ಬೆಳ್ತಂಗಡಿ; ಅಸ್ಸಾಂ, ಕೊಡಗು, ಕೇರಳ ಇಲ್ಲಿ ಮಾತ್ರವಲ್ಲದೆ ಎರಡು ವರ್ಷಗಳ ಹಿಂದೆ ನಮ್ಮ ತಾಲೂಕಿನಲ್ಲೂ ಪ್ರಾಕೃತಿಕ ವಿಕೋಪ, ಧರೆ ಉರುಳುವಿಕೆಯಂತಹಾ
ಘಟನೆಗಳು ನಡೆದಿವೆ. ಇದಕ್ಕೆಲ್ಲ ಪ್ರಕೃತಿಯ ಅಸಮತೋಲನವೇ ಕಾರಣ. ಆದ್ದರಿಂದ ಪ್ರಾಕೃತಿಕ ರಕ್ಷಣೆಯ ಹೊಣೆಗಾರಿಕೆ ಹೊತ್ತುಕೊಳ್ಳಬೇಕಾದ ನಾವು ಮಣ್ಣಿನ ಸವಕಳಿ ಬಗ್ಗೆ ನಿಗಾವಹಿಸಿ ಅದರ ರಕ್ಷಣೆಯನ್ನು ಆದ್ಯತೆಯಾಗಿ ಇಟ್ಟುಕೊಳ್ಳಬೇಕಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಕರ್ನಾಟಕ ಅರಣ್ಯ ಇಲಾಖೆ ಮಂಗಳೂರು ಪ್ರಾದೇಶಿಕ ಅರಣ್ಯ ವಿಭಾಗ , ಉಪ್ಪಿನಂಗಡಿ ವಲಯ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ( ರಿ . ) , ಧರ್ಮಸ್ಥಳ, ಜನಜಾಗೃತಿ ಮತ್ತು ಕೃಷಿ ಪ್ರಾದೇಶಿಕ ವಿಭಾಗ ಮತ್ತು ಗ್ರಾಮ ಅರಣ್ಯ ಸಮಿತಿ ಬೆಳಾಲು ಇವುಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಪರಿಸರ ಸಂರಕ್ಷಣೆಯ ಮಹತ್ವಾಕಾಂಕ್ಷೆಯ ಯೋಜನೆಗೆ ಅರಣ್ಯದಲ್ಲಿ ಕಾಡು ಪ್ರಾಣಿಗಳಿಗಾಗಿ ಹಣ್ಣು ಹಂಪಲುಗಳ ಗಿಡಗಳನ್ನು ಬೆಳೆಸುವ ಉದ್ದೇಶದೊಂದಿಗೆ ಜೂ.8 ರಂದು ಬಂದಾರು ಗ್ರಾಮದ ಬೆಳಾಲು ಬೈಪಾಡಿ ದಡಂತಮಲೆ ರಕ್ಷಿತಾರಣ್ಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಬಿತ್ತೋತ್ಸವ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡುತ್ತಿದ್ದರು.
ಇಂದು ನಾವು ಉಪಯೋಗಿಸುತ್ತಿರುವ ಈ ಭೂಮಿ ಇದು ನಮ್ಮ ಮುತ್ತಾತಂದಿರು ನಮಗೆ ಬಿಟ್ಟುಹೋಗಿರುವವು. ಇದನ್ನು ಮುಂದಿನ ನಮ್ಮ ಮೊಮ್ಮಕ್ಕಳಿಗಾಗಿ ಉಳಿಸಬೇಕಾದುದು ನಮ್ಮ ಕರ್ತವ್ಯ. ಈ ವರ್ಷ ಗ್ರಾ.ಯೋ. ಮೂಲಕ 10 ಲಕ್ಷ ಗಿಡಗಳ ನಾಟಿಗೆ ಗುರಿ ಇಟ್ಟು ಕೊಳ್ಳಲಾಗಿದ್ದು 35 ಲಕ್ಷ ರೂ ಮೀಸಲಿಡಲಾಗಿದೆ. ಪರಿಸರ ದಿನದ ಅಂಗವಾಗಿ ರಾಜ್ಯಾದ್ಯಂತ 175 ತಾಲೂಕುಗಳಲ್ಲಿ 875 ಕಾರ್ಯಕ್ರಮಗಳನ್ನು ಆಯೋಜಿಸಿ 1.81 ಲಕ್ಷ ಗಿಡ ನಾಟಿ ಮಾಡಲಾಗಿದೆ. ಇಂದು ಇಲ್ಲಿ 3200 ಗಿಡಗಳನ್ನು ನೆಡಲಾಗುತ್ತಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಹರೀಶ್ ಪೂಂಜ ಮಾತನಾಡಿ, ಪೂಜ್ಯ ಹೆಗ್ಗಡೆಯವರು ಇಂದು ಮಾತನಾಡುತ್ತಾ, ಅರಣ್ಯ ಇಲಾಖೆಯ ಇಂತಹಾ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಸಭೆ ಸಮಾರಂಭ ನಡೆಸದೆ ಹೀಗೆ ಕಾರ್ಯ ಮಾಡೂದಾದರೆ ಅರ್ಧ ದಿನ ಬಂದು ಜೊತೆಗಿರುವುದಾಗಿ ಹೇಳಿರುವುದು ಪ್ರೇರಣೆ ನೀಡುವ ಮಾತು ಎಂದರು.
ಮುಖ್ಯಅತಿಥಿಗಳಾಗಿ ಪ್ರಕಾರ್ ಎಸ್ ಸೆಟಲ್‌ಕರ್ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಗಳೂರು, ಡಾ ವೈ.ಕೆ ದಿನೇಶ್ ಕುಮಾರ್ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಗಳೂರು, ಡಾ |ಎಲ್.ಹೆಚ್ , ಮಂಜುನಾಥ್ ಕಾರ್ಯನಿರ್ವಾಹಕ ನಿರ್ದೇಶಕ ಗ್ರಾ.ಯೋಜನೆ ಬಿ.ಸಿ ಟ್ರಸ್ಟ್ ಭಾಗಿಯಾಗಿದ್ದರು. ನರ್ದೇಶಕ ವಸಂತ ಸಾಲಿಯಾನ್, ಬಂದಾರು ಗ್ರಾ.ಪಂ ಪಿಡಿಒ ಮೋಹನ್ ಬಂಗೇರ, ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ಎ ವೀರು ಶೆಟ್ಟಿ ಉಪಸ್ಥಿತರಿದ್ದರು.
ಗ್ರಾ.ಪಂ ಬಂದಾರು ಅಧ್ಯಕ್ಷೆ ಪರಮೇಶ್ವರಿ ಕೆ . ಗೌಡ, ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಗಂಗಾಧರ ಗೌಡ, ಬಂದಾರು ಪ್ರೌಢ ಶಾಲಾ ಮುಖ್ಯೋಪಾಧ್ಯಾಯರಾದ ಬಾಲಕೃಷ್ಣ ಗೌಡ ಉಪಸ್ಥಿತರಿದ್ದರು.ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಎ ಮಧುಸೂಧನ್, ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಿಸ್, ಪುತ್ತೂರು ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವಿ.ಪಿ ಕಾರ್ಯಪ್ಪ ಭಾಗಿಯಾಗಿದ್ದರು.
ಶಾಸಕರ ರಸ್ತೆ ಅಭಿವೃದ್ದಿಯನ್ನು ಕೊಂಡಾಡಿದ ಹೆಗ್ಗಡೆಯವರು;
ಶಾಸಕ ಹರೀಶ್ ಪೂಂಜ ಕಾರ್ಯಕ್ರಮಕ್ಕೆ ತಡವಾಗಿ ಬಂದುದ್ದಕ್ಕೆ ಬೇಸರ ವ್ಯಕ್ತಪಡಿಸಿದರು. ಇದಕ್ಕೆ ಕಾರಣ ಅವರೇ. ಯಾಕೆಂದರೆ ಬೆಳಾಳಿಗೆ ಬರುವ ರಸ್ತೆ ಇಷ್ಟು ಉತ್ತಮವಾಗಿದ್ದುದರಿಂದ ನಾನು ಬೇಗ ತಲುಪಿದೆ. ಅವರು ಬೆಳಾಳಿಗೆ ಬರುವ ಈ ರಸ್ತೆಯನ್ನು ದುರಸ್ಥಿಗೊಳಿಸಿ ಕೇವಲ ಹತ್ತು ನಿಮಿಷದಲ್ಲಿ ನಾನು ಇಲ್ಲಿಗೆ ಬರುವಂತಾಯಿತು. ಹೀಗೆಯೇ ಅವರು ತಾಲೂಕಿನಲ್ಲಿ ಇತರ ಗ್ರಾಮೀಣ ರಸ್ತೆಗಳನ್ನೂ ದುರಸ್ಥಿಗೊಳಿಸಿರುವುದಾಗಿ ಜನಹೇಳುವುದನ್ನು ಕೇಳಿದ್ದೇನೆ. ಅದಕ್ಕಾಗಿ ನಾನು ಅವರನ್ನು ತಾಲೂಕಿನ ಜನತೆಯ ಪರವಾಗಿ ಅಭಿನಂದಿಸುತ್ತೇನೆ ಎಂದು ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಮೆಚ್ಚುಗೆಯ ಮಾತನ್ನಾಡಿದರು.
ಧರ್ಮಸ್ಥಳಕ್ಕೆ ಕೆಲವು ಸೊಪ್ಪು, ಕಾಯಿಗಳನ್ನು ಬೆಳಾಲಿನಿಂದಲೇ ತರಲಾಗುತ್ತದೆ. ಆ ತಳಿ ಈ ಗ್ರಾಮದಲ್ಲಿ ಮಾತ್ರ ಇದೆ. ಅದನ್ನು ಇಲ್ಲಿನ ಜನ ಸಂರಕ್ಷಿಸಬೇಕು. ಅದು ನಾಟಿ ಮಾಡಿದರೆ ಬೆಳೆಯುವ ಗಿಡಗಳಲ್ಲ. ಸಾಂಪ್ರದಾಯಿಕವಾಗಿ ಬೆಳೆಯುವವುಗಳು. ಧರ್ಮಸ್ಥಳದ ಕೆಲವು ಕಾರ್ಯಕ್ರಮಕ್ಕೆ ಅವುಗಳನ್ನು ಬೆಳಾಲು ಗ್ರಾಮದಿಂದಲೇ ಈಗಲೂ ಜನ ತಂದು ಕೊಡುವ ಸಂಪ್ರದಾಯ ಇದೆ.ಆಯಾಯಾ ಪ್ರದೇಶದಲ್ಲಿ ಬೆಳೆಯುವ ಇಂತಹಾ ಫಲ ವಸ್ತುಗಳನ್ನು ಆಯಾಯಾ ಪ್ರದೇಶದಲ್ಲೇ ಗುರುತಿಸಿ ಸಂರಕ್ಷಿಸುವ ಕೆಲಸ ಕೂಡ ಅರಣ್ಯ ಇಲಾಖೆ ಕೈಗೆತ್ತಿಕೊಳ್ಳಬಹುದು ಎಂದು ಹೆಗ್ಗಡೆಯವರು ಸಲಹೆ ನೀಡಿದರು.