ಬೆಳ್ತಂಗಡಿ; ಕಾಜೂರು ರಹ್ಮಾನಿಯಾ ಜುಮ್ಮಾ ಮಸ್ಜಿದ್ ಮತ್ತು ದರ್ಗಾಶರೀಫ್ ಆಡಳಿತಕ್ಕೊಳಪಟ್ಟ ಶಿಕ್ಷಣ ಸಂಸ್ಥೆಗಳ ಪ್ರಗತಿಗಾಗಿ ಮತ್ತು ಸಮರ್ಥ ನಿರ್ವಹಣೆಗಾಗಿ ಶೈಕ್ಷಣಿಕ ಆಸಕ್ತರ ಮತ್ತು ಶಿಕ್ಷಣ ತಜ್ಞರ ಜೊತೆ ಸಮಾಲೋಚನಾ ಸಭೆ ಏ.21 ರಂದು ಕಾಜೂರು ಆಡಳಿತ ಕಚೇರಿಯಲ್ಲಿ ನಡೆಯಿತು
ಕಾಜೂರು ಸಂಸ್ಥೆಗಳ ಅಧ್ಯಕ್ಷ ಕೆ.ಯು ಇಬ್ರಾಹಿಂ ಅಧ್ಯಕ್ಷತೆ ವಹಿಸಿದ್ದು ಸಭೆಯ ಮುನ್ನುಡಿ ಮಾತುಗಳನ್ನಾಡಿದರು.
ಧರ್ಮಗುರುಗಳು, ಸಂಪಾದಕರೂ, ಸಂಪನ್ಮೂಲ ವ್ಯಕ್ತಿಗಳು ಹಾಗೂ ಶಿಕ್ಷಣ ತಜ್ಞರಾದ ಕೆ.ಎಂ ಅಬೂಬಕ್ಕರ್ ಸಿದ್ದೀಕ್ ಮೋಂಟುಗೊಳಿ ಅವರು ಮಾರ್ಗದರ್ಶನ ನೀಡಿದರು.
ಶಿಕ್ಷಣ ಸಂಸ್ಥೆಗಳ ಯಶಸ್ವಿ ನಿರ್ವಹಣೆ, ಆಡಳಿತ ವ್ಯವಸ್ಥೆ, ಮೂಲಭೂತ ಸೌಲಭ್ಯಗಳ ಒದಗಣೆ, ಗುಣಮಟ್ಟದ ಕಲಿಕಾ ವಿಧಾನ, ಸಂಪನ್ಮೂಲ ಶಿಕ್ಷಕರ ತರಬೇತಿ, ಹೆತ್ತವರ ಭಾಗವಹಿಸುವಿಕೆ ಹಾಗೂ ಸಾರ್ವಜನಿಕ ತೊಡಗಿಸುವಿಕೆ ಇತ್ಯಾಧಿ ವಿಚಾರಗಳ ಬಗ್ಗೆ ಮಾಹಿತಿ ನೀಡಿದರು.
ತೀರ್ಥಹಳ್ಳಿ ಸರಕಾರಿ ಕಾಲೇಜಿನ ಅಸಿಸ್ಟೆಂಟ್ ಪ್ರೊಫೆಸರ್
ಇಕ್ಬಾಲ್ ಮಾಚಾರ್, ಪತ್ರಕರ್ತ ಅಶ್ರಫ್ ಆಲಿಕುಂಞಿ ಸಲಹೆ ನೀಡಿದರು.
ಸಭೆಯಲ್ಲಿ ಕಾಜೂರು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜೆ.ಹೆಚ್ ಅಬೂಬಕ್ಕರ್ ಸಿದ್ದೀಕ್ ಕಾಜೂರು, ಕೋಶಾಧಿಕಾರಿ ಮುಹಮ್ಮದ್ ಕಮಾಲ್, ರಹ್ಮಾನಿಯಾ ಶಿಕ್ಷಣ ಸಂಸ್ಥೆಗಳ ನಿರ್ದೇಶಕರುಗಳಾದ ಉಮರುಲ್ ಅಶ್ಪಾಕ್, ಮುಹಮ್ಮದ್ ಶರೀಫ್ ಹೈಟೆಕ್, ಮಜೀದ್ ಕುಕ್ಕಾವು, ಆಸಿಫ್ ಜೆ. ಹೆಚ್, ಮುಹಮ್ಮದ್ ಅಲಿ ಎ.ಯು ಉಪಸ್ಥಿತರಿದ್ದರು.
ಸಭೆಯಲ್ಲಿ ಕಾಜೂರಿನ ಶಿಕ್ಷಣ ಸಂಸ್ಥೆಗಳ ಪೂರ್ವ ನಿರ್ವಹಣೆಗೆ 13 ಮಂದಿಯ ಶೈಕ್ಷಣಿಕ ಟ್ರಸ್ಟ್ ರಚನೆ ಬಗ್ಗೆ ನಿರ್ಧಾರಕ್ಕೆ ಬಂದು ಅಬೂಬಕ್ಕರ್ ಸಿದ್ದೀಕ್ ಮೋಂಟುಗೊಳಿ ಮತ್ತು ಇಕ್ಬಾಲ್ ಮಾಚಾರು ಅವರನ್ನು ಸಲಹೆಗಾರರಾಗಿ, ಸಾಮಾಜಿಕ ಕ್ಷೇತ್ರದಿಂದ ಅಶ್ರಫ್ ಆಲಿಕುಂಞಿ ಅವರನ್ನು ಟ್ರಸ್ಟಿಗಳಾಗಿ ಆಯ್ಕೆ ಮಾಡಲಾಯಿತು.
ಕಾಜೂರು ತಂಙಳ್ ಅವರ ಆಧ್ಯಾತ್ಮಿಕ ನೇತೃತ್ವದಲ್ಲೇ ಕಾಜೂರಿನಲ್ಲಿ ಎಲ್.ಕೆ.ಜಿ, ಯು.ಕೆ.ಜಿ, ಸಿಬಿಎಸ್‌ಇ 1 ನೇ ತರಗತಿ, ಪ್ರೌಢ ಶಾಲೆ, ಮಹಿಳಾ ಪಿಯುಸಿ ಮತ್ತು ಶರೀಅತ್ ಕಾಲೇಜು ಹಾಗೂ ದಅವಾ ದರ್ಸ್ ಮತ್ತು ಹಾಸ್ಟೆಲ್ ವ್ಯವಸ್ಥೆಗಳು ನಡೆಯುತ್ತಿದ್ದು, ಪ್ರಸ್ತುತ ಸಾಲಿನ ದಾಖಲಾತಿ ಆರಂಭವಾಗಿದೆ. ಮುಂದಕ್ಕೆ ಇಲ್ಲಿನ ಶಿಕ್ಷಣ ಸಂಸ್ಥೆಗಳು ಈ ಟ್ರಸ್ಟ್ ವ್ಯಾಪ್ತಿಗೊಳಪಟ್ಟು ಪ್ರಗತಿ ಕಾಣಲಿದೆ.