ಬೆಳ್ತಂಗಡಿ; ವ್ಯಕ್ತಿತ್ವ ವಿಕಸನಕ್ಕೆ ಹೆಸರುವಾಸಿಯಾದ ಅಂತರಾಷ್ಟ್ರೀಯ ಸಂಸ್ಥೆ ಜೆಸಿಐ ಬೆಳ್ತಂಗಡಿ ಮಂಜುಶ್ರೀಯು ಕಳೆದ 45 ವರ್ಷಗಳಿಂದ ಕಾರ್ಯನಿರ್ವಾಹಿಸುತಿದ್ದು ಹಲವಾರು ಸಮಾಜಮುಖಿ ಕಾರ್ಯಕ್ರಮಗಳಿಂದ ಹೆಸರುವಾಸಿಯಾಗಿದೆ, ಈ ವರ್ಷ ಅದ್ಭುತ ಕಾರ್ಯಕ್ರಮಗಳನ್ನು ಮಾಡಿ ಒಂದೇ ದಿನ ಅತೀ ಹೆಚ್ಚು ತರಬೇತಿ ನಡೆದಿ ಪ್ರತಿಷ್ಠಿತ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಸಾಧನೆಯನ್ನ ತನ್ನ ಮುಡಿಗೆರಿಸಿಕ್ಕೊಂಡಿದೆ. ಬೆಳ್ತಂಗಡಿ ಹಬ್ಬವೆಂದೆ ಹೆಸರುವಾಸಿಯಾದ ಜೆಸಿ ಸಪ್ತಾಹ ಈ ವರ್ಷ ಮತ್ತೆ ವಿಜೃಂಭಣೆಯಿಂದ ನಡೆಯಲಿದ್ದು ದಿನಾಂಕ 29-10-22 ನೇ ಶನಿವಾರದಿಂದ 4-11-22 ನೇ ಶುಕ್ರವಾರದ ತನಕ ನಡೆಯಲಿದೆ. ಇದಕ್ಕಾಗಿ ಬೆಳ್ತಂಗಡಿ ಗುರುನಾರಾಯಣ ಸ್ವಾಮಿ ವಾಣಿಜ್ಯ ಸಂಕೀರ್ಣದ ಆಶಾ ಸಾಲಿಯಾನ್ ಸಭಾಂಗಣದಲ್ಲಿ ಪ್ರತಿದಿನ ಸಂಜೆ 6.30 ಕ್ಕೆ ಜರುಗಲಿದೆ ಎಂದು ಘಟಕದ ಅಧ್ಯಕ್ಷ ಪ್ರಸಾದ್ ಬಿ.ಎಸ್ ಮತ್ತು ಸಪ್ತಾಹದ ಸಂಯೋಜಕ ಚಂದ್ರಹಾಸ ಬಳಂಜ ಹೇಳಿದರು.
ಬುಧವಾರ ಬೆಳ್ತಂಗಡಿ ಪ್ರೆಸ್‌ಕ್ಲಬ್ ನಲ್ಲಿ ಕರೆದಿದ್ದ ಮಾಧ್ಯಮಗೋಷ್ಟಿಯಲ್ಲಿ ಅವರು ವಿವರ ನೀಡಿದರು.
ಅ.29 ರಂದು ಶಾಸಕ ಹರೀಶ್ ಪೂಂಜ ಈ ಬಾರಿಯ ಜೇಸಿ ಸಪ್ತಾಹ ಉದ್ಘಾಟನೆ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಶಾಸಕ ಕೆ.ಪ್ರತಾಪ ಸಿಂಹ ನಾಯಕ್, ಗಣ್ಯರಾದ ಶರತ್ ಕೃಷ್ಣ ಪಡೈಟ್ನಾಯ, ದೇವೇಂದ್ರ ಹೆಗ್ಡೆ ಕೊಕ್ರಾಡಿ, ಪದ್ಮರಾಜ್ ಹೆಗ್ಡೆ, ಭಗೀರಥ ಜಿ.,ಅನಿಲ್ ಕುಮಾರ್ ಮೊದಲಾದವರು ಭಾಗವಹಿಸಲಿದ್ದಾರೆ.
ಆ ದಿನ ಸಮಾಜ ಸೇವೆಗಾಗಿ ಲಕ್ಷ್ಮೀ ಇಂಡಸ್ಟ್ರೀಸ್ ನ ಕೆ.ಮೋಹನ್ ಕುಮಾರ್ ಅವರಿಗೆ ಸಾಧನಾಶ್ರೀ ಪ್ರಶಸ್ತಿ ನೀಡಿ ಪುರಸ್ಕರಿಸಲಿದ್ದೇವೆ. ಅಲ್ಲದೆ ಅದೇ ದಿನ ತಾಲೂಕಿನ 7 ಯುವ ಸಾಧಕರಿಗೆ ಯುವ ಜೇಸಿ ಪುರಸ್ಕಾರ ನೀಡಿ ಗೌರವಿಸಲಿದ್ದೇವೆ.
ಸಪ್ತಾಹದುದ್ದಕ್ಕೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರಾದ ಕ್ರೀಡಾ ಕ್ಷೇತ್ರದಲ್ಲಿ ನಿತಿನ್ ಕುಮಾರ್, ಕೃಷಿ ಕ್ಷೇತ್ರದಲ್ಲಿ ಅನಿಲದ ಭಟ್ ಬಳಂಜ, ಜನಪದ ಕ್ಷೇತ್ರದಲ್ಲಿ ಉದಯ್ ಕುಮಾರ್ ಲಾಯಿಲ, ಕಲಾ ಕ್ಷೇತ್ರದಲ್ಲಿ ಸುಭಾಷ್ ಅರ್ವ, ರಶ್ಮಿ ನಾರಾವಿ, ವೈದ್ಯಕೀಯ ಕ್ಷೇತ್ರದಲ್ಲಿ ಡಾ.ಸದಾನಂದ ಪೂಜಾರಿ ಇವರು "ಸಾಧನಾಶ್ರೀ ಪ್ರಶಸ್ತಿ" ಪಡೆಯಲಿದ್ದಾರೆ. ಅಲ್ಲದೆ ಜೇಸಿಯ ಈ ವರ್ಷದ ಪ್ರತಿಷ್ಠಿತ ಯುವ ಪ್ರಶಸ್ತಿಗೆ ಯುವ ಉದ್ಯಮಿ ರಾಕೇಶ್ ಹೆಗ್ಡೆ ಬಳಂಜ ಇವರು ಆಯ್ಕೆಯಾಗಿದ್ದು, ಅವರನ್ನು ಸಮಾರೋಪ ಸಮಾರಂಭದಲ್ಲಿ ಸನ್ಮಾನಿಸಲಿದ್ದೇವೆ ಎಂದರು. ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಆಶಯವನ್ನಿಟ್ಟುಕ್ಕೊಂಡು ಪ್ರತೀದಿನ ವಿವಿಧ ಸ್ಪರ್ಧೆಗಳು ನಡೆಯಲಿದ್ದು ತಾಲೂಕು ಮಟ್ಟದ ನೃತ್ಯ ಸ್ಪರ್ಧೆ, ಕ್ರೀಡೆ, ರಾಜ್ಯ ಮಟ್ಟದ ಡ್ಯಾನ್ಸ್ ಸ್ಪರ್ಧೆ ತಕಧಿಮಿತ - 2022, ಜೇಸಿ ಸ್ಟಾರ್ ಸಿಂಗರ್ ಸೀಸನ್ 3, ಆದರ್ಶ ದಂಪತಿಗಳು, ತುಳುನಾಡು ಫ್ಯಾಷನ್ ಶೋ, ಜೋಡಿ ನಂಬರ್ 1 ಡ್ಯಾನ್ಸ್ ಸ್ಪರ್ಧೆ, ಆಮಂತ್ರಣ ಪರಿವಾರದ ನೃತ್ಯ-ಗಾನ-ಲಹರಿ, ಜೇಸಿ ಬಂಧುಗಳ ಸಮಾಗಮ ಜೇಸಿ ಝಲಕ್ ಹಾಗೂ ಕೊನೆಯ ದಿನ ಜಿಲ್ಲೆಯ ಹೆಸರಾಂತ ಆಹ್ವಾನಿತ ತಂಡಗಳಿಂದ ಕಾಮಿಡಿ ಸ್ಪರ್ಧೆ ನಡೆಯಲಿದೆ. ಕೋವಿಡ್ ಕಾರಣದಿಂದ ಮೂರು ವರ್ಷಗಳಲ್ಲಿ ನಡೆಯದೇ ಇದ್ದ ಸಪ್ತಾಹ ಈ ವರ್ಷ ಅತ್ಯಂತ ವೈಭವದಿಂದ ನಡೆಯಲಿದೆ. ಇದಕ್ಕೆ ಎಲ್ಲರ ಸಹಕಾರ ಬಯಸುತ್ತೇವೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಜೇಸಿ ಘಟಕದ ಪೂರ್ವಾಧ್ಯಕ್ಷ ಚಿದಾನಂದ ಇಡ್ಯ, ಉಪಾಧ್ಯಕ್ಷೆ ಹೇಮಾವತಿ ಕೆ, ಕಾರ್ಯದರ್ಶಿ ಶಂಕರ ರಾವ್ ಉಪಸ್ಥಿತರಿದ್ದರು.
ವರದಿ: ಅಚ್ಚು ಮುಂಡಾಜೆ