ಬೆಳ್ತಂಗಡಿ; ಎಂಡೋ ಸಂತ್ರಸ್ತರಿಗೆ ಸೂಕ್ತ ಮಾಸಾಸನ ಮತ್ತು ಸೌಲಭ್ಯಗಳನ್ನು ಕಲ್ಪಿಸುವ ಕುರಿತು ಹಾಗೂ ಕೊಕ್ಕಡದ ನೂತನ ಸಮುದಾಯ ಆಸ್ಪತ್ರೆಯಲ್ಲಿ ಎಂಡೋ ಪೀಡಿತರಿಗೆ ಸೂಕ್ತ ಸೌಲಭ್ಯಗಳನ್ನು ದೊರೆಯುವಂತಾಗಬೇಕು ಎಂಬ ಬಗ್ಗೆ ಎಂಡೋ ಸಂತ್ರಸ್ತರ ಪರವಾಗಿ ಹೋರಾಟಗಾರ ಶ್ರೀಧರ ಗೌಡ ಕೆಂಗುಡೇಲು ಅವರು ಆರೋಗ್ಯ ಸಚಿವ ಡಾ. ಸುಧಾಕರ್ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.
ರಾಜ್ಯದ ದ.ಕ, ಉಡುಪಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಎಂಡೋಸಂತ್ರಸ್ತರೆಂದು ಸುಮಾರು 9 ಸಾವಿರ ಜನರನ್ನು ಆರೋಗ್ಯ ಇಲಾಖೆ ಗುರುತಿಸಿದ್ದು 2011 ರಲ್ಲಿ ನ್ಯಾಯಲಯದ ಆದೇಶದ ಪ್ರಕಾರ 60 % .ಕ್ಕಿಂತ ಹೆಚ್ಚು ಬಾಧಿತರಾದವರಿಗೆ 3000 , 25 % ಕ್ಕಿಂತ ಹೆಚ್ಚು 60 % ಕ್ಕಿಂತ ಒಳಗೆ ಬಾಧಿತರಾದವರಿಗೆ 1500 ಮಾಸಾಶನ ನೀಡಲಾಗುತ್ತಿದೆ .ಆದರೆ ಆ ಬಳಿಕ ಈ ಪಿಂಚಣಿಯಲ್ಲಿ ಯಾವುದೇ ಹೆಚ್ಚಳವಾಗಿರುವುದಿಲ್ಲ. ಆದುದರಿಂದ ಸಚಿವರು ಈ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿ ನಮಗೆ ನ್ಯಾಯ ಕೊಡಬೇಕು.
3000 ಮಾಸಾಶನ ಪಡೆಯುತ್ತಿದ್ದವರಿಗೆ 5000 , ಮತ್ತು 1500 ಮಾಸಾಸನ ಪಡೆಯುತ್ತಿದ್ದವರಿಗೆ 3000 ಮಾಸಾಶನ ಹಾಗೂ ನೀಲಿ ಸ್ಮಾರ್ಟ್ ಕಾರ್ಡ್ ಹೊಂದಿರುವ ಎಂಡೋಸಂತ್ರಸ್ತರಿಗೂ ಮಾಸಾಶನ ಬೇಕು. ಆರೋಗ್ಯ ಇಲಾಖೆ ನ್ಯಾಯಾಲಯ ಮತ್ತು ಮಾನವ ಹಕ್ಕುಗಳ ಆಯೋಗಕ್ಕೆ ಸಲ್ಲಿಸಿದ ವರದಿಯ ಪ್ರಕಾರ ಎಂಡೋ ಸಂತ್ರಸ್ತರಿಗೆ ಧವಸಧಾನ್ಯ- ಪೌಷ್ಠಿಕ ಆಹಾರಗಳನ್ನು ತಿಂಗಳುವಾರು ವಿತರಿಸಬೇಕು, ಎಂಡೋ ಸಂತ್ರಸ್ತರು ಮತ್ತು ಅವರ ಪೋಷಕರಿಗೂ ಖಾಸಗಿ ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ದೊರೆಯುವಂತೆ ಮಾಡಬೇಕು, ಮೂರು ಗ್ರಾಮಗಳಿಗೊಂದು ಪಾಲನಾ ಕೇಂದ್ರ ಹಾಗೂ ತಾಲೂಕಿಗೊಂದು ಶಾಶ್ವತ ಪುನರ್ವಸತಿ ಕೇಂದ್ರವನ್ನು ಸ್ಥಾಪಿಸಬೇಕು, ಈ ಶಾಶ್ವತ ಪುನರ್ವಸತಿ ಕೇಂದ್ರವನ್ನು ಆರಂಭಿಕ ಹಂತದಲ್ಲಿ ಖಾಲಿಯಿರುವ ಸರ್ಕಾರಿ ಕಟ್ಟಡದಲ್ಲೂ ಆರಂಭಿಸಬಹುದು, ಸಂಚಾರಿ ಫಿಸಿಯೋಥೆರಪಿ ಘಟಕಗಳಲ್ಲಿ ಎಲ್ಲಾ ಎಂಡೋ ಸಂತ್ರಸ್ತರಿಗೆ ಔಷಧಿ ದೊರೆಯುವಂತೆ ಮಾಡಬೇಕು, ಎಂಡೋಬಾಧಿತ ಪ್ರದೇಶದ ಗರ್ಭಿಣಿಯರಿಗೆ ಅನುಕೂಲವಾಗುವಂತೆ ಸ್ಕೇನಿಂಗ್ ಯಂತ್ರವನ್ನು ಮತ್ತು ಸಿಬ್ಬಂದಿಯನ್ನು ಕೊಕ್ಕಡ ಸಮುದಾಯ ಆಸ್ಪತ್ರೆಯಲ್ಲಿ ವ್ಯವಸ್ಥೆಗೊಳಸಬೇಕು.
ದಿನದ 24 ಗಂಟೆಯೂ ವೈದ್ಯರು ದೊರೆಯುವಂತಾಗಬೇಕು,
ನೂತನ ಎಕ್ಸ್‌ರೇ ಘಟಕ ಮತ್ತು ಸಿಬ್ಬಂದಿಯನ್ನು ಒದಗಿಸಬೇಕು, ಮರಣೋತ್ತರ ಪರೀಕ್ಷೆ ನಡೆಸಲು ಸಮರ್ಥ ಸಿಬ್ಬಂದಿಯನ್ನು ಒದಗಿಸಿಕೊಡಬೇಕು, ಅಸ್ಪತ್ರೆಗೆ ನೂತನ ಆಂಬ್ಯುಲೆನ್ಸ್ ವಾಹನವನ್ನು ಒದಗಿಸಬೇಕು ಎಂಬಿತ್ಯಾದಿ ಪ್ರಮುಖ ಬೇಡಿಕೆಗಳ ಬಗ್ಗೆ ಮನವಿಯಲ್ಲಿ ಸಚಿವರ ಗಮನಸೆಳೆಯಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಎಂಡೋ ಸಂತ್ರಸ್ತರ ಬೇಡಿಕೆ ಬಗ್ಗೆ ಶಾಸಕ ಹರೀಶ್ ಪೂಂಜ ಅವರು ಆಗಾಗ ನನ್ನಲ್ಲಿ ಮತ್ತು ಮುಖ್ಯಮಂತ್ರಿ ಯವರಲ್ಲಿ ಪ್ರಸ್ತಾಪಿಸುತ್ತಿದ್ದಾರೆ. ಉಸ್ತುವಾರಿ ಸಚಿವರೂ ಪ್ರಯತ್ನಿಸುತ್ತಿದ್ದಾರೆ. ಆದಷ್ಟು ಶೀಘ್ರದಲ್ಲಿ ನಿಮ್ಮ ಬೇಡಿಕೆಗಳಿಗೆ ಸರಕಾರದ ಕಡೆಯಿಂದ ಪೂರಕ ಸ್ಪಂದನೆ ನೀಡಲಾಗುವುದು ಎಂದರು.
ಸ್ಥಳೀಯ ಗ್ರಾ.ಪಂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.