ಬೆಳ್ತಂಗಡಿ; ಕೋವಿಡ್ ಸಂಕಷ್ಟದ ಸಂದಿಗ್ದ ಕಾಲಘಟ್ಟದಲ್ಲೂ ಕೂಡ ಸಂದರ್ಭವನ್ನು ಅವಕಾಶವಾಗಿ ಪರಿವರ್ತಿಸಿಕೊಂಡ ಅಂತಾರಾಷ್ಟ್ರೀಯ ಸೇವಾ ಸಂಸ್ಥೆ ರೋಟರಿ ಕ್ಲಬ್ ಬೆಳ್ತಂಗಡಿ ಒಂದು ಸಾವಿರ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ವಿಶೇಷ ಸಾಧನೆ ಮೆರೆದಿದ್ದು, ಇದೀಗ ರೋಟರಿ ಜಿಲ್ಲೆ 3181ರ ಅತ್ಯುನ್ನತ ಪ್ರಶಸ್ತಿಯಾದ "ಪ್ಲಾಟಿನಮ್ ಪ್ಲಸ್" ಬಿರುದಿಗೆ ಭಾಜನವಾಗಿದೆ.
ದಕ್ಷಿಣ ಕನ್ನಡ, ಕೊಡಗು ಹಾಗೂ ಮೈಸೂರು ಕಂದಾಯ ಜಿಲ್ಲೆಗಳನ್ನು ಹೊಂದಿರುವ ರೋಟರಿ ಕ್ಲಬ್ ಜಿಲ್ಲಾ ವ್ಯಾಪ್ತಿಯಲ್ಲಿ, ಸುವರ್ಣ ಮಹೋತ್ಸವ ಸಂಭ್ರಮದಲ್ಲಿರುವ ಬೆಳ್ತಂಗಡಿ ರೋಟರಿ ಕ್ಲಬ್ ತಮ್ಮ ವಿಶಿಷ್ಟ ಸೇವಾ ಸಾಧನೆಗಾಗಿ ಈ ಬಿರುದಿಗೆ ಪಾತ್ರವಾಗಿದೆ.
ಅನೇಕ ಸವಾಲುಗಳ ಮಧ್ಯೆಯೂ ಜನಪರವಾದ 1 ಸಾವಿರದಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ರಾಷ್ಟ್ರಮಟ್ಟದಲ್ಲಿ ರೋಟರಿ ಇತಿಹಾಸದಲ್ಲೇ ಒಂದು ವರ್ಷದಲ್ಲಿ ಅತೀ ಹೆಚ್ಚು ಕಾರ್ಯಕ್ರಮ ಸಂಘಟಿಸಿದ ಕ್ಲಬ್ ಎಂದು ಬೆಳ್ತಂಗಡಿ ಈಗಾಗಲೇ ಗುರುತಿಸಿಕೊಂಡಿದ್ದಲ್ಲದೆ, ರೋಟರಿ ನ್ಯೂಸ್ ರಾಷ್ಟ್ರೀಯ ಪತ್ರಿಕೆಯಲ್ಲಿ ಬೆಳ್ತಂಗಡಿ ಕ್ಲಬ್ಬಿನ ಕಾರ್ಯಕ್ರಮಗಳ 6 ಪುಟದ ವರದಿ ಬಂದಿರುವುದು ಸಂಘಟಿತ ಪ್ರಯತ್ನಕ್ಕೆ ಹಿಡಿದ ಕೈಗನ್ನಡಿಯಾಗಿತ್ತು.
ಗತ ಅವಧಿಯಲ್ಲಿ ನ್ಯಾಯವಾದಿ ಬಿ.ಕೆ ಧನಂಜಯ ರಾವ್ ಅಧ್ಯಕ್ಷರಾಗಿ, ಶ್ರೀಧರ ಕೆ. ವಿ ಕಾರ್ಯದರ್ಶಿಯಾಗಿರುವ ಇಡೀತಂಡ ಸೇವೆಗೆ ನೇತ್ರತ್ವ ನೀಡಿದ್ದರೆ, ಪ್ರಸ್ತುತ ಸಾಲಿನಲ್ಲಿ ಶರತ್‌ಕೃಷ್ಣ ಪಡುವೆಟ್ನಾಯ ಅಧ್ಯಕ್ಷರಾಗಿ, ಅಬೂಬಕರ್ ಕಾರ್ಯದರ್ಶಿಯಾಗಿ ಅವರ ತಂಡ ಹಿಂದಿನವರ ಸೇವಾ ಪಥದ ಮೇಲೆ ಹೆಜ್ಜೆ ಇಡಲು ಸಿದ್ಧತೆ ನಡೆಸಿಕೊಂಡಿದ್ದಾರೆ.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯ ಮಂಗಳೂರಿನ ಸ್ಥಾಪಕ ಪ್ರಾಂಶುಪಾಲರು ಹಾಗೂ ಹಿರಿಯ ನ್ಯಾಯವಾದಿ ಎನ್ ಜೆ. ಕಡಂಬ ಅವರ ಅಧ್ಯಕ್ಷತೆಯಲ್ಲಿ ಪ್ರಾರಂಭವಾದ ರೋಟರಿ ಕ್ಲಬ್ ಬೆಳ್ತಂಗಡಿ, ಕ್ಲಬ್‌ನ ಗೌರವ ಸದಸ್ಯರಾದ ಡಾ | ಡಿ . ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ, ಧರ್ಮಸ್ಥಳ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ | ಬಿ ಯಶೋವರ್ಮರವರ ಸಹಕಾರದೊಂದಿಗೆ ಹಾಗೂ ಪೂರ್ವಾಧ್ಯಕ್ಷರುಗಳು, ಕಾರ್ಯದರ್ಶಿಗಳು ಹಾಗೂ ಸದಸ್ಯರ ಸೇರುವಿಕೆಯೊಂದಿಗೆ ಹಲವು ಸೇವಾ ಕಾರ್ಯಕ್ರಮಗಳನ್ನು ಸಂಘಟಿಸುತ್ತಾ ಮನೆಮಾತಾಗಿದೆ.
"ಪ್ಲಾಟಿನಂ ಪ್ಲಸ್" ಬಿರುದಿಗೆ ಅರ್ಹವಾಗಿ ಸಲ್ಲಿಸಿದ ಸೇವಾ ವರದಿ ಇಲ್ಲಿದೆ ನೋಡಿ;
ಕ್ಲಬ್ ಸೇವೆ:
ರೋಟರಿ ಕ್ಲಬ್ ಸದಸ್ಯರ ಅನುಕೂಲಕ್ಕಾಗಿ ಕೋವಿಡ್ 19 ರ ಲಾಕ್ ಡೌನ್ ಸಂದರ್ಭಗಳಲ್ಲಿ ಆನ್ ಲೈನ್ ಸಭೆಗಳನ್ನೂ , ಉಳಿದ ಸಂದರ್ಭಗಳಲ್ಲಿ ಅರಳಿ ರಸ್ತೆಯಲ್ಲಿರುವ ರೋಟರಿ ಸಭಾ ಭವನದಲ್ಲಿ ವಾರದ ಸಭೆಗಳನ್ನು ನಡೆಸಲಾಗಿದ್ದು , ಹೆಚ್ಚಿನ ಸಭೆಗಳಲ್ಲಿ ವಿಶೇಷ ತಜ್ಞರುಗಳಿಂದ ಉಪನ್ಯಾಸಗಳನ್ನು , ರೋಟರಿ ಮಾಹಿತಿಗಳನ್ನು , ವಾರದ ಚಿಂತನೆಗಳನ್ನು ಹಂಚಿಕೊಳ್ಳಲಾಗಿದೆ.
ರೋಟರಿ ಕುಟುಂಬಕ್ಕಾಗಿ ಪಿಕ್ನಿಕ್‌ಗಳನ್ನು , ಕುಟುಂಬ ಸಮ್ಮಿಲಗಳನ್ನು ಆಯೋಜಿಸಿರುತ್ತದೆ.
ವೃತ್ತಿ ಪರ ಸೇವೆ ವಿಭಾಗದಲ್ಲಿ ತಾಲೂಕಿನಲ್ಲಿರುವ ನ್ಯಾಯವಾದಿಗಳು , ವೈದ್ಯರುಗಳು , ಇಂಜಿನಿಯರ್‌ಗಳು , ಅಧ್ಯಾಪಕರುಗಳು , ಕೃಷಿಕರುಗಳು , ಪೋಸ್ಟ್‌ಮ್ಯಾನ್‌ಗಳು , ನರ್ಸ್‌ಗಳು ಹೀಗೆ ಎಲ್ಲಾ ರಂಗಗಳಲ್ಲೂ , ಶ್ರೇಷ್ಠತೆಯನ್ನು ಪಡೆದಂತಹ ಸಾಧಕರನ್ನು ಗುರುತಿಸಿ ಗೌರವಿಸಿರುತ್ತದೆ.
ಸಮುದಾಯ ಸೇವೆಯಲ್ಲಿ
ಕೋವಿಡ್ 19 ರ ಒಂದನೇ ಅಲೆಯಿಂದ ಬೆಳ್ತಂಗಡಿ ತಾಲೂಕಿನಾದ್ಯಂತ ಕಂಗಲಾಗಿದ್ದ ಜನತೆಗೆ ಆಹಾರ ಕಿಟ್ ಕೋವಿಡ್ ಸೋಂಕನ್ನು ಎದುರಿಸಲು ಬೇಕಾದ ಸ್ಯಾನಿಟೈಸರ್ ಸ್ಟಾಂಡ್‌ಗಳನ್ನು , ಸ್ಯಾನಿಟೈಸರ್‌ಗಳನ್ನು , ಮೂರು ಸಾವಿರಕ್ಕೂ ಅಧಿಕ ಮಾಸ್ಕ್ ಗಳನ್ನು , ನೂರಾರು ಪಿ.ಪಿ.ಇ. ಕಿಟ್‌ಗಳನ್ನು ವಿತರಿಸಿ ಜನತೆಗೆ ಧೈರ್ಯವನ್ನು ತುಂಬಿರುತ್ತದೆ . ಕೋವಿಡ್ 19 ರ ಎರಡನೆ ಅಲೆಯಿಂದ ತತ್ತರಿಸಿದ್ದ ಆರೋಗ್ಯ ಇಲಾಖೆಗೆ ಲಕ್ಷಾಂತರ ಮೌಲ್ಯದ ಔಷಧಗಳನ್ನು , ಪರಿಕರಗಳನ್ನು ವಿತರಿಸಿರುತ್ತದೆ. ಅಗತ್ಯವಿರುವ ರೋಗಿಗಳಿಗೆ 50 ಕ್ಕೂ ಹೆಚ್ಚಿನ ಇಂಜೆಕ್ಷನ್ನುಗಳನ್ನು ವ್ಯವಸ್ಥೆ ಮಾಡಿದೆ. ಕೋವಿಡ್ ಸೇನಾನಿಗಳ ಮತ್ತು ಜನತೆಯ ತ್ವರಿತ ಸೇವೆಗೆ ಅನುಕೂಲವಾಗುವಂತೆ ಬದುಕು ಕಟ್ಟೋಣ ಬನ್ನಿ ತಂಡದೊಂದಿಗೆ ಆಪ್ತರಕ್ಷಕ ಸೇವೆಯನ್ನು ಜಾರಿಗೆ ತಂದು ರಾಜ್ಯಕ್ಕೆ ಮಾದರಿಯಾಗುವಂತೆ ಸೇವೆಯನ್ನು ನೀಡಿರುತ್ತದೆ.
ಜಲ ಸಂವರ್ಧನೆ ಕಾರ್ಯಕ್ರಮದಡಿ
ನೀರು ಪೋಲಾಗದಂತೆ ತಡೆಯಲು ಎಸ್.ಡಿ.ಎಂ , ರೋಟರಿ ಜಲರಕ್ಷಕ , ಮಳೆ ನೀರಿನ ಕೊಯ್ಲು ಮಾಡಲು ನೀರಿನ ಜೀವಾಧಾರ , ಅಂತರ್ಜಲವನ್ನು ಹೆಚ್ಚಿಸುವ ದೃಷ್ಟಿಯಿಂದ ಕಟ್ಟ ಕಟ್ಟೋಣ ಬನ್ನಿ, ನೀರನ್ನು ಉಳಿತಾಯ ಮಾಡುವ ದೃಷ್ಟಿಯಿಂದ ಭತ್ತದ ಕೃಷಿಯನ್ನು ಉತ್ತೇಜಿಸುವ ವಾಟರ್ ಬ್ಯಾಂಕ್ ಅನ್ನುವ ಅತ್ಯಂತ ಜನಪ್ರಿಯವಾದ ಕಾರ್ಯಕ್ರಮಗಳನ್ನು ಜಾರಿ ಮಾಡಿತ್ತು.
ಸಹಾಯ ಸೇವೆಯಡಿ
ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ , ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಆರ್ಥಿಕ ಸಹಾಯ , ಹಿರಿಯ ನಾಗರಿಕರಿಗೆ ಅಗತ್ಯ ನೆರವುಗಳನ್ನು ನೀಡಿರುತ್ತದೆ .ಹಲವಾರು ರೋಗಿಗಳಿಗೆ ಅವರ ಅಗತ್ಯತೆಯ ಅನುಸಾರ ಸೂಕ್ತ ಪರಿಕರಗಳನ್ನು ವಿತರಿಸಿರುತ್ತದೆ. 150 ಕ್ಕಿಂತಲೂ ಹೆಚ್ಚು ಜನರಿಗೆ ತುರ್ತು ಸಂದರ್ಭಗಳಲ್ಲಿ ರಕ್ತದ ವ್ಯವಸ್ಥೆಯನ್ನು ಮಾಡಿರುತ್ತದೆ.
ಅಂತರಾಷ್ಟ್ರೀಯ ಸೇವಾ ಯೋಜನೆಯಡಿ ಸದಸ್ಯ ಉದಯಚಂದ್ರ ಹಾಗೂ ಮನೋರಮ ಭಟ್ ರವರು, ಲಾಕ್‌ಡೌನ್ ಸಂದರ್ಭದಲ್ಲಿ ಬರ್ಮಾ ದೇಶದ ವಿದ್ಯಾರ್ಥಿನಿಯೊಬ್ಬಳು ಮನೆಗೆ ಹೋಗಲಾರದೆ ಸಿಲುಕೊಂಡಂತಹ ಸಂದರ್ಭದಲ್ಲಿ ತಮ್ಮ ಮನೆಯಲ್ಲಿ ಆಶ್ರಯ ನೀಡಿ ಸುರಕ್ಷಿತವಾಗಿ ಅವರನ್ನು ಸ್ವದೇಶಕ್ಕೆ ತೆರಳುವಂತೆ ಮಾಡಿರುವುದು ನಮ್ಮ ಹೆಮ್ಮೆಯ ಸೇವೆಗಳಲ್ಲಿ ಒಂದು.
ಜಪಾನ್ ದೇಶದ ಸಂಸ್ಥೆಯೊಂದಕ್ಕೆ ರಾಷ್ಟ್ರದ ಹೆಮ್ಮೆಯ ಆಯುರ್ವೇದದ ಪರಿಚಯವನ್ನು ಮನೋರಮಾ ಭಟ್‌ರವರು ಆನ್ಸ್ ಕ್ಲಬ್ ಮೂಲಕ, ಡಾ | ಭಾರತಿ.ಜಿ.ಕೆ ರವರ ನೇತೃತ್ವದಲ್ಲಿ ಮಾಡಿರುತ್ತಾರೆ.
ರೋಟರಿ ಪೋಲಿಯೋ ಮಿಶನ್‌ನಡಿಯಲ್ಲಿ , ಪೋಲಿಯೋ ನಿರ್ಮೂಲನೆಗಾಗಿ ಆಟೋ ರಿಕ್ಷಾ ಮಾಲಕ ಚಾಲಕರೊಂದಿಗೆ ಸೇರಿ ಪೋಲಿಯೋ ಜಾಗೃತಿ ಅಭಿಯಾನವನ್ನು ಕೈಗೊಂಡಿರುತ್ತಾರೆ. ಅಲ್ಲದೆ ರೋಟರಿ ಪೋಲಿಯೋ ಫಂಡ್‌ಗೆ ದೇಣಿಗೆಯನ್ನೂ ನೀಡಿರುತ್ತಾರೆ.
ರೋಟರಿ ಜಿಲ್ಲಾ ಯೋಜನೆ ಏಕ್‌ಚಮಚ್ ಕಮ್ ಚಾರ್ ಕದಮ್ ಆಗೆ Project positive health ಯೋಜನೆಯಡಿಯಲ್ಲಿ ನ್ಯಾಚ್ಯುರೋಪತಿ ಕಾಲೇಜಿನ ಸಹಯೋಗದೊಂದಿಗೆ , ಕೇಂದ್ರ ಸರಕಾರದ ಅನುದಾನನ ಅಡಿಯಲ್ಲಿ ಒಬ್ಬ ವ್ಯಕ್ತಿಗೆ ಉಚಿತವಾಗಿ 20 ದಿನಗಳ ಕಾಲ ರಕ್ತದೊತ್ತಡ , ಮಧುಮೇಹ , ಸ್ಥೂಲ ಕಾಯ ಇವುಗಳಿಗೆ ಪ್ರಕೃತಿ ಚಿಕಿತ್ಸಾಲಯದಲ್ಲಿ ಕೊಡುವ ಚಿಕಿತ್ಸಾ ಯೋಜನೆಯೊಂದಿಗೆ ರೋಟರಿ ಕೈ ಜೋಡಿಸಿರುತ್ತದೆ.
ಇದರ ಪರಿಣಾಮವಾಗಿ ದೇಶದಾದ್ಯಂತ ಜನರು ಇದರ ಸದುಪಯೋಗವನ್ನು ಪಡೆದು ಕೊಳ್ಳುವಂತಾಗಿತ್ತು. ಮಧುಮೇಹ , ರಕ್ತದೊತ್ತಡ , ಕ್ಯಾನ್ಸರ್ , ಪಾರ್ಶ್ವವಾಯು ಇವುಗಳಿಂದ ಬಳಲುತ್ತಿರುವ ಅಶಕ್ತರಿಗೆ ಆರ್ಥಿಕ ಸಹಾಯವನ್ನು ಮಾಡಿದಲ್ಲದೆ ಅವರಿಗೆ ಚಿಕಿತ್ಸೆಗಾಗಿ ಬೇಕಿದ್ದಂತಹ ಉಪಕರಣಗಳನ್ನು ಒದಗಿಸಿರುತ್ತದೆ.
ರೋಟರಿ ಜಿಲ್ಲಾ ಯೋಜನೆಯಡಿಯಲ್ಲಿ ಒಂದೇ ದಿನ ಬೆಳ್ತಂಗಡಿ ತಾಲೂಕಿನಾದ್ಯಂತ ಇರುವ ಹಾಲು ಉತ್ಪಾದಕರ ಸಹಕಾರಿ ಸಂಘದ ಸದಸ್ಯರಿಗೆ 4000 ಕ್ಕಿಂತಲೂ ಹೆಚ್ಚಿನ ಗಿಡಗಳನ್ನು , 6000 ಕ್ಕಿಂತಲೂ ಹೆಚ್ಚು ತರಕಾರಿ ಗಿಡಗಳನ್ನು ರೋಟರಿ ಸದಸ್ಯರ , ಆರ್.ಸಿ.ಸಿ. ಸದಸ್ಯರ ಸಹಕಾರದೊಂದಿಗೆ ವಿತರಣೆ ಮಾಡಲಾಗಿರುತ್ತದೆ. ಪ್ರಕೃತಿಯೊಂದಿಗೆ ನಮ್ಮ ನಡಿಗೆ ಎನ್ನುವ ಕಲ್ಪನೆಯೊಂದಿಗೆ ರೋಟರಿ ಕುಟುಂಬದ ಸದಸ್ಯರೊಡನೆ ಚಾರ್ಮಾಡಿ ಘಾಟಿಯ ದಾರಿಯುದ್ದಕ್ಕೂ ಇರುವ ಕಾಡಿನಲ್ಲಿ 3000 ಮಹೋಗನಿ ಗಿಡಗಳನ್ನು , 1000 ಹಲಸಿನ ಬೀಜಗಳನ್ನು , ಸಾವಿರಾರು ಕೋಕೋ ಬೀಜಗಳನ್ನು ಎಸೆದು ಗಿಡ ಹುಟ್ಟಲು ಪ್ರೇರಣೆಯಾಗುವ ಹೊಸ ಪರಿಕಲ್ಪನೆಗೆ ಭಾಷ್ಯ ಬರೆಯಲಾಗಿದೆ. ತೋಟಗಾರಿಕಾ ಇಲಾಖೆ ಹಾಗೂ ಇತರ ಸಂಸ್ಥೆಗಳ ಸಹಭಾಗಿತ್ವದಲ್ಲಿ 20,000 ತರಕಾರಿ ಗಿಡಗಳನ್ನು ಅರ್ಹ ಕೃಷಿಕರಿಗೆ ವಿತರಿಸಿರುತ್ತದೆ.
ರೋಟರಿ ಜಿಲ್ಲಾ ಯೋಜನೆ "ಹ್ಯಾಪಿ ಸ್ಕೂಲ್" ನಡಿಯಲ್ಲಿ ರೋಟರಿ ಇಂದಿರಾ ನಗರ ಬೆಂಗಳೂರು ಇದರ ಸದಸ್ಯ ಜಗದೀಶ್ ಮುಗುಳಿ ಇವರ ಸಹಯೋಗದಲ್ಲಿ ಬೆಳ್ತಂಗಡಿ ಜ್ಯೂನಿಯರ್ ಕಾಲೇಜಿನಲ್ಲಿ ಮೂರು ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ಒಂದು ಕಟ್ಟಡವನ್ನು ಸಂಪೂರ್ಣ ನವೀಕರಣಗೊಳಿಸಿ , ಲೋಕಾರ್ಪಣೆ ಮಾಡಿರುತ್ತದೆ . ದಾನಿಗಳ ಸಹಕಾರದೊಂದಿಗೆ ರೂ .50.000 / - ಕ್ಕಿಂತಲೂ ಹೆಚ್ಚಿನ ಮೌಲ್ಯದ ಲ್ಯಾಬ್ ಪರಿಕರಗಳನ್ನು ವಿತರಿಸಿರುತ್ತದೆ.
ಕಲ್ಕಂಜ , ಕೊಕ್ರಾಡಿ ಶಾಲೆಗಳಿಗೆ ಶ್ರೀಧರ ಪಡುವೆಟ್ನಾಯ ಅವರ ಸಹಕಾರದೊಂದಿಗೆ ರೂ .50,000 / - ಕ್ಕಿಂತಲೂ ಹೆಚ್ಚಿನ ವಸ್ತುಗಳನ್ನು ನೀಡಿದೆ . ದಾನಿಗಳ ಸಹಕಾರದೊಂದಿಗೆ ಬಂಗಾಡಿಯ ಕಿರಿಯ ಪ್ರಾಥಮಿಕ ಶಾಲೆಗೆ ರೂ .60,000 / - ಮೌಲ್ಯದ ಪಿಠೋಪಕರಣಗಳನ್ನು ವಿತರಿಸಿದೆ. ವಿನ್ಸ್ ಯೋಜನೆಯಡಿಯಲ್ಲಿ ಪೂರಣ್ ವರ್ಮ ರವರ ಸಹಯೋಗದಲ್ಲಿ ತಾಲೂಕಿನ 50 ಸರಕಾರಿ ಶಾಲೆಗಳಿಗೆ ಉಚಿತವಾಗಿ ಹ್ಯಾಂಡ್‌ವಾಶ್ ನೀಡಿರುತ್ತದೆ. ಕೈಗಳ ಸ್ವಚ್ಛತೆಯ ಜಾಗೃತಿಗಾಗಿ ವಿಡಿಯೋವೊಂದನ್ನು ಮಾಡಿ ಮಕ್ಕಳಿಗೆ ಹಂಚಿರುತ್ತದೆ.
ರೋಟರಿ ಜಿಲ್ಲಾ ಯೋಜನೆ ಸಂಜೀವಿನಿಯಡಿ ಟ್ರಾಫಿಕ್ ಪೊಲೀಸರಿಗೆ , ಮನೆಯಲ್ಲಿರುವ ಆನ್ಸ್‌ಗಳಿಗೆ , ಆಶಾ ಕಾರ್ಯಕರ್ತೆಯರಿಗೆ ಪ್ರಥಮ ಚಿಕಿತ್ಸೆಯ ಬಗ್ಗೆ ತರಬೇತಿ ಶಿಬಿರಗಳನ್ನು ಬೆನಕಾ ಆಸ್ಪತ್ರೆಯ ಸಹಯೋಗದೊಂದಿಗೆ ಮಾಡಿರುತ್ತದೆ.
ರೋಟರಿ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ರೋಟರಿ ಕನಸಿನ ಮನೆ ' ರೋಟರಿ ಸೇವಾ ಭವನ ' ದ ನಿರ್ಮಾಣ ರೋಟರಿ ಸೇವಾ ಟ್ರಸ್ಟ್‌ನ ಅಧ್ಯಕ್ಷ ರಮಾನಂದ ಸಾಲ್ಯಾನ್ ರವರಿಂದ ಪ್ರಾರಂಭಗೊಂಡು ಅವರ ಅಕಾಲಿಕ ಮರಣದಿಂದ ತೆರವಾದ ಈ ಸ್ಥಾನವನ್ನು ಸಮರ್ಥವಾಗಿ ತುಂಬಿದ ನಿವೃತ್ತ ಮೇಜರ್ ಜನರಲ್ ಎಂ.ವಿ.ಭಟ್ ರವರ ನೇತೃತ್ವದಲ್ಲಿ ಎಲ್ಲಾ ಸದಸ್ಯರ ಸಹಕಾರದೊಂದಿಗೆ ರೂ .1.50 ಕೋಟಿ ವೆಚ್ಚದಲ್ಲಿ ಪೂರೈಸಲಾಗಿ, ಕಟ್ಟಡದ ಲೋಕಾರ್ಪಣೆಯನ್ನು ಡಾ | ಡಿ.ವೀರೇಂದ್ರ ಹೆಗ್ಗಡೆಯವರಿಂದಲೇ ಮಾಡಿಸಿರುತ್ತದೆ.
ರಮಾನಂದ ಸಾಲ್ಯಾನ್ ಅವರು ಕಂಡಿದ್ದ ರೋಟರಿ ಸೇವಾ ಭವನದ ಕನಸನ್ನು ನನಸಾಗಿಸುವಲ್ಲಿ ಅವರ ಕುಟುಂಬದ ಸದಸ್ಯರಾದ ರಾಗ್ನೇಶ್, ರಕ್ಷಾ ರಾಗ್ನೇಶ್ , ರೇಣು ರಾಜೇಶ್ ಹಾಗೂ ರಾಜೇಶ್ ರವರು ಕೊಡುಗೆ ನೀಡಿರುತ್ತಾರೆ.
ರೋಟರಿಯ ಈ ಚೈತ್ರ ಯಾತ್ರೆಯಲ್ಲಿ ರೋಟರಿ ಮಾತ್ರವಲ್ಲದೆ , ಆ್ಯನ್ಸ್ , ಆರ್.ಸಿ.ಸಿ. , ಇಂಟರಾಕ್ಟ್ , ರೋಟರಾಕ್ಟ್ ಸದಸ್ಯರು ಅವಿರತವಾಗಿ ಶ್ರಮಸಿದ್ದು ಮಾದರಿಯಾಗಿತ್ತು.