ಬೆಳ್ತಂಗಡಿ: ಮರೋಡಿ ಗ್ರಾಮದ ಕೂಕ್ರಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನೂತನ ಕಟ್ಟಡ ನಿರ್ಮಿಸಲು ಶಾಸಕ ಹರೀಶ್ ಪೂಂಜ ರೂಪಾಯಿ 45 ಲಕ್ಷ ಮಂಜೂರು ಮಾಡಿದ್ದಾರೆ. ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ ಎಂದು ಕೂಕ್ರಬೆಟ್ಟು ಸರ್ಕಾರಿ ಶಾಲೆ ಉಳಿಸಿ ಬೆಳೆಸಿ ಸಮಿತಿ ಅಧ್ಯಕ್ಷ ಜಯಂತ ಕೋಟ್ಯಾನ್ ಹೇಳಿದರು.
ಶಾಲಾ ಆರಂಭೋತ್ಸವ, ಆನ್‌ಲೈನ್ ತರಗತಿ ಹಾಗೂ ನೂತನ ಕಟ್ಟಡ ನಿರ್ಮಾಣದ ಕುರಿತು ಜೂನ್ 28ರಂದು ನಡೆದ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಎರಡು ವರ್ಷಗಳ ಹಿಂದೆ 16 ಮಕ್ಕಳಿದ್ದ ಈ ಶಾಲೆಯಲ್ಲಿ ಈಗ ನೂರಕ್ಕೂ ಅಧಿಕ ಮಕ್ಕಳಿರುವುದು ಆಶಾದಾಯಕ ಬೆಳವಣಿಗೆ. ಕೂಕ್ರಬೆಟ್ಟು ಶಾಲೆಯನ್ನು ರಾಜ್ಯಕ್ಕೆ ಮಾದರಿಯಾಗಿ ಬೆಳೆಸಬೇಕೆಂಬುದು ಶಾಸಕ ಹರೀಶ್ ಪೂಂಜ ಮತ್ತು ಸರ್ಕಾರಿ ಶಾಲೆ ಉಳಿಸಿ ಬೆಳೆಸಿ ಸಮಿತಿ ರಾಜ್ಯಾಧ್ಯಕ್ಷ ಪ್ರಕಾಶ್ ಅಂಚನ್ ಅವರ ಇಚ್ಛೆಯಾಗಿದೆ ಎಂದು ತಿಳಿಸಿದರು.
ನಮ್ಮ ಶಾಲೆಗೆ ಸುಸಜ್ಜಿತ ಕಟ್ಟಡವನ್ನು ನಿರ್ಮಿಸಲು ಇನ್ನೂ 75 ಲಕ್ಷ ರೂಪಾಯಿ ಅನುದಾನ ನೀಡುವ ಭರವಸೆಯನ್ನು ಶಾಸಕರು ನೀಡಿದ್ದಾರೆ. ಪ್ರಕಾಶ್ ಅಂಚನ್ ಅವರು ದಡ್ಡಲಕಾಡು ಶ್ರೀದುರ್ಗಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ರೂಪಾಯಿ 5ಲಕ್ಷ ನೀಡುವ ಭರವಸೆ ನೀಡಿದ್ದಾರೆ. ಈಗಾಗಲೇ ಶಾಸಕರ ಪ್ರಯತ್ನದಿಂದ 10ರೂಪಾಯಿ ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಹೈಟೆಕ್ ಶೌಚಾಲಯದ ಕಾಮಗಾರಿ ಮುಕ್ತಾಯದ ಹಂತದಲ್ಲಿದೆ ಎಂದು ಹೇಳಿದರು.
‘ಕೂಕ್ರಬೆಟ್ಟು ಶಾಲೆಯಲ್ಲಿ 1ನೇ ತರಗತಿಯಿಂದ ಆಂಗ್ಲ ಮಾಧ್ಯಮ ಮತ್ತು ಕನ್ನಡ ಮಾಧ್ಯಮದಲ್ಲಿ ಮಕ್ಕಳಿಗೆ ಶಿಕ್ಷಣ ನೀಡಲು ಇಲಾಖೆ ಅನುಮತಿ ನೀಡಿದೆ’ ಎಂದು ಮುಖ್ಯಶಿಕ್ಷಕಿ ಸುಫಲಾ ಹೇಳಿದರು.
ಜುಲೈ 1ರಂದು ಶಾಲಾ ಆರಂಭೋತ್ಸವ ನಡೆಸುವುದು; ಗೂಗಲ್ ಮೀಟ್‌ನಲ್ಲಿ ಆನ್‌ಲೈನ್ ತರಗತಿ ನಡೆಸುವುದು ಎಂದು ತೀರ್ಮಾನಿಸಲಾಯಿತು.
ನಿವೃತ್ತ ಶಿಕ್ಷಕ ಅಣ್ಣಪ್ಪ ಹೆಗ್ಡೆ, ಮರೋಡಿ ಗ್ರಾಮ ಪಂಚಾಯಿತ್ ಮಾಜಿ ಅಧ್ಯಕ್ಷ ಎಂ. ಎಸ್. ಪೂಜಾರಿ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ರಾಜು ಪೂಜಾರಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರದೀಶ್ ಮರೋಡಿ, ಗ್ರಾಮ ಪಂಚಾಯಿತಿ ಸದಸ್ಯರಾದ ಅಶೋಕ ಪೂಜಾರಿ ಮತ್ತು ಶುಭರಾಜ ಹೆಗ್ಡೆ ಆಂಗ್ಲ ಭಾಷಾ ಶಿಕ್ಷಕಿ ಶುಭಾಶ್ರೀ, ಸರ್ಕಾರಿ ಶಾಲೆ ಉಳಿಸಿ ಬೆಳೆಸಿ ಸಮಿತಿ ಸದಸ್ಯರು, ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಮಕ್ಕಳ ಪೋಷಕರು ಉಪಸ್ಥಿತರಿದ್ದರು.