ಬೆಳ್ತಂಗಡಿ: ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ನಿರ್ಮಾಣವಾದ 7.45 ಕಿಮೀ ದೂರದ 7.93 ಕೋಟಿ ರೂಪಾಯಿ ವೆಚ್ಚದ ಲಾಯಿಲ ಗ್ರಾಮದ ಲಾಯಿಲ- ಕನ್ನಾಜೆ- ಮೇಲಂತಬೆಟ್ಟು-ಕೋಟಿಕಟ್ಟೆ ರಸ್ತೆಯು ಅತ್ಯಂತ ಕಳಪೆ ಗುಣಮಟ್ಟದಿಂದ ಕೂಡಿದ್ದು , ಮಾಜಿ ಶಾಸಕ ಕೆ.ವಸಂತ ಬಂಗೇರ ಭೇಟಿ ನೀಡಿ ವೀಕ್ಷಿಸಿದರು.
ರಸ್ತೆಯು ಅತ್ಯಂತ ಕಳಪೆ ಮಟ್ಟದಿಂದ ಕೂಡಿದ್ದು , ಈ ಹಿಂದಿನ ರಸ್ತೆಗೆ ಮರು ಡಾಮರೀಕರಣ ಮಾಡಿದಂತಿದೆ. ಚಪ್ಪಲಿಯಿಂದ ಅಥವಾ ಕೋಲಿನಿಂದ ಎಬ್ಬಿಸಿದರೂ ಡಾಮರು ಕಿತ್ತು ಹೋಗುತ್ತಿದೆ. ರಸ್ತೆಯುದ್ದಕ್ಕೂ ಅಗತ್ಯವಿಲ್ಲದ ಕಡೆಗಳಲ್ಲಿ ತಡೆಗೋಡೆ ನಿರ್ಮಾಣ ಮಾಡಲಾಗಿದೆ. ಹೊಸ ರಸ್ತೆ ನಿರ್ಮಾಣಕ್ಕೆ ಬೇಕಾದ ಬೋಲ್ಡ್ರಸ್ ಜಲ್ಲಿ , ಬೇಬಿ ಜಲ್ಲಿ ಯಾವುದನ್ನೂ ಉಪಯೋಗ ಮಾಡದೇ ಕೇವಲ ಮರು ಡಾಮರೀಕರಣ ಮಾಡಲಾಗಿದೆ. ಡಾಮರೀಕರಣಗೊಂಡು ಕೇವಲ 2-3 ತಿಂಗಳಲ್ಲಿಯೇ ಕಿತ್ತು ಹೋಗಿದ್ದು , ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ರಸ್ತೆಯ ಅಗಲ ಕೂಡ ಅಲ್ಲಲ್ಲಿ ಕಡಿಮೆಯಿದ್ದು , ರಸ್ತೆ ಸಂಪೂರ್ಣ ಕಳಪೆಯಾಗಿದೆ.
ರೊಟ್ಟಿಯಂತೆ ಏಳುತ್ತಿದೆ ರಸ್ತೆ ಡಾಮರೀಕರಣ: ಲಾಯಿಲದಿಂದ ಮುಂಡೂರು ಗ್ರಾಮದ ಕೋಟಿಕಟ್ಟೆ ತನಕದ ರಸ್ತೆ ಸಂಪೂರ್ಣಗೊಂಡು , ರಸ್ತೆಯ ಬಗ್ಗೆ ಗುಣಮಟ್ಟ ನಿಯಂತ್ರಣ ಮಂಡಳಿ ಮೂಲಕ ರಸ್ತೆ ಕಾಮಗಾರಿ ಬಗ್ಗೆ ತನಿಖೆ ನಡೆಸಲಾಗಿದೆ. ಆದರೆ ರಸ್ತೆಯೂ ಅತ್ಯಂತ ಕಳಪೆ ಗುಣಮಟ್ಟದಿಂದ ಕೂಡಿದೆ.
ಸೇತುವೆಗೆ 3.30 ಕೋಟಿ ರೂಪಾಯಿ :
ಈ ರಸ್ತೆಯನ್ನು ಸಂಪರ್ಕಿಸುವ ಮಧ್ಯ ಭಾಗದಲ್ಲಿ ಬಜಕ್ರೆಸಾಲು ಎಂಬಲ್ಲಿ ಸೇತುವೆ ನಿರ್ಮಾಣ ಹಂತದಲ್ಲಿದ್ದು , ಈ ರಸ್ತೆಗೆ 3.30 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ಇದು ಬೆಳ್ತಂಗಡಿ ತಾಲೂಕಿನ ಅತ್ಯಂತ ದೊಡ್ಡ ಸೇತುವೆಯಂತಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ವಸಂತ ಬಂಗೇರ ಈ ಸಡಕ್ ಯೋಜನೆಯಲ್ಲಿ ಸುಮಾರು 4 ರಿಂದ 5 ಕೋಟಿ ಭೃಷ್ಟಾಚಾರ ನಡೆದಿದೆ. ಗುತ್ತಿಗೆದಾರ ಸಂಘ ಇತ್ತೀಚೆಗೆ ಆರೋಪಿಸಿದಂತೆ 40% ಕಮಿಷನ್ ಧಂದೆಯ ಮುಂದುವರಿದ ಭಾಗವಾಗಿ ಈ ಕಳಪೆ ಮಟ್ಟದ ರಸ್ತೆ ನಿರ್ಮಾಣ ಮಾಡಲಾಗಿದೆ . ಈ ಬಗ್ಗೆ ಮಾನ್ಯ ಲೋಕಾಯುಕ್ತ , ಎಸಿಬಿ ಗೆ ದೂರು ನೀಡಲಾಗುವುದು. ಪ್ರಧಾನಿ ನರೇಂದ್ರ ಮೋದಿಗೂ ತಾಲೂಕಿನ ಅಭಿವೃದ್ಧಿಯ ಕಳಪೆ ಕಾಮಗಾರಿಯ ಬಗ್ಗೆ ದಾಖಲೆ ಸಮೇತ ಹಾಗೂ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ , ಡಿ.ಕೆ ಶಿವಕುಮಾರ್ , ಹರೀಶ್ ಕುಮಾರ್ ಮೂಲಕ ಅಧಿವೇಶನದಲ್ಲಿ ಬೆಳ್ತಂಗಡಿ ಕಳಪೆ ಮಟ್ಟದ ಅಭಿವೃದ್ಧಿಯ ಧ್ವನಿ ಎತ್ತಲಾಗುವುದು ಎಂದರು.
ಈ ಸಂದರ್ಭದಲ್ಲಿ ಉಭಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ರಂಜನ್ ಜಿ ಗೌಡ , ಶೈಲೇಶ್ ಕುಮಾರ್ ಕುರ್ತೋಡಿ , ಸಿಪಿಐ(ಎಂ) ಮುಖಂಡ ಶೇಖರ್ ಲಾಯಿಲ ಉಪಸ್ಥಿತರಿದ್ದರು.