ಬೆಳ್ತಂಗಡಿ;ಮುಂಡಾಜೆಯಿಂದ ಕಾಜೂರು ದಿಡುಪೆ ಸಂಸೆ ರಸ್ತೆಯ ಹೇಡ್ಯ ಸೊಸೈಟಿ ಬಳಿ ರಾತ್ರಿ 11 ಗಂಟೆ ಸುಮಾರಿಗೆ ನಡೆದ ರಸ್ತೆ ಅವಘಡದಲ್ಲಿ ಕೊಯ್ಯೂರಿನ ರಘುಚಂದ್ರ ಎಂಬವರು ದಾರುಣವಾಗಿ ಮೃತಪಟ್ಟಿದ್ದಾರೆ ಎಂದು ಆರಂಭಿಕ ಮಾಹಿತಿ ಬಂದಿದೆ.
ವಿದ್ಯುತ್ ಕಂಬಕ್ಕೆ ಹುಲ್ಲು ಸಾಗಾಟದ ಪಿಕಪ್ ವಾಹನ ಡಿಕ್ಕಿಯಾದ ಪರಿಣಾಮ ನಾಲ್ಕೈದು ವಿದ್ಯುತ್ ಕಂಬಗಳು ತುಂಡಾಗಿ ತಂತಿಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿದ್ದವೆನ್ನಲಾಗಿದ್ದು, ಇದರ ಅರಿವಿಲ್ಲದೆ ಸ್ಕೂಟರ್ ನಲ್ಲಿ ದಿಡುಪೆ ಕಡೆಯಿಂದ ಬರುತ್ತಿದ್ದ ರಘು ಅವರ ಕುತ್ತಿಗೆಗೆ ತಂತಿಗಳು ಸಿಕ್ಕಿಕೊಂಡು ರಸ್ತೆಗೆಸೆಯಲ್ಪಟ್ಟ ಅವರು ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.
ಅಪಘಾತದ ವೇಳೆ ವಿದ್ಯುತ್ ತಂತಿಯಲ್ಲಿ ವಿದ್ಯುತ್ ಪ್ರವಹಿಸುತ್ತಿತ್ತೇ ಎಂಬ ನಿಖರ ಮಾಹಿತಿ ಲಭಿಸಿಲ್ಲ.ಸ್ಥಳಕ್ಕೆ ರಾತ್ರಿಯೇ ಪೊಲೀಸರು ಧಾವಿಸಿದ್ದು ಮೃತದೇಹವನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದ್ದಾರೆ.
ಮೃತರು ಆ ರಾತ್ರಿಯ ವೇಳೆ ಎಲ್ಲಿಗೆ ಹೋಗಿದ್ದರು ಎಂಬ ಬಗ್ಗೆ ವಿವರ ಲಭಿಸಿಲ್ಲ.