ಮುಂಡಾಜೆ ಗ್ರಾಮದ ಮುಂಡ್ರುಪ್ಪಾಡಿ ವೇದಮೂರ್ತಿ ಸುಬ್ರಾಯ ಅನಂತ ಗೋಖಲೆ ಅವರ ಪುತ್ರರಾಗಿ ಜನಿಸಿದ್ದ ಅವರು ಬಳಿಕ ಕಲ್ಲಹಿತ್ಲು ಎಂಬಲ್ಲಿ ಕೃಷಿಕ್ಷೇತ್ರ ಮತ್ತು ಮನೆ ಹೊಂದಿದ್ದರು. ಪ್ರಸ್ತುತ ಗ್ರಾಮದ ಕೂಳೂರು ಎಂಬಲ್ಲಿ ನೆಲೆಸಿದ್ದರು.
ಮೂಲತಃ ಕೃಷಿಕರು. ಜೊತೆಗೆ ಸಾಮಾಜಿಕ - ಧಾರ್ಮಿಕ ಕ್ಷೇತ್ರದಲ್ಲಿ ಅಪ್ರತಿಮವಾಗಿ ತನ್ನನ್ನು ತಾನು ತೊಡಗಿಸಿಕೊಂಡಿದ್ದ ಎನ್.ಎಸ್ ಗೋಖಲೆ ಅವರು ಇಳಿವಯಸ್ಸಿನಲ್ಲೂ ಸ್ಪೂರ್ತಿದಾಯಕ ಚಟುವಟಿಕೆಯಲ್ಲಿ ಇದ್ದರು. ಮುಂಡಾಜೆ ಶ್ರೀ ಪರಶುರಾಮ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರೂ ಆಗಿ ಕ್ರಿಯಾಶೀಲ ಸೇವೆ ಸಲ್ಲಿಸಿದ್ದರು. ಶತಮಾನೋತ್ಸವ ಸಂಭ್ರಮ ಆಚರಿಸಿದ್ದ ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಹಿಂದೆ ಅಧ್ಯಕ್ಷರೂ ಆಗಿದ್ದ ಅವರು ಅಭಿವೃದ್ದಿಯ ಮಹಾಕನಸು ಕಂಡಿದ್ದರು. ಅವರ ಆಲೋಚನಾ ಕ್ರಿಯಾಶಕ್ತಿಯ ಫಲವಾಗಿ ಸೋಮಂತಡ್ಕ ಪೇಟೆಯಲ್ಲಿ ಸಹಕಾರಿ ಸಂಘದ ಶತಮಾನೋತ್ಸವ ವಾಣಿಜ್ಯ ಸಂಕೀರ್ಣ ನಿರ್ಮಾಣವಾಗಿತ್ತು.
ಅದರ ಉದ್ಘಾಟನೆಯ ವೇಳೆ ಅವರು ಆಡಳಿತ ಮಂಡಳಿಯಲ್ಲಿ ಇಲ್ಲದೇ ಇದ್ದರೂ ಈಗಿನ ಮಂಡಳಿಯವರ ಜೊತೆ ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು. ಈ ಸಂದರ್ಭ ಅವರು ಜಿಲ್ಲೆಯ ಸಹಕಾರಿ ಸಂಘಗಳ ಮಾಹಿತಿ ಕೈಪಿಡಿ ರಚಿಸಿ ಬಿಡುಗಡೆಗೊಳಿಸಿದ್ದರು. ಸಮಾರಂಭದಲ್ಲಿ ಅವರನ್ನು ಸಹಕಾರಿ ಬಂಧುಗಳ ಪರವಾಗಿ ಡಾ. ಎಂ.ಎನ್ ರಾಜೇಂದ್ರ ಕುಮಾರ್ ಸನ್ಮಾನಿಸಿದ್ದರು.
ಸಹಕಾರಿ ಕ್ಷೇತ್ರದಲ್ಲಿ ದೀರ್ಘ ಮತ್ತು ಆಳವಾದ ಅನುಭವ ಹೊಂದಿದ್ದ ಅವರು ಡಿಸಿಸಿ ಬ್ಯಾಂಕ್, ಅಪೆಕ್ಸ್ ಬ್ಯಾಂಕ್, ಮಾಸ್ ಲಿಮಿಟೆಡ್, ಟಿಎಪಿಸಿಎಂಎಸ್, ಕ್ಯಾಂಪ್ಕೋ ಸಹಿತ ವಿವಿಧ ಸಂಸ್ಥೆಗಳಲ್ಲಿ ಹೆಜ್ಜೆ ಗುರುತು ಮೂಡಿಸಿದ್ದರು.
ಕೃಷಿಕರನ್ನು ಋಣಮುಕ್ತರನ್ನಾಗಿಸುವ ದೂರದೃಷ್ಟಿಯ ಯೋಜನೆ ಪರಿಕಲ್ಪಿಸಿದ್ದ ಅವರು ತಾನು ಮುಂಡಾಜೆ ಸಹಕಾರಿ ಸಂಸ್ಥೆಯ ಅಧ್ಯಕ್ಷರಾಗಿದ್ದಾಗ ಪ್ರತ್ಯೇಕ ನಿಧಿ ಸ್ಥಾಪಿಸಿದ್ದರು. ಸಾಲ ತೀರುವಳಿ ಯೋಜನೆ ಎಂಬ ಅವರ ಆಲೋಚನೆಗೆ ಕೇಂದ್ರ ಮತ್ತು ರಾಜ್ಯ ಸರಕಾರದಿಂದಲೇ ಬಜೆಟ್ ಮೂಲಕ ನಿಧಿ ದೊರೆಯುವಂತೆ ಮಾಡಲು ಅನೇಕ ಪ್ರಯತ್ನಗಳನ್ನು ಮಾಡಿದ್ದರು.
ಅಪೂರ್ವ ಸಂಘಟಕರೂ ಆಗಿದ್ದ ಎನ್.ಎಸ್ ಗೋಖಲೆ ಅವರು ಯಕ್ಷಗಾನ ತಾಳಮದ್ದಳೆ ಕ್ಷೇತ್ರದಲ್ಲೂ ಗುರುತಿಸಿಕೊಂಡು ಉತ್ತಮ ಅರ್ಥದಾರಿಯಾಗಿಯೂ ಪಾತ್ರ ನಿರ್ವಹಿಸುತ್ತಿದ್ದರು.
ಮೃತರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.