ಬೆಳ್ತಂಗಡಿ; ಇಲ್ಲಿನ ಸೋಮಾವತಿ ನದಿಯಲ್ಲಿ ಮುಳುಗಿ ಮೀನು ಬೇಟೆಗಾರ ದಾರುಣವಾಗಿ ಮೃತಪಟ್ಟಿದ್ದಾರೆ.
ಮೃತರನ್ನು ಉಜಿರೆ ಗ್ರಾಮದ ಶಿವಾಜಿ ನಗರ ರೆಂಜಾಳ ನಿವಾಸಿ ರಮೇಶ್ (48ವ.) ಎಂಬವರೆಂದು ಗುರುತಿಸಲಾಗಿದೆ.
ಪ್ರಾರಂಭದಲ್ಲಿ ಬೆಳ್ತಂಗಡಿ ಸೋಮಾವತಿ ನದಿ ನೀರಿನಲ್ಲಿ ಪಂಪ್ ಹೌಸ್ ಬಳಿಯ ಗುಂಡಿಯಲ್ಲಿ ಇಬ್ಬರು ಮುಳುಗಿ ನಾಪತ್ತೆಯಾಗಿದ್ದಾರೆ ಎಂಬ ಗುಮಾನಿ ಹಿನ್ನೆಲೆಯಲ್ಲಿ ಅಗ್ನಿ ಶಾಮಕ ದಳ ಮತ್ತು ಸ್ಥಳೀಯ ಮುಳುಗು ಪರಿಣತರು ಹುಡುಕಾಟ ಆರಂಭಿಸಿದ್ದರು.
ನದಿ ತಟದಲ್ಲಿ ಮೊಬೈಲ್ ಫೋನ್ ಮತ್ತು ಪರಿಕರಗಳು ಪತ್ತೆಯಾಗಿದ್ದರಿಂದ ನದಿ ನೀರಿನಲ್ಲಿ ಯಾರೋ ಮುಳುಗಿದ್ದಾರೆ ಎಂಬುದು ಬಹುತೇಕ ಖಚಿತಗೊಂಡಿತ್ತು.
ಇಷ್ಟರಲ್ಲಿ ರೆಂಜಾಳ ನಿವಾಸಿ ರಮೇಶ್ ಅವರ ಸಹೋದರ ಮಾಹಿತಿ ನೀಡಿ, ನಿನ್ನೆ ಮೀನು ಹಿಡಿಯಲು ಹೋಗಿದ್ದ ಅಣ್ಣನ ಮೊಬೈಲ್ ಫೋನ್ ಮಂಗಳವಾರ ಬೆಳಿಗ್ಗೆ 10 ಗಂಟೆಯಿಂದ ಸ್ವಿಚ್ಚ್‌ಡ್ ಆಫ್ ಬರುತ್ತಿರುವ ಬಗ್ಗೆ ಅನುಮಾನ ವ್ಯಕ್ತಪಡಿದ್ದರು. ಇದಾದ ಬಳಿಕ ಕಾರ್ಯಾಚರಣೆ ವೇಳೆ ರಮೇಶ್ ಅವರ ಮೃತದೇಹ ಹೊಳೆಯ ನೀರಿನಲ್ಲಿ ಪತ್ತೆಯಾಗಿದೆ
ಮೃತದೇಹದ ಮರಣೋತ್ತರ ಪರೀಕ್ಷೆ ಯನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ನಡೆಸಲಾಗಿದೆ.ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ಧಾವಿಸಿ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ.