Posts

ಮುಂಡೂರು ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಜನವರಿ 12 ರಿಂದ 17 ರ ವರೆಗೆ ಪ್ರತಿಷ್ಟಾ ಬ್ರಹ್ಮಕಲಶೋತ್ಸವ

2 min read


ಬೆಳ್ತಂಗಡಿ; ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಮುಂಡೂರು ಇದರ ನವೀಕರಣ ಮತ್ತು ಅಷ್ಟಬಂಧ ಬ್ರಹ್ಮಕಲಶೋತ್ಸವ ಸಂಭ್ರಮವು ಜ.12 ರಿಂದ ಮೊದಲ್ಗೊಂಡು ಜ. 17 ರ ವರೆಗೆ ಬ್ರಹ್ಮ ಶ್ರೀ ವೇದಮೂರ್ತಿ ನೀಲೇಶ್ವರ ಆಲಂಬಾಡಿ ಪದ್ಮನಾಭ ತಂತ್ರಿಗಳ ವೈದಿಕ ನೇತೃತ್ವದಲ್ಲಿ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ. ಎಂ ಎಂ ದಯಾಕರ್, ಕಾರ್ಯಾಧ್ಯಕ್ಷ ಯೋಗೀಶ್ ಕುಮಾರ್ ನಡಕ್ಕರ ಮತ್ತು ಕಾರ್ಯದರ್ಶಿ ರಾಜೀವ ಸಾಲಿಯಾನ್ ಹೇಳಿದರು.

ಮುಂಡೂರು ಶ್ರೀ ದೇವಿಯ ಸನ್ನಿಧಿಯಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು.

800 ವರ್ಷಗಳ ಇತಿಹಾಸ ಇರುವ ಈ ದೇವಸ್ಥಾನದಲ್ಲಿ 2001 ರಿಂದ ದೇವಸ್ಥಾನದ ಗರ್ಭಗುಡಿ, ಗೋಪುರ, ತೀರ್ಥಮಂಟಪದ ರಚನೆಗೆ ಡಾ. ಎಂ ಎಂ ದಯಾಕರ್ ಅಧ್ಯಕ್ಷತೆಯಲ್ಲಿ ಊರ ಪರವೂರ ಭಕ್ತಾಧಿಗಳ ಸಹಕಾರದಿಂದ ಜೀರ್ಣೋದ್ಧಾರಗೊಂಡು 2007 ರಲ್ಲಿ ಎಪ್ರಿಲ್ ತಿಂಗಳಲ್ಲಿ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಯವರು ಗೌರವಾಧ್ಯಕ್ಷತೆಯಲ್ಲಿ ಹರೀಶ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಬ್ರಹ್ಮಕಲಶೋತ್ಸವ ನಡೆದಿತ್ತು. 

ಇದೀಗ ಮತ್ತೆ 2018 ರಲ್ಲಿ ಬ್ರಹ್ಮಕಲಶೋತ್ಸವ ನಡೆಯಬೇಕಿದ್ದರೂ ಕಾರಣಾಂತರಗಳಿಂದ ಮುಂದೂಡಲ್ಪಟ್ಟಿತ್ತು.‌ ಇದೀಗ ಕ್ಷೇತ್ರದಲ್ಲಿ ಸುತ್ತು ಪೌಳಿ, ಮುಖಮಂಟಪ, ನಾಗನ ಕಟ್ಟೆ, ಅಶ್ವತ್ಥ ಕಟ್ಟೆ, ಹೈಮಾಸ್ಟ್ ದೀಪ, ಹೊರಾಂಗಣ ಕ್ಕೆ ಇಂಟರ್‌ಲಾಕ್ ಅಳವಡಿಕೆ, ವಿಶಾಲ ಮೇಲ್ಚಾವಣಿ ನಿರ್ಮಿಸಿ ಸಭಾಂಗಣ ರಚನೆ, ದೈವಗಳ ಕಟ್ಟೆ ನಿರ್ಮಾಣ, ಒಳಗಿನ ಸುತ್ತು ಪೌಳಿಯ ನೆಲಕ್ಕೆ ಗ್ರೇ ನೈಟ್ ಅಳವಡಿಕೆ ಇತ್ಯಾಧಿ ಪ್ರಮುಖ ಕಾಮಗಾರಿಗಳನ್ನು ಸರಕಾರದ ಅನುದಾನ ಮತ್ತು ಭಕ್ತ‌ಜನರ ಕೊಡುಗೆಯ ಮುಖಾಂತರ ಮಾಡಲಾಗಿದೆ.

ಕ್ಷೇತ್ರದ ಎರಡೂ ಕಡೆಗಳಿಂದ ಅಂದರೆ ಬದ್ಯಾರ್ ಮತ್ತು ಗೊಲ್ಲಾಯಿಬೆಟ್ಟು ಎಂಬ ಕಡೆಗಳಲ್ಲಿ ದಾನಿಗಳ ಕೊಡುಗೆಯ ಮೂಲಕ ಶಾಶ್ವತ ಪ್ರವೇಶದ್ವಾರಗಳನ್ನು ನಿರ್ಮಿಸಲಾಗುತ್ತಿದೆ. ಡಾ.‌ಎಂ ಎಂ ದಯಾಕರ್ ಮತ್ತು ಸುಂದರ ಪೂಜಾರಿ ಅವರ ಕುಟುಂಬದ ಕಡೆಯವರು ಇದನ್ನು ಸೇವಾರೂಪೇಣ ಮಾಡಿಕೊಡುತ್ತಿದ್ದಾರೆ.

ಗ್ರಾಮದಲ್ಲಿರುವ 150 ರಷ್ಟು ಹಿಂದೂ ಕುಟುಂಬಗಳು ತಲಾ 10 ಸಾವಿರ ರೂ. ದೇಣಿಗೆ ಸಮರ್ಪಿಸಿದ್ದು ವಿಶೇಷ. ಗ್ರಾಮದ

ಶಾರದಾಂಬಾ ಭಜನಾ ಮಂಡಳಿ ಮತ್ತು ನಾಗಾಂಬಿಕಾ ಭಜನಾ ಮಂಡಳಿ ಇದರ ಮೂಲಕ ನಗರಭಜನಾ ವತಿಯಿಂದ 3.17  ಲಕ್ಷ ರೂ. ಸಂಗ್ರಹಮಾಡಿ ಕೊಡಲಾಗಿದೆ. ಪ್ರತೀ ದಿನ 40 ಮಂದಿಯಿಂದ, ವಿಶೇಷ ಸಂದರ್ಭದಲ್ಲಿ 100 ಕ್ಕೂ ಅಧಿಕ ಮಂದಿ ಗ್ರಾಮಸ್ಥರ ಸ್ವಯಂ ಸೇವಕರಾಗಿ ಶ್ರಮಾದಾನ ಮಾಡುತ್ತಿದ್ದಾರೆ. 

ನಗರಾಲಂಕಾರ, ರಸ್ತೆ ನಿರ್ಮಾಣ, ದೇವಸ್ಥಾನದ ಆವರಣ ಶುಚಿತ್ವ ಮತ್ತು ಇತರ ಸಿದ್ಧತಾ ಕಾರ್ಯದಲ್ಲಿ ತೊಡಗಿದ್ದಾರೆ ಎಂದರು.

ಕ್ಷೇತ್ರದಲ್ಲಿ ನಡೆಯುತ್ತಿರುವ ಒಂದು ಕೋಟಿ ರೂ.‌ವೆಚ್ಚದ ಈ ಎಲ್ಲಾ ಕೆಲಸ ಕಾರ್ಯಗಳನ್ನು ಮೆಚ್ಚಿ ಶ್ರೀ ಕ್ಷೇತ್ರ ಧರ್ಮಸ್ಥಳ ದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಯವರು 5ಲಕ್ಷ ರೂ ದೇಣಿಗೆ ನೀಡಿದ್ದು, ಎರಡನೇ ಹಂತದಲ್ಲಿ ಮತ್ತೆ 5 ಲಕ್ಷ ರೂ.‌ನೀಡಿ ವಿಶೇಷ ಪ್ರೋತ್ಸಾಹ ನೀಡಿದ್ದಾರೆ. ದೇವಳಕ್ಕೆ 50 ಸೆಂಟ್ಸ್ ನಷ್ಟು ಮಾತ್ರ ಜಾಗ ಇದ್ದು, ಕಾರ್ಯಕ್ರಮ ಕ್ಕೆ ಪೂರಕವಾಗಿ ಸ್ಥಳೀಯರಾದ ಅರವಿಂದ ಭಟ್ ಮತ್ತು ರವಿ ಪ್ರಕಾಶ್ ಮುಚ್ಚಿನ್ನಾಯ ಅವರು ತಮ್ಮ ಸ್ಥಳದಲ್ಲಿ ಅವಕಾಶ ಕೊಟ್ಟಿದ್ದಾರೆ ಎಂದರು.

ಬ್ರಹ್ಮಕಲಶೋತ್ಸವ ಪ್ರಯುಕ್ತ ಮುಂಡೂರು, ಸವಣಾಲು, ಮೇಲಂತಬೆಟ್ಟು, ತೆಂಕಕಾರಂದೂರು, ಕರಂಬಾರು ಈ ಐದೂ ಪ್ರದೇಶಗಳ ಜನ ಒಟ್ಟು ಸೇರಿ ಬದ್ಯಾರ್ ತಿರುವು ಬಳಿಯಿಂದ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆಗೆ ನಿರ್ಧಾರ ಮಾಡಿದ್ದು ಮಂಗಳಗಿರಿ ಕ್ಷೇತ್ರದ ರಾಜೀವ ಅವರು ಚಾಲನೆ ನೀಡಲಿದ್ದಾರೆ ಎಂದರು.

ಬ್ರಹ್ಮಕಲಶೋತ್ಸವ ಪ್ರಯುಕ್ತ ಸೀಮೆಯ ಎಲ್ಲಾ 250 ಮನೆಗಳಿಗೆ ಶ್ರೀ ದೇವಿಯ ಪ್ರಸಾದ ರೂಪೇಣ ವಸ್ರ್ತದಾನ, ದೇವರ ಫೋಟೋ ಹಾಗೂ ಶಾಲು ವಿತರಿಸುವ ಬಗ್ಗೆ ಕಾರ್ಯಕ್ರಮ ರೂಪಿಸಿರುವುದಾಗಿ ತಿಳಿಸಿದರು. 

ಬ್ರಹ್ಮಕಲಶೋತ್ಸವ ಪ್ರಯುಕ್ತ ಪ್ರತಿದಿನ ಸಂಜೆ ಭಜನಾ ಕಾರ್ಯಕ್ರಮ ಹಾಗೂ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದೆ. ಈ‌ ಸಮಾರಂಭದಲ್ಲಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು, ಕಟೀಲಿನ  ಶ್ರೀ ಹರಿನಾರಾಯಣ ಅಸ್ರಣ್ಣರು, ಸುಬ್ರಹ್ಮಣ್ಯ ಶ್ರೀ ಗಳು, ಸಚಿವರಾದ‌ ಕೋಟ ಶ್ರೀನಿವಾಸ ಪೂಜಾರಿ, ಎಸ್ ಅಂಗಾರ, ಶಂಕರ ಪಾಟೀಲ್ ಬಿ ಮುನೇನಕೊಪ್ಪ, ಸಂಸದ ನಳಿನ್ ಕುಮಾರ್, ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಶಾಸಕರಾದ ಪ್ರತಾಪಸಿಂಹ ನಾಯಕ್ ಮತ್ತು ಹರೀಶ್ ಕುಮಾರ್, ಮಾಜಿ ಶಾಸಕ ವಸಂತ ಬಂಗೇರ, ಪಡುಬಿದ್ರೆ ಬೀಡು ರತ್ನಾಕರರಾಜ ಅರಸು ಕಿನ್ಯಕ್ಕ ಬಲ್ಲಾಳರು, ಡಾ ರೇಣುಕಾ ಪ್ರಸಾದ್ ಸುಳ್ಯ, ಸಹಿತ ಅನೇಕ ಮಂದಿ ಗಣ್ಯರು ಭಾಗಿಗಳಾಗಲಿದ್ದಾರೆ ಎಂದರು. 

ಪತ್ರಿಕಾಗೋಷ್ಠಿಯಲ್ಲಿ ದೇವಳದ ಪ್ರಧಾನ ಅರ್ಚಕ ಅರವಿಂದ ಭಟ್ ಎಂ, ಬ್ರಹ್ಮಕಲಶೋತ್ಸವ ಸಮಿತಿ ಕೋಶಾಧಿಕಾರಿ ಕಿಶೋರ್ ಹೆಗ್ಡೆ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್, ಕಾರ್ಯದರ್ಶಿ ಯಾದವ ಕುಲಾಲ್, ಮಾಧ್ಯಮ ಸಮಿತಿ ಸಂಚಾಲಕ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದು ಪೂರಕ‌ ಮಾಹಿತಿ ನೀಡಿದರು.

-----

ಅಚ್ಚು ಮುಂಡಾಜೆ

ಚೇರ್ಮೆನ್ ಏಂಡ್ ಪ್ರಿನ್ಸಿಪಲ್ ಎಡಿಟರ್, 

ಲೈವ್ ಮೀಡಿಯಾ ಟೀಮ್

9449640130

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment