ಬೆಳ್ತಂಗಡಿ; ಗಮಕ ಎಂದರೆ ಸಾಹಿತ್ಯ ಸಂಗೀತ ಇವೆರಡರ ಸರಸ ಸಾಮರಸ್ಯವನ್ನು ಪ್ರತಿಬಿಂಬಿಸುವ ಪ್ರಾಚೀನ ಋಷಿಗಳಾದ ವಾಲ್ಮೀಕಿ ಮಹರ್ಷಿಪ್ರಣೀತ ಕಳೆ. ಹಿಂದೆ ಕಾವ್ಯ ಗಾಯನ ಎನ್ನುತ್ತಿದ್ದರು. ಅದರ ಅರ್ಥವೇ ಹೇಳಿದಂತೆ ಕಾವ್ಯಗಳನ್ನು ಓದುವುದಲ್ಲ. ಗಾಯನ ಮಾಡಬೇಕು. ಹಾಗಾದರೆ ಮಾತ್ರ ಕಾವ್ಯ ರಚಿಸಿದ ಕವಿಯ ಮನಸ್ಸು, ಕಾವ್ಯದ ಭಾವ, ಹಿನ್ನೆಲೆ ಅರ್ಥವಾಗುತ್ತದೆ. ಓದುವ ವ್ಯಕ್ತಿ ಆಡಿದರೆ ಮಾತ್ರ ಅದು ಕೇಳುಗರಲ್ಲಿ ಅಚ್ಚಳಿಯದೆ ಉಳಿಯಲು ಸಾಧ್ಯ. ಇಲ್ಲದಿದ್ದರೆ ಅದು ಕಾದಂಬರಿ ಓದಿದ ಹಾಗೆ ಆಗುತ್ತದೆ ಎಂದು ಸಮ್ಮೇಳನದ ಸರ್ವಾಧ್ಯಕ್ಷ ಗಮಕಿ ದಿವಾಕರ ಆಚಾರ್ಯ ಧರ್ಮಸ್ಥಳ ಹೇಳಿದರು.
ಕರ್ನಾಟಕ ಗಮಕ ಕಲಾ ಪರಿಷತ್, ಬೆಳ್ತಂಗಡಿ ತಾಲೂಕು ಕರ್ನಾಟಕ ಗಮಕ ಕಲಾ ಪರಿಷತ್, ವಾಣಿ ಕಾಲೇಜು ಸಹಯೋಗದಲ್ಲಿ ಮಾ.12 ರಂದು ವಾಣಿ ವಿದ್ಯಾಸಂಸ್ಥೆಯಲ್ಲಿ ನಡೆದ ತಾಲೂಕಿನ ಪ್ರಥಮ ಗಮಕ ತಾಲೂಕು ಸಮ್ಮೇಳನದ ಸರ್ವಾಧ್ಯಕ್ಷತೆಯಿಂದ ಅವರು ಮಾತನಾಡಿದರು.ಸಮ್ಮೇಳನವನ್ನು ವಾಣಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ ಉದ್ಘಾಟಿಸಿದರು. ದ.ಕ.ಜಿಲ್ಲಾ ಗಮಕ ಪರಿಷತ್ ಅಧ್ಯಕ್ಷ ಪ್ರೊ.ಮಧೂರು ಮೋಹನ ಕಲ್ಲೂರಾಯ, ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ ಎಚ್.ಎಸ್. ಕಲಾ ಪೋಷಕ ಶ್ರೀಶ ಮುಚ್ಚಿನ್ನಾಯ,ಯಕ್ಷಭಾರತಿ ಕನ್ಯಾಡಿ ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ, ಗ.ಕ.ಪ. ತಾಲೂಕು ಅಧ್ಯಕ್ಷ ಜಯರಾಮ ಕುದ್ರೆತ್ತಾಯ,ವಾಣಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಮುಖ್ಯ ಶಿಕ್ಷಕಲಕ್ಷ್ಮೀ ನಾರಾಯಣ ಕೆ., ಸಾಹಿತಿ ಪ.ರಾಮಕೃಷ್ಣ ಶಾಸ್ರ್ತಿ ಮಚ್ಚಿನ ಇವರು ಉಪಸ್ಥಿತರಿದ್ದರು.
ಕ.ಸಾ.ಪ ತಾಲೂಕು ಅಧ್ಯಕ್ಷ ಯದುಪತಿ ಗೌಡ ಸ್ವಾಗತಿಸಿದರು. ಗ.ಕ.ಪ. ಕಾರ್ಯದರ್ಶಿ ರಾಮಕೃಷ್ಣ ಭಟ್ ಉಜಿರೆ ಪ್ರಸ್ತಾವಿಸಿದರು. ರಮೇಶ್ ಮಯ್ಯ ಸಮ್ಮೇಳನದ ಅಧ್ಯಕ್ಷರನ್ನು ಪರಿಚಯಿಸಿದರು. ಗ.ಕ.ಪ. ಕೋಶಾಧಿಕಾರಿ ರಾಮಕೃಷ್ಣ ಭಟ್ ಬೆಳಾಲು ವಂದಿಸಿದರು. ಗಮಕಿ ಸುವರ್ಣ ಕುಮಾರಿ ಕಾರ್ಯಕ್ರಮ ನಿರ್ವಹಿಸಿದರು.