ಬೆಳ್ತಂಗಡಿ; ತಾಲೂಕಿನ ಉಜಿರೆಯಲ್ಲಿ ಎಂಟು ವರ್ಷದ ಬಾಲಕನ ಅಪಹರಣ ಪ್ರಕರಣವನ್ನು ಕ್ಷಿಪ್ರವಾಗಿ ಭೇದಿಸಿ ಆರೋಪಿಗಳನ್ನು ಸೆದೆಬಡಿದ ಹಾಗೂ ಬಾಲಕನನ್ನು ಸುರಕ್ಷಿತವಾಗಿ ಮನೆ ತಲುಪಿಸಿದ ಪೊಲೀಸರ ತಂಡವನ್ನು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಸಂಸದ ನಳಿನ್ ಕುಮಾರ್ ಸ್ಲಾಘಿಸಿದ್ದಾರೆ. ಅದಕ್ಕಾಗಿ ಅವರನ್ನು ಡಿ.21 ರಂದು ಅಭಿನಂದಿಸಿ ಪ್ರೋತ್ಸಾಹಿಸಿದ್ದಾರೆ.
ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ, ಧರ್ಮಸ್ಥಳ ಠಾಣಾ ಎಸ್.ಐ ಪವನ್ ನಾಯ್ಕ್, ಬೆಳ್ತಂಗಡಿ ಠಾಣಾ ಎಸ್.ಐ ನಂದಕುಮಾರ್ ಅವರ ಕಾರ್ಯದಕ್ಷತೆಯನ್ನು ಸ್ವತಹಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್ ಅವರು ಸಚಿವರು, ಸಂಸದರ ಮುಂದೆ ಕೊಂಡಾಡಿದರು. ಈ ಕಾರ್ಯಾಚರಣೆಯಲ್ಲಿ ಬೆಳ್ತಂಗಡಿ ಎಸ್.ಐ ನಂದ ಕುಮಾರ್ ಅವರು ಎರಡು ದಿನಗಳಲ್ಲಿ ನಿದ್ದೆಯನ್ನೂ ತೊರೆದು ಭಾಗಿಯಾದುದನ್ನೂ ಗುರುತಿಸಿರುವ ಎಸ್.ಪಿ ಅವರು ತನ್ನ ಮಾತಿನಲ್ಲಿ ವಿಶೇಷವಾಗಿ ಉಲ್ಲೇಖಿಸಿರುವುದು ಅವರ ಕಾರ್ಯದಕ್ಷತೆಗೆ ಇನ್ನಷ್ಟು ಹೊಸ ಹುರುಪು ನೀಡಿದೆ. ಈ ಪ್ರಕರಣದಲ್ಲಿ ಒಟ್ಟು ತಂಡದ ಕಾರ್ಯಕ್ಕೆ(ಟೀಮ್ ವರ್ಕ್) ಮೇಲಧಿಕಾರಿಗಳೂ ಮಾತ್ರವಲ್ಲದೆ ನಾಗರಿಕರೂ ಪ್ರಸಂಸೆ ವ್ಯಕ್ತಪಡಿಸುತ್ತಿದ್ದಾರೆ.
------
ಬಾಲಕನ ಅಪಹರಣದಿಂದ ಇಡೀ ಜಿಲ್ಲೆ, ರಾಜ್ಯದ ಜನತೆ ಆತಂಕಕ್ಕೊಳಗಾಗಿದ್ದರು. ಆದರೆ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್ ಅವರು ಕ್ಷಿಪ್ರ ಕಾರ್ಯಾಚರಣೆ ಕೈಗೊಂಡು ಬಾಲಕನಿಗೆ ಯಾವುದೇ ತೊಂದರೆಯಾಗದಂತೆ ಹೆತ್ತವರ ಮಡಿಲು ಸೇರಿಸಿರುವುದು ಒಂದು ಸಾಧನೆ.
*ಕೋಟ ಶ್ರೀನಿವಾಸ ಪೂಜಾರಿ,
ಜಿಲ್ಲಾ ಉಸ್ತುವಾರಿ ಸಚಿವರು.