಷನ್‌ನಡಿ ಪ್ರಕರಣ ದಾಖಲಿಸಿದರು.
ಈ ಮಧ್ಯೆ ಆವೇಶಗೊಂಡಿದ್ದ ಎರಡೂ ಗುಂಪಿನ ಕಾರ್ಯಕರ್ತರ ವಿಜಯೋತ್ಸವದಲ್ಲಿ ಬಿಜೆಪಿ ಮತ್ತು ಎಸ್.ಡಿ.ಪಿ.ಐ ಬೆಂಬಲಿತರು ಪರಸ್ಪರ ಎದುರು ಬದುರಾಗಿ ಘೋಷಣೆಗಳನ್ನು ಮೊಳಗಿಸುತ್ತಾ ಕೆಲಹೊತ್ತು ಕಾವೇರಿದ ವಾತಾವರಣಕ್ಕೆ ಸಾಕ್ಷಿಯಾದರು. ಈ ವೇಳೆ ಎರಡೂ ತಂಡವನ್ನು ನಿಯಂತ್ರಿಸಲು ಪೊಲೀಸರೂ ಮಧ್ಯಪ್ರವೇಶಿಸಿದಾಗ ತಲ್ಲಾಟಗಳೂ ನಡೆದವು.
ಘಟನೆಗೆ ಸಂಬಂಧಿಸಿದಂತೆ ಶಾಸಕ ಹರೀಶ್ ಪೂಂಜ ಸರ್ಕಲ್ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ ಅವರನ್ನು ಭೇಟಿ ಮಾಡಿ, ಸಂಜೆಯೊಳಗೆ ಆರೋಪಿಗಳನ್ನು ಬಂಧಿಸದಿದ್ದರೆ ನಾನೇ ಬಂದು ಕುಳಿತುಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಘಟನೆಗೆ ಸಂಬಂಧಿಸಿದಂತೆ ಎಸ್.ಡಿ.ಪಿ.ಐ ಅಧ್ಯಕ್ಷರು ತಮ್ಮ ಬೆಂಬಲಿಗರನ್ನು ಸಮರ್ಥಿಸಿಕೊಂಡರೆ, ವಿಹಿಂಪ, ಭಜರಂಗದಳ ಸಂಘಟನೆ ಹಾಗೂ ಹಿಂದೂ ಸಂಘಟನೆಗಳು ಖಂಡಿಸಿ ಪತ್ರಿಕಾ ಗೋಷ್ಠಿ ಮತ್ತು ಠಾಣೆಗೆ ದೂರು ನೀಡಿದ ವಿದ್ಯಮಾನ ನಡೆಯಿತು.