ಬೆಳ್ತಂಗಡಿ; ಜನರ ಪ್ರೀತಿ, ಅವರು ನಮ್ಮ ಮೇಲೆ ಇಟ್ಟಿರುವ ನಂಬಿಕೆ ಇವುಗಳೇ ಕ್ಷೇತ್ರದ ಅತಿ ದೊಡ್ಡ ಸಂಪತ್ತು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ನುಡಿದರು.
ಮೂರು ಮಂದಿ ಶಾಸಕರಿಂದ ಗೌರವಾರ್ಪಣೆಲಕ್ಷದೀಪೋತ್ಸವದ ಪ್ರಯುಕ್ತ ಉಜಿರೆಯಿಂದ ಧರ್ಮಸ್ಥಳವರೆಗೆ ನಡೆದ ಒಂಭತ್ತನೆಯ ವರ್ಷದ 'ಭಕ್ತರ ಪಾದಯಾತ್ರೆ'ಯನ್ನು ಸ್ವಾಗತಿಸಿ, ಅಮೃತವರ್ಷಿಣಿ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡುತ್ತಿದ್ದರು.
ಭಕ್ತರ ಪ್ರೇರಣೆಯಿಂದ, ಪ್ರಧಾನಿ ಮೋದಿಯವರು ಶ್ರೀ ಕ್ಷೇತ್ರಕ್ಕೆ ಬಂದು ಆಡಿದ ಮಾತಿನಿಂದ, ರುಡ್ಸೆಟ್ ಕಾರ್ಯಕ್ರಮದಲ್ಲಿ ದೇಶದ ನಾನಾ ಭಾಗದ ಜನರು ಬಂದವರು ಪುಟ್ಟ ಗ್ರಾಮದಲ್ಲಿರುವ ಕ್ಷೇತ್ರದ ಬಗ್ಗೆ, ಧರ್ಮಾಧಿಕಾರಿಯ ಬಗ್ಗೆ ಆಡುವ ಮಾತುಗಳು ನಮ್ಮನ್ನು ಪುಳಕಿತಗೊಳಿಸುತ್ತದೆ. ಈ ಎಲ್ಲಾ ಪ್ರೇರಣೆಯಿಂದ
ಜನಹಿತವಾಗುವ, ಜನಪರವಾಗುವ ಮತ್ತು ಜನಕಲ್ಯಾಣವಾಗುವ ಯಾವುದೇ ಯೋಜನೆ, ಮತ್ತು ಕಾರ್ಯಕ್ರಮಗಳು ನಮ್ಮ ಗಮನಕ್ಕೆ ಬಂದರೂ ನಾವು ಅದನ್ನು ಬಿಟ್ಟಾಕದೆ ಅನುಷ್ಠಾನಿಸುತ್ತೇವೆ. ಭಕ್ತರ ಪ್ರಾರ್ಥನೆ ಮಾತ್ರ ನಮಗೆ ಸಾಕು ಎಂದರು.ಟೀಕೆಗಳು ಅನೇಕ ಬಂದವು ಅದೇ ರೀತಿ ಪದ್ಮವಿಭೂಷಣ ಪ್ರಶಸ್ತಿ ಕೂಡಾ ಈ ಅವಧಿಯಲ್ಲಿ ಬಂದಿದೆ. ಎಲ್ಲರ ಪ್ರಾರ್ಥನೆಯ ಫಲವಾಗಿ ಇವತ್ತು ದೇಶಾಧ್ಯಂತ 585 ರುಡ್ ಸೆಟಿ ಸ್ವ ಉದ್ಯೋಗ ತರಬೇತಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ನಾನು ಭಾರತ ಸರಕಾರದ ಅಪೇಕ್ಷೆಯಂತೆ ಅಧ್ಯಕ್ಷನಾಗಿದ್ದೇನೆ. ಗ್ರಾಮಾಭಿವೃದ್ದಿ ಯೋಜನೆಯಲ್ಲಿ ಅನೇಕ ಪ್ರಗತಿಯಾಗಿದ್ದು, ಎಂಟು ಸಾವಿರ ಇದ್ದ ಕುಟುಂಬಗಳ ಸಂಖ್ಯೆ ಈಗ 50 ಲಕ್ಷಕ್ಕೆ ಮುಟ್ಟಿದೆ. ಕೃಷಿಯಲ್ಲಿ ಯಂತ್ರಗಳ ಪ್ರಯೋಗ ಸೇರಿದಂತೆ ಅನೇಕ ಪ್ರಗತಿ ಕಂಡಿದ್ದೇವೆ ಎಂದರು. ಯಕ್ಷಗಾನದ ವೇದಿಕೆಯಲ್ಲಿ ಇಂದಿನ ಕಾರ್ಯಕ್ರಮ ನಡೆಯುತ್ತಿದ್ದು, ಇಲ್ಲಿನ ಸಂದೇಶದಂತೆ ಅಧರ್ಮ ನಾಶ ಮತ್ತು ಧರ್ಮ ಸಂಸ್ಥಾಪನೆಯಾಗುವ ನಿಟ್ಟಿನಲ್ಲಿ ಸಾತ್ವಿಕ ಶಕ್ತಿ ಜಾಗೃತವಾಗಿದೆ ಎಂದು ಹೆಗ್ಗಡೆಯವರು ಹೇಳಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್, ಲಕ್ಷದೀಪೋತ್ಸವದೊಂದಿಗೆ ನಮ್ಮೊಳಗಿನ ಸಾತ್ವಿಕ ಶಕ್ತಿ ಜಾಗೃತವಾಗಿದೆ. ಪೂಜ್ಯ ಹೆಗ್ಗಡೆಯವರ ಬಗ್ಗೆ ನಮ್ಮಲ್ಲಿರುವ ಕೃತಜ್ಞತಾ ಭಾವ, ಗೌರವ, ಶ್ರದ್ಧೆ, ಪ್ರೀತಿ ಈ ಪಾದಯಾತ್ರೆಯಿಂದಾಗಿ ಏಕೀಕೃತಗೊಂಡಿದೆ. ಧರ್ಮ ಯಾವತ್ತೂ ಗೆದ್ದೇ ಗೆಲ್ಲುತ್ತದೆ ಎಂಬುದು ಈ ಪಾದಯಾತ್ರೆಯಿಂದ ನಮಗೆ ಅನುಭವಕ್ಕೆ ಬಂದಿದೆ. ಇದು ಲಕ್ಷ ದೀಪೋತ್ಸವದ ಭಾಗವಾಗಿ ವೃತದ ರೂಪದಲ್ಲಿ ಇದನ್ನು ಪಾಲಿಸಿಕೊಂಡು ಬರುತ್ತಿದ್ದಾರೆ ಎಂದರು.
ಮಾಣಿಲ ಶ್ರೀ ಧಾಮದ ಯತಿಗಳಾದ ಮೋಹನದಾಸ ಸ್ವಾಮೀಜಿ, ವಿಧಾನ ಸಭಾ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಶಾಸಕ ಹರೀಶ್ ಕುಮಾರ್, ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅಡಳಿತ ಮುಕ್ತೇಸರ ಶರತ್‌ಕೃಷ್ಣ ಪಡುವೆಟ್ನಾಯ ಉಪಸ್ಥಿತರಿದ್ದರು. ಹೇಮಾವತಿ ಹೆಗ್ಗಡೆಯವರು, ಡಿ.ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು.
ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕರಲ್ಲೋರ್ವರಾದ ಮೋಹನ್ ಕುಮಾರ್ ಪ್ರಸ್ತಾವನೆಗೈದು ಸ್ವಾಗತಿಸಿದರು.
ಧರ್ಮಸ್ಥಳ ಗ್ರಾ.ಪಂ ಉಪಾಧ್ಯಕ್ಷ ಶ್ರೀನಿವಾಸ ರಾವ್ ಕಾರ್ಯಕ್ರಮ ನಿರೂಪಿಸಿದರು. ಗ್ರಾ.ಯೋ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ವಂದನಾರ್ಪಣೆಗೈದರು.