ಬೆಳ್ತಂಗಡಿ; 2020-21 ಸಾಲಿನಲ್ಲಿ ನಡೆಯಲಿರುವ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಗೆ ರಾಜ್ಯ ಚುನಾವಣಾ ಆಯೋಗವು ಕ್ಷೇತ್ರವಾರು ಮೀಸಲಾತಿ ವಿಂಗಡಿಸಿ ಕರಡು ಪ್ರತಿಯನ್ನು ಪ್ರಕಟಿಸಿದ್ದು , ದ.ಕ. ಜಿಲ್ಲಾ ಪಂಚಾಯತ್‌ಗೆ ಪ್ರಕಟಿಸಿರುವ ಮೀಸಲಾತಿ ಪಟ್ಟಿಯು ಅಸಮರ್ಪಕವಾಗಿದೆ . 8 ಜಿಲ್ಲಾ ಪಂಚಾಯತ್ ಕ್ಷೇತ್ರಗಳನ್ನೊಳಗೊಂಡ ಬೆಳ್ತಂಗಡಿ ತಾಲೂಕಿನಲ್ಲಿ ಎಸ್‌ಸಿ, ಎಸ್‌ಟಿ ಗಳನ್ನು ಅವಕಾಶ ವಂಚಿತರನ್ನಾಗಿಸಿದೆ ಎಂದು ತಾಲೂಕು ನಲಿಕೆಯವರ ಸಮಾಜ ಸೇವಾ ಸಂಘದ ಅಧ್ಯಕ್ಷ ಎಸ್. ಪ್ರಭಾಕರ ಶಾಂತಿಕೋಡಿ ಆರೋಪಿಸಿದರು.
ತಮ್ಮ ಸಂಘಟನೆ ವತಿಯಿಂದ ನಗರದ ವಾರ್ತಾಭವನದಲ್ಲಿ ಬುಧವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಸರಕಾರ ಈಗ ಬಿಡುಗಡೆಗೊಳಿಸಿರುವ ಕರಡು ಪ್ರತಿಗೆ ನಮ್ಮ ಆಕ್ಷೇಪವಿದ್ದು ಸದ್ರಿ ಪಟ್ಟಿಯನ್ನು ರದ್ದುಗೊಳಿಸಿ ಜನಸಂಖ್ಯಾ ಆಧಾರಿತ ಪರಿಷ್ಕತ ಪಟ್ಟಿಯನ್ನು ಪ್ರಕಟಿಸಬೇಕು ಎಂದು ನಾವು ಆಗ್ರಹಿಸುತ್ತೇವೆ ಎಂದು ಅವರು ತಿಳಿಸಿದರು.
ಗೋಷ್ಠಿಯಲ್ಲಿ ನಲಿಕೆ ಸಮಾಜ ಸೇವಾ ಸಂಘದ ಉಪಾಧ್ಯಕ್ಷ ರಾಮು ಶಿಶಿಲ, ದ.ಕ ಜಿಲ್ಲಾ ಸಮಿತಿ ಸದಸ್ಯ ಬಿ.ಕೆ ತಾರಾನಾಥ, ಯುವ ವೇದಿಕೆ ಮಾಜಿ ಅಧ್ಯಕ್ಷ ಎಮ್.ಎಲ್ ರವಿ ಮುಂಡಾಜೆ, ಮಾಜಿ ಕಾರ್ಯದರ್ಶಿ ಅನಂತು ಮುಂಡಾಜೆ ಉಪಸ್ಥಿತರಿದ್ದರು.