ಬೆಳ್ತಂಗಡಿ; ದೊಡ್ಡ ಮಗಳನ್ನು 9 ತಿಂಗಳ ಹಿಂದೆ ವಿವಾಹವಾಗಿದ್ದ ನವ ವಿವಾಹಿತ ನಾದಿನಿಯ ಜೊತೆ ಸಲುಗೆಯಿಂದಿದ್ದು ಇದೀಗ ಪತ್ನಿಯನ್ನು ತವರು ಮನೆಯಲ್ಲಿ ಬಿಟ್ಟು ನಾದಿನಿಯನ್ನು ಕರೆದುಕೊಂಡುಹೋದ ಘಟನೆ ಗುರುವಾರ ಬೆಳ್ತಂಗಡಿ ತಾಲೂಕಿನ ಕನ್ಯಾಡಿ ಗ್ರಾಮದ ಕೈಕಂಬ ಎಂಬಲ್ಲಿಂದ ವರದಿಯಾಗಿದೆ. ನಾಪತ್ತೆಯಾಗಿರುವ ಯುವತಿಯ ತಂದೆ ಮುಹಮ್ಮದ್ ಅವರು ಈ ಬಗ್ಗೆ ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದಾರೆ.
ಮುಹಮ್ಮದ್ ಅವರ ಪುತ್ರಿ ಸೌಧಾ ಎಂಬಾಕೆಯನ್ನು 9 ತಿಂಗಳ ಹಿಂದೆ ಮುಸ್ತಫಾ ಎಂಬಾತನಿಗೆ ವಿವಾಹ ಮಾಡಿಕೊಟ್ಟಿದ್ದು, ಮಗಳು ಹಾಗೂ ಅಳಿಯ ಆಗಾಗ ಮಾವನ ಮನೆಗೆ ಬಂದು ಹೋಗುತ್ತಿದ್ದರು. ಈ ಸಂದರ್ಭ ನಾದಿನಿ ರೈಹಾನಳ ಜೊತೆಗೆ ಅಳಿಯ ಮುಸ್ತಫಾ ಸಲುಗೆಯಿಂದ ಇದ್ದುದ್ದಲ್ಲದೇ ಪೋನ್ ಮುಖಾಂತರ ಕೂಡ ಮಾತನಾಡುತ್ತಿದ್ದರು. ಇತ್ತೀಚೆಗೆ ದೊಡ್ಡ ಮಗಳು ಹಾಗೂ ಅಳಿಯನಿಗೆ ಮನಸ್ತಾಪ ಉಂಟಾಗಿ, ಪತ್ನಿ ಸೌಧಾ ತವರು ಮನೆಯಲ್ಲಿಯೇ ಇದ್ದಳು. ಹೀಗಿರುವಂತೆ ಜು.8 ರಂದು ಬೆಳಿಗ್ಗೆ 6-45 ಗಂಟೆಗೆ ಮುಸ್ತಫಾ ಹಾಗೂ ಅವನ ತಾಯಿ ಕಾರಿನಲ್ಲಿ ಕನ್ಯಾಡಿಯ ಕೈಕಂಬದಲ್ಲಿರುವ ಮಾವನ ಮನೆಗೆ ಬಂದಿದ್ದು, ಆ ಸಮಯ ನಾದಿನಿ ರೈಹಾನಳು ಮನೆಯಲ್ಲಿ ಯಾರಿಗೂ ಹೇಳದೇ ಬ್ಯಾಗೊಂದನ್ನು ಹಿಡಿದುಕೊಂಡು ಬಾವನ ಜೊತೆ ಕಾರುಹತ್ತಿ ಹೋಗಿದ್ದಾಳೆ. ಘಟನೆ ಬಗ್ಗೆ ಆಕೆಯ ತಂದೆ, ತನ್ನ ಕಿರಿಯ ಪುತ್ರಿ ಈವರೆಗೆ ವಾಪಾಸು ಮನೆಗೂ ಬಾರದೇ ಕಾಣೆಯಾಗಿದ್ದಾಳೆ ಎಂದು ಠಾಣೆಗೆ ನೀಡಿರುವ ದೂರಿನಲ್ಲಿ ವಿವರಿಸಿದ್ದಾರೆ.
ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಆರಂಭವಾಗಿದೆ.