Posts

ಪಿ.‌ ಡೀಕಯ್ಯ ಸಾವಿಗೆ ತಲೆಗೆ ಅಗಿರುವ ಬಲವಾದ ಪೆಟ್ಟೇ ಕಾರಣ!? || ಮರಣೋತ್ತರ ಪರೀಕ್ಷೆ ಆರಂಭಿಕ ವರದಿಯಲ್ಲಿ ಉಲ್ಲೇಖ|| ಎಫ್‌ಎಸ್‌ಎಲ್ ವರದಿ ಬಳಿಕ ಇನ್ನಷ್ಟು ಮಾಹಿತಿ ಲಭಿಸುವ ಭರವಸೆ

3 min read

ಬೆಳ್ತಂಗಡಿ; ವಿವಿಧ ಆಯಾಮಗಳಿಂದ ನಾವೆಲ್ಲಾ ಸಂದೇಹ ಪಟ್ಟಿರುವಂತೆಯೇ ಸಮಾಜ ಪರಿವರ್ತನಾ ಚಳವಳಿಯ ನಾಯಕ ಪಿ ಡೀಕಯ್ಯ ಅವರು ಸಾವು ಸಹಜವಾದ ಸಾವಲ್ಲ. ಅದು ಅವರ ತಲೆಯ ಮೇಲದ ಬಲವಾದ ಗಾಯವೇ ಕಾರಣ ಎಂದು ಮರಣೋತ್ತರ ಪರೀಕ್ಷೆಯ ಆರಂಭಿಕ ಮಾಹಿತಿಯಂತೆ ತಿಳಿದುಬಂದಿದ್ದು, ಎಫ್‌ಎಸ್‌ಎಲ್ ವರದಿ ಬಂದ ಬಳಿಕ ಇದು ಮತ್ತಷ್ಟು ಖಚಿತಗೊಳ್ಳಲಿದೆ. ಆದ್ದರಿಂದ ಸಹಜವಲ್ಲದ ಈ ಮರಣದ ಹಿಂದೆ ಇರುವ ಕಾಣದ ಕೈಗಳನ್ನು ಪೊಲೀಸರು ನಿಷ್ಪಕ್ಷಪಾತ ತನಿಖೆಯ ಮೂಲಕ ಬಹಿರಂಗಪಡಿಸಿ ಅಪರಾಧಿಗಳನ್ನು ಶಿಕ್ಷೆಗೆ ಗುರಿಪಡಿಸಬೇಕು. ಅದುವರೆಗೆ ಅವರ ಪತ್ನಿ,‌ ತುಳು ಸಾಹಿತಿ ಅತ್ರಾಡಿ ಅಮೃತಾ ಶೆಟ್ಟಿ ಅವರಿಗೆ ಪೊಲೀಸ್ ಭದ್ರತೆ ಒದಗಿಸಬೇಕು ಎಂದು ಸಮತಾ ಸೈನಿಕ‌ ದಳದ ರಾಜ್ಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಡೀಕಯ್ಯ ಅವರ ಸಂಬಂಧಿ ಲೋಲಾಕ್ಷ ಆಗಹಿಸಿದ್ದಾರೆ.

ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ಆ.10 ರಂದು ರಾಜ್ಯದ ಪ್ರಮುಖ ದಲಿತ ಸಂಘಟನೆಗಳ ಒಗ್ಗೂಡುವಿಕೆಯೊಂದಿಗೆ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ರೀತಿ ಒತ್ತಾಯಿಸಿದ್ದಾರೆ.

ಇದೇ ಸಂದರ್ಭದಲ್ಲಿ ಪಿ ಡೀಕಯ್ಯ ಸಾವಿನ ಸಂದೇಹ ವ್ಯಕ್ತಪಡಿಸಿ ಅವರು ಕುಟುಂಬಿಕರು ಬೆಳ್ತಂಗಡಿ ಠಾಣಾಧಿಕಾರಿಗೆ ನೀಡಿರುವ ದೂರಿನ ಪ್ರತಿ ಮತ್ತು ಜಿಲ್ಲೆಯ‌ ಜನಪರ ಸಂಘಟನೆಗಳ ವತಿಯಿಂದ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ನೀಡಲಾದ ಮನವಿ ಪತ್ರವನ್ನು ಲೋಲಾಕ್ಷ ಅವರು ಮಾದ್ಯಮಗಳಿಗೆ ಬಿಡುಗಡೆಗೊಳಿಸಿದರು.

ಕುಟುಂಬಿಕರ ದೂರಿನಲ್ಲಿ ಡೀಕಯ್ಯ ಪತ್ನಿ ವಿಚಾರ ಉಲ್ಲೇಖ:

ಡೀಕಯ್ಯ ಅವರ ಸಾವು ಸಹಜವಲ್ಲ ಎಂದು ಅವರ ಅಂತ್ಯ ಕ್ರಿಯೆ ಆದ ಎರಡು ದಿನದಲ್ಲಿ ಕುಟುಂಬಿಕರೆಲ್ಲ ಸೇರಿ ಚರ್ಚೆ ಮಾಡಿ ಪೊಲೀಸ್ ದೂರು ನೀಡುವ ತೀರ್ಮಾನಕ್ಕೆ ಬಂದಿದ್ದಾಗ ಡೀಕಯ್ಯ ಅವರ ಪತ್ನಿ ಅಮೃತಾ ಶೆಟ್ಟಿ ಅವರು ಅದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ವಿಚಾರವನ್ನು ಕುಟುಂಬಿಕರ ದೂರಿನಲ್ಲಿ ಮತ್ತೊಮ್ಮೆ ಉಲ್ಲೇಖಿಸಲಾಗಿದೆ. ಪತಿಯ ಸಾವಿನ ಬಗ್ಗೆ ದಯವಿಟ್ಟು ಪೊಲೀಸರಿಗೆ ದೂರು ನೀಡಬೇಡಿ. ನಿಮ್ಮೆಲ್ಲರ ಕಾಲು ಹಿಡಿಯುತ್ತೇನೆ ಎಂದು ಹೇಳಿ ನೆಲದಲ್ಲಿ ಎಲ್ಲರ ಕಾಲಿಗೆ ನಮಸ್ಕಾರ ಮಾಡಿ ಕಿರುಚಾಡಿದರು. ನಾವು ಎಷ್ಟು ಸಮಾಧಾನ ಮಾಡಿದರೂ ಕೇಳದ ಅಮೃತಾ ಅವರು, ನೀವು ಪೊಲೀಸರಿಗೆ ದೂರು ನೀಡಿದರೆ 14 ನಿಮಿಷದಲ್ಲೇ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ಅದಕ್ಕೆ ಬೇಕಾದ ಎಲ್ಲವನ್ನೂ ತಿಳಿದುಕೊಂಡಿದ್ದೇನೆ ಎಂದು ಮತ್ತೆ ಜೋರಾಗಿ ಕಿರುಚಾಡಿಕೊಂಡಿದ್ದಾರೆ. ಅಮೃತಾ ಅವರ ಈ ಅನಪೇಕ್ಷಿತ ನಡವಳಿಕೆಯಿಂದ ನಮ್ಮ ಇಡೀ ಕುಟುಂಬವೇ ಕಂಗಾಲಾಗಿದೆ ಆತಂಕಗೊಂಡಿದೆ ಎಂದು ದೂರಿನಲ್ಲಿ‌ವಿವರಿಸಲಾಗಿದೆ.

ಅಂಗಾಂಗ ದಾನದ ಬಗ್ಗೆಯೂ ಸಂದೇಹ:

ಆರಂಭದಲ್ಲಿ ಕುಟುಂಬಿಕರಾದ ನಮಗೆಲ್ಲಾ ಪಿ‌ ಡೀಕಯ್ಯ ಅವರಿಗೆ ಮರದುಳಿನ ರಕ್ತಸ್ರಾವ ವಾಗಿದ್ದು ಅವರ‌ ಮೆದುಳು ನಿಷ್ಕ್ರಿಯ ವಾಗಿದೆ ಎಂದು ಮಾಹಿತಿ‌ ನೀಡಲಾಗಿತ್ತು. ನಾನು ಮಣಿಪಾಲ ಆಸ್ಪತ್ರೆಗೆ ಧಾವಿಸಿದ್ದರೂ ತೀವ್ರ ನಿಗಾ ಘಟಕದಲ್ಲಿದ್ದ ಅವರನ್ನು ಆಗಾಗ ಭೇಟಿ ಮಾಡಲು ಅವಕಾಶವಿರಲಿಲ್ಲ. ಅವರ ನಾದಿನಿ ಅಲ್ಲಿನ ಸಿಬ್ಬಂದಿಯಾಗಿದ್ದುದರಿಂದ ಅವರು ಮಾಹಿತಿ ನೀಡುತ್ತಿದ್ದರು‌. ಒಂದು ಬಾರಿ ನಾನು ಡೀಕಯ್ಯ ಅವರನ್ನು ಕಂಡಿದ್ದು, ಈ ವೇಳೆ ಅವರ ತಲೆಯ ಹಿಂಭಾಗಕ್ಕೆ ಬಲವಾದ ಪೆಟ್ಟು‌ಬಿದ್ದು ಕುತ್ತಿಗೆ ಬಲಹೀನಗೊಂಡಿದ್ದುದರ‌ ಬಗ್ಗೆ ನಮಗೆ ಸಂದೇಹ ಬಂದು ವೈದ್ಯಾಧಿಕಾರಿ ಬಳಿ ಪ್ರಶ್ನಿಸಿದಾಗ ಅವರು ನಮ್ಮ‌ ಜೊತೆ ಆಕ್ರೋಶಭರಿತರಾಗಿ ಪ್ರತಿಕ್ರಿಯಿಸಿದ್ದು ಇದೀಗ ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಮಧ್ಯೆ ಡೀಕಯ್ಯ ಅವರ ಕಣ್ಣುಗಳು, ಚರ್ಮ, ಹೃದಯ ಇವುಗಳನ್ನು ದಾನ ಮಾಡಲಾಗಿದೆ ಎಂದು ಹೇಳಲಾಗಿದ್ದರೂ, ಮರಣೋತ್ತರ ಪರೀಕ್ಷೆಗಾಗಿ ಮತ್ತೆ ಅವರ ದೇಹ ಮೇಲೆತ್ತಲಾದ ಸಂದರ್ಭದಲ್ಲಿ ಕಣ್ಣು ದಾನ ಹೊರತುಪಡಿಸಿ ಬೇರೆ ಯಾವುದೇ ಅಂಗಾಂಗ ದಾನ ಮಾಡಲಾಗಿಲ್ಲ ಎಂದು ಸ್ಪಷ್ಟವಾಗಿದೆ. ಆದ್ದರಿಂದ ಇದೆಲ್ಲ ಸಂದೇಹಕ್ಕೆ ಮತ್ತೆ ಮತ್ತೆ ಎಡೆಮಾಡಿಕೊಟ್ಟಿದೆ ಎಂದು ಲೋಲಾಕ್ಷ ವಿವರಿಸಿದರು.

ಅವರ ಮೃತದೇಹ ಬೆಳ್ತಂಗಡಿ ಗೆ ತರಲಾದ ಸಂದರ್ಭದಲ್ಲಿ ಅವರ ಅಭಿಮಾನಿಗಳ ವೀಕ್ಷಣೆಗಾಗಿ ದೇಹವನ್ನು ಪೂರ್ಣ ಪ್ರಮಾಣದಲ್ಲಿ ಭದ್ರಪಡಿಸಿ ಆಸ್ಪತ್ರೆಯವರು ನಮಗೆ ಹಸ್ತಾಂತರಿಸಿದ್ದರು. ಚರ್ಮ ಸಹಿತ ಇತರ ಭಾಗಗಳನ್ನು ದಾನ ನಾಡಿದ್ದರಿಂದಾಗಿ ಪಾರ್ಥಿವ ಶರೀರ ಮನೆಗೆ ತಂದಾಗ ಮೃತದೇಹಕ್ಕೆ ಪೂರ್ಣ ಶವಸ್ನಾನ ಕಾರ್ಯಮಾಡದೆ ಕಾಲು ಮತ್ತು ಬಾಯಿಗೆ ಮಾತ್ರ ನೀರು ಬಿಡುವ ಕಾರ್ಯಮಾಡಲಾಗಿತ್ತು.  ಆದರೆ ಪೋಸ್ಟ್‌ ಮಾರ್ಟಂ ಗಾಗಿ ಮತ್ತೆ ಶವ ಮೇಲೆತ್ತಲಾಗಿದ್ದಾಗ ದೇಹದ ಎಲ್ಲಾ ವಸ್ರ್ತಗಳು ಮತ್ತು ಎರಡೂ ಕಾಲಿಗೆ ಹಾಕಲಾಗಿದ್ದ ಬ್ಯಾಂಡೇಜ್ ಅನ್ನು ಕಳಚಿದಾಗ ಅಲ್ಲಿ ಚರ್ಮದಾನ ಅಥವಾ ಹೃದಯ ದಾನ ಕೈಗೊಂಡಿರುವುದು ಗೋಚರವಾಗಿರುವುದಿಲ್ಲ. ಈ ವೇಳೆ ಇದರ ಪೂರ್ಣ ದೃಶ್ಯಾವಳಿಗೆ ಅವರ ಸಂಬಂಧಿಯೊಬ್ಬರು ಸಾಕ್ಷಿಯಾಗಿದ್ದಾರೆ. ಈ ಬಗ್ಗೆ ಎಫ್‌ಎಸ್‌ಎಲ್ ರಿಪೋರ್ಟ್ ಬರುವ ವೇಳೆ ಸಂಪೂರ್ಣ ಮಾಹಿತಿ ಹೊರಬೀಳಲಿದೆ ಎಂದರು. 

ವಿಚಾರಣೆಗೆ ನಡೆದ ದಿನವೇ ಅಮೃತ ಅವರ ತಂದೆ ನಿಧನ

ಘಟನೆಗೆ ಸಂಬಂಧಪಟ್ಟಂತೆ ವಿಚಾರಣೆ ಮತ್ತು ಮಾಹಿತಿ ಸಂಗ್ರಹಕ್ಕಾಗಿ ಅಮೃತಾ ಶೆಟ್ಟಿ ಅವರ ತಂದೆಯನ್ನು ಪೊಲೀಸರು ವಿಚಾರಿಸಿದ್ದು ಅದೇ ದಿನ ಅಂದರೆ ಜು.27 ರಂದು ಅವರ ತಂದೆಯವರು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿಯನ್ನೂ ಲೋಲಾಕ್ಷ ಮಾಧ್ಯಮಕ್ಕೆ ನೀಡಿದ್ದಾರೆ.

ಒಟ್ಟಾರೆಯಾಗಿ ಡೀಕಯ್ಯ ಅವರ‌ ಸಾವಿನ ಬಗ್ಗೆ ಹಾಗೂ ಮಣಿಪಾಲದ ಖಾಸಗಿ ಆಸ್ಪತ್ರೆ, ಸಂಬಂಧಪಟ್ಟ ವೈದ್ಯರ ಕಾನೂನು ವಿರೋಧಿ ನಡವಳಿಕೆ ಬಗ್ಗೆ ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಿ ಅಪರಾಧಿಗಳನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಆ ಮೂಲಕ ಅವರ ಸಾವಿಗೆ ನ್ಯಾಯ ಒದಗಿಸಬೇಕು. ಜಿಲ್ಲೆಯ ಶೋಷಿತ ಸಮುದಾಯಗಳ ಪರವಾಗಿ ಆಗ್ರಹಪೂರ್ವಕವಾಗಿ ಕೋರುತ್ತೇವೆ ಎಂದು ಮನವಿ ಪತ್ರದಲ್ಲಿ ಕೇಳಿಕೊಳ್ಳಲಾಗಿದೆ. 

ಡೀಕಯ್ಯ ಅವರ ಸಾವು ದರೋಡೆಯ ಉದ್ದೇಶಕ್ಕೆ ಆಗಿರಬಹುದೇ ಅಥವಾ ಸೈದ್ಧಾಂತಿಕ ಭಿನ್ನಮತದ ಕಾರಣಕ್ಕೆ ಆಗಿರಬಹುದೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಲೋಲಾಕ್ಷ ಅವರು, ಒಬ್ಬಂಟಿಯಾಗಿದ್ದ ಅವರನ್ನು ದರೋಡೆಗಾಗಿ ಈ ರೀತಿ ಮಾಡಿಲ್ಲ ಎಂದು ತಿಳಿಯುತ್ತದೆ. ಸೈದ್ದಾಂತಿಕ ಭಿನ್ನಮತದಲ್ಲಿ ಗೌರಿ ಲಂಕೇಶ್ ಹತ್ಯೆ, ಕಲಬುರ್ಗಿ ಹತ್ಯೆಯ ಮಾದರಿಯಲ್ಲಿ ಸಂಚು ರೂಪಿಸಿ ಮಾಡಲಾಗಿದೆಯೇ ಎಂಬ ಬಲವಾದ ಸಂದೇಹವಿದೆ. ಇದನ್ನು ಯಾರೋ ಮಾಡಿಸಿ ಇದೀಗ ಬೆದರಿಕೆಯ ಮೂಲಕ ಇದರ ಸತ್ಯ ಹೊರಬರದಂತೆ ಯಾರಾದರೂ ಶ್ರಮಿಸುತ್ತಿದ್ದಾರೆಯೇ ಎಂಬ ಅನುಮಾನ ಸ್ವತಂ ಚಳವಳಿಹಾರರಾಗಿರುವ  ಸಂಘಟನೆಗಳ ಪ್ರಮುಖರಾದ ನಮಗೆ ಮೂಡುತ್ತದೆ. ಈ‌ ಬಗ್ಗೆ ನಾವು ಶಾಸಕ ಹರೀಶ್ ಪೂಂಜ ಅವರ ಗಮನಸೆಳೆದಿದ್ದು ಅವರು ನ್ಯಾಯದ ಭರವಸೆ ನೀಡಿದ್ದಾರೆ‌. ಮಾಜಿ ಶಾಸಕ ವಸಂತ ಬಂಗೇರ ಅವರನ್ನೂ ನಾವು ಭೇಟಿ ಮಾಡಲಿದ್ದೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪರಿಶಿಷ್ಟ ಜಾತಿ ವರ್ಗಗಳ ಅಧ್ಯಯನ ಮತ್ತು ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಮೋಹನಾಂಗಯ್ಯ ಸ್ವಾಮಿ, ಸಮ ಸಮಾಜದ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ಡೀಕಯ್ಯ ಅವರ ಸಾವು ಬಂಟ್ವಾಳದ ಶಿವಪ್ಪ ಬಂಗೇರ ಅಸಹಜ ಸಾವಿನಂತೆ ಹಳ್ಳಹಿಡಿಯದಿರಲಿ ಎಂದರು.

ಪತ್ರಿಕಾಗೋಷ್ಠಿಯಲ್ಲಿ ದ.ಕ ಜಿಲ್ಲಾ ಬಾಕುಡ ಸಮಾಜದ ಹಿರಿಯ ಮುಖಂಡ, ಡೀಕಯ್ಯ ಅವರ ಸಾವಿನ ತನಿಖೆಗೆ ಆರಂಭಿಕ ದೂರು ನೀಡಿದ ಯನ್ ಪದ್ಮನಾಭ, ಹಿರಿಯ ದಲಿತ ಮುಖಂಡ ಅಣ್ಣು ಸಾಧನಾ ಮತ್ತು ಪೊಡಿಯ, ಎಸ್‌ಸಿ ಎಸ್ಟಿ ಕೈಗಾರಿಕೊದ್ಯಮಿಗಳ ಸಂಘದ ಜಿಲ್ಲಾ ಸಹಕಾರ್ಯದರ್ಶಿ ಶಿವಪ್ಪ ಗೌಡ ಕೆ., ಸುಳ್ಯ ತಾ.ಪಂ ಮಾಜಿ ಅಧ್ಯಕ್ಷ ತನಿಯ ಕಲ್ತಡ್ಕ, ದಲಿತ ಸೇವಾ ಸಮಿತಿ ಪುತ್ತೂರು ಅಧ್ಯಕ್ಷ ಬಿ.ಮಣಿ, ಇವರು ಉಪಸ್ಥಿತರಿದ್ದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment